- ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಶುರು: ಗಂಗಾಧರ ಸ್ವಾಮಿ । ಹೆಸರು ಸೇರಿಸಲು, ತೆಗೆದು ಹಾಕಲು, ಮ್ಯಾಪಿಂಗ್‌ಗೆ ಜೂ.16ರವರೆಗೆ ಅವಕಾಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ **(SIR)** ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತೆಗೆದು ಹಾಕಲು ಹಾಗೂ ಮ್ಯಾಪಿಂಗ್ ಮಾಡಲು ಜೂ.16ರವರೆಗೆ ಅವಕಾಶವಿದೆ. ಅನಂತರ ಪೋರ್ಟಲ್ ಫ್ರೀಜ್ ಆಗಲಿದೆ. ಕರಡು ಮತದಾರರ ಪಟ್ಟಿ (ಡ್ರಾಫ್ಟ್ ರೋಲ್) ಪ್ರಕಟ ಆಗುವವರೆಗೂ ಯಾವುದೇ ಬದಲಾವಣೆಗೂ ಅವಕಾಶ ಇಲ್ಲ ಎಂದರು.
ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದರೆ ಸೆ.4ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿ ಪ್ರಕಟಣೆಯನ್ನು ಅ.7ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಲಿದೆ. ಎಸ್ಐಆರ್ ಸುಲಭ ವಿಧಾನವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, 1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರು ಸ್ವಯಂ ಜನ್ಮ ದಿನಾಂಕ, ಸ್ಥಳ ಗುರುತಿಸುವ 12 ದಾಖಲೆಗಳಲ್ಲಿ ಒಂದನ್ನು ನೀಡಬೇಕು. 2.12.2004 ರವರೆಗಿನ ಜನ್ಮ ದಿನಾಂಕದವರು ಸ್ವಯಂ ಜನ್ಮ ದಿನಾಂಕ, ಸ್ಥಳ ದೃಢೀಕರಿಸುವ ದಾಖಲೆ, ತಂದೆ ಅಥವಾ ತಾಯಿ ಹುಟ್ಟಿದ ದಿನಾಂಕ, ಸ್ಥಳವನ್ನು ದೃಢಪಡಿಸುವ ದಾಖಲೆ ನೀಡಬೇಕು ಎಂದು ತಿಳಿಸಿದರು.
ಮತದಾರರ ನೋಂದಣಿ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಸಾರ್ವಜನಿಕರು ಹಾಗೂ 18 ವರ್ಷ ತುಂಬಿದ ಯುವ ಮತದಾರರು ಹೆಸರು ಸೇರ್ಪಡೆಗಾಗಿ ಇನ್ನು ಮುಂದೆ ಭೌತಿಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯ ಆಯಾ ಭಾಗದ ಬಿಎಲ್‍ಒಗಳ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ, ಆನ್‍ಲೈನ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಹೆಸರು ಮತ್ತು ಸಣ್ಣಪುಟ್ಟ ತಿದ್ದುಪಡಿಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರ ಗೊಂದಲ ಹಾಗೂ ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವೋಟರ್ ಫೆಸಿಲಿಟೇಶನ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ. ದಾವಣಗೆರೆ ಉತ್ತರ- ದಕ್ಷಿಣ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾಲಿಕೆ ವಿಭಾಗೀಯ ಕಂದಾಯ ಕಚೇರಿಗಳಿರುವ 2 ವಲಯಗಳ ಕಚೇರಿಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇಂಟರ್‌ನೆಟ್ ಅಥವಾ ಕಂಪ್ಯೂಟರ್ ಜ್ಞಾನವಿಲ್ಲದವರು ಈ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಸಹಭಾಗಿತ್ವ (BLA ನೇಮಕ):
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮತ್ತಿತರರು ಇದ್ದರು.
(ಬಾಕ್ಸ್)
* ಎಸ್ಐಆರ್ ಅಂದ್ರೆ ಹೆಸರು ಕೈಬಿಡೋದಲ್ಲ ಎಸ್ಐಆರ್ ಎಂದರೆ ಮತದಾರರ ಪಟ್ಟಿಯಿಂದ ಯಾರ ಹೆಸರನ್ನೂ ಕೈಬಿಡುವುದಿಲ್ಲ. ಸಾರ್ವಜನಿಕರು ಬಿಎಲ್‍ಒಗಳು ಮನೆಗೆ ಬಂದಾಗ ಸೂಕ್ತ ಮಾಹಿತಿ ನೀಡಿ ಸಹಕರಿಸಿ. ಒಂದು ವೇಳೆ ಹೆಸರು ಬಿಟ್ಟು ಹೋಗಿದ್ದರೆ ಜನ್ಮ ದಿನಾಂಕ ದೃಢೀಕರಣ ಪತ್ರ, ಪಡಿತರ ಚೀಟಿ, ,ನರೇಗಾ ಕಾರ್ಡ್ ನೀಡಿ ಹೆಸರು ಸೇರಿಸಬಹುದು. ಆದರೆ, ಆಧಾರ್ ಕಾರ್ಡನ್ನು ಕೇವಲ ಗುರುತಿನ ಚೀಟಿ ಆಗಿ ಮಾತ್ರ ಪರಿಗಣಿಸಲಾಗುವುದು, ಅದು ವಾಸಸ್ಥಳದ ದಾಖಲೆಯಲ್ಲ. ಅರೆ ನ್ಯಾಯಾಂಗ ಪ್ರಕ್ರಿಯೆಯಂತೆ ಮತದಾರರ ಪಟ್ಟಿಗೆ ಸಂಬಂಧಿಸಿದ ಸಾರ್ವಜನಿಕರ ಆಕ್ಷೇಪಣೆಗಳನ್ನು ಇಆರ್‌ಒ ಮಟ್ಟದಲ್ಲಿ ವಿಚಾರಣೆ ನಡೆಸಿ ಬಗೆಹರಿಸಲಾಗುವುದು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಕಿವಿಗೊಡದೇ ವಿಶೇಷ ಪರಿಷ್ಕರಣೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿ ಗಂಗಾಧರಸ್ವಾಮಿ ಸೂಚಿಸಿದರು.- - -
-2ಕೆಡಿವಿಜಿ3, 4:ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.