ಮಂಗಳೂರು: ಭಾರತದ ಚುನಾವಣಾ ಆಯೋಗದ ಆದೇಶದಂತೆ ದ.ಕ. ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣ (ಎಸ್‌ಐಆರ್) ಜೂ.30ರಿಂದ ಬಿಎಲ್‌ಒಗಳ ಮನೆ ಭೇಟಿಯ ಮೂಲಕ ಆರಂಭಗೊಳ್ಳಲಿದೆ. ಈ ಮನೆ ಭೇಟಿ ಪ್ರಕ್ರಿಯೆ ಜು.29ರ ವರೆಗೆ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ, ಚುನಾವಣಾಧಿಕಾರಿಯೂ ಆಗಿರುವ ದರ್ಶನ್ ಎಚ್.ವಿ. ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಇದ್ದರು. ಈ ದಾಖಲೆ ಸಲ್ಲಿಸಬಹುದು: ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಉದ್ಯಮದ ಕಾಯಂ ಉದ್ಯೋಗಿ, ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ, ಪಿಂಚಣಿ ಸಂದಾಯ ಆದೇಶ, ಭಾರತದಲ್ಲಿ 1987ರ ಜು.1ರ ಮೊದಲು ಸರ್ಕಾರ, ಸ್ಥಳೀಯ ಪ್ರಾಧಿಕಾರಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ, ಜೀವವಿಮಾ ನಿಗಮ, ಸಾರ್ವಜನಿಕ ವಲಯ ಉದ್ಯಮಗಳು ನೀಡಿರುವ ಗುರುತಿನ ಚೀಟಿ, ಪ್ರಮಾಣ ಪತ್ರ ಅಥವಾ ದಸ್ತಾವೇಜು, ಸಕ್ಷಮ ಪ್ರಾಧಿಕಾರ ನೀಡಿರುವ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾನಿಲಯಗಳು ನೀಡಿರುವ ಮೆಟ್ರಿಕ್ಯುಲೇಶನ್ ಶೈಕ್ಷಣಿಕ ಪ್ರಮಾಣ ಪತ್ರ, ರಾಜ್ಯ ಸಕ್ಷಮ ಪ್ರಾಧಿಕಾರ ನೀಡಿರುವ ಖಾಯಂ ನಿವಾಸ ಪ್ರಮಾಣ ಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರಿ ನೀಡಿರುವ ಒಬಿಸಿ, ಪ.ಜಾ., ಪ.ಪಂ. ಅಥವಾ ಯಾವುದೇ ಜಾತಿ ಪ್ರಮಾಣ ಪತ್ರ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್, ರಾಜ್ಯ, ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ರಿಜಿಸ್ಟರ್, ಸರ್ಕಾರ ನೀಡಿರುವ ಯಾವುದೇ ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರ
ಪರಿಷ್ಕರಣೆ ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಆಕರಿಗಳ ಅಧಿಕೃತ ಜಾಲತಾಣಗಳು, ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಹಾಗೂ ಭಾರತದ ಚುನಾವಣಾ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.ಪ್ರಕ್ರಿಯೆ ಹೇಗೆ?: ಜೂ.4ರಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 18,05,189 ಮತದಾರರಿದ್ದು, ಜೂ. 16ರವರೆಗೆ ಸೇರ್ಪಡೆಗೊಳ್ಳುವ ಎಲ್ಲ ಮತದಾರರು ಈ ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡುತ್ತಾರೆ. ಮತದಾರರ ಮನೆ ಬಾಗಿಲಿಗೆ ಬಿಎಲ್‌ಒಗಳು ತೆರಳಿ ಗಣತಿ ನಮೂನೆಯ 2 ಪ್ರತಿಗಳನ್ನು ನೀಡಲಿದ್ದಾರೆ. ಬಿಎಲ್‌ಒಗಳ ಹಸ್ತಾಕ್ಷರವಿರುವಂತಹ ಒಂದು ಪ್ರತಿಯನ್ನು ಮತದಾರರು ತಮ್ಮ ಬಳಿ ಇರಿಸಿಕೊಂಡು ಮತ್ತೊಂದು ಪ್ರತಿಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ಇರುವಂತೆ ಹೆಸರು, ಮತಗಟ್ಟೆಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಆ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ಮತದಾರರ ಭಾವಚಿತ್ರ ಹಳೆಯದಾಗಿದ್ದರೆ, ಬಿಎಲ್‌ಗಳು ನೀಡಿರುವ ಪ್ರತಿಯೊಂದಿಗೆ ಹೊಸ ಭಾವಚಿತ್ರ ನೀಡಬಹುದು. 2002ರ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಭರ್ತಿ ಮಾಡಲು ಮತದಾರರಿಗೆ ಸಹಕರಿಸಲು ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಸೌಕರ್ಯ ಕೇಂದ್ರ (ವೋಟರ್ ಫೆಸಿಲಿಟೇಶನ್ ಸೆಂಟರ್)ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು. ಎಸ್‌ಐಆರ್ ಪ್ರಕ್ರಿಯೆ ವೇಳಾಪಟ್ಟಿ
-ಆ.5ರಿಂದ ಸೆ.4 ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ.
-ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ.