ಮತದಾರರ ಶುದ್ಧೀಕರಣವೇ ಎಸ್‌ಐಆರ್‌ ಪ್ರಕ್ರಿಯೆ: ಕೇಂದ್ರ ಸಚಿವ ಜೋಶಿ

KannadaprabhaNewsNetwork |  
Published : Dec 08, 2025, 02:00 AM IST
ಹುಬ್ಬಳ್ಳಿಯ ಅರವಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಎಲ್‌ಎ-2ಗಳ ಎಸ್‌ಐಆರ್‌ ಕಾರ್ಯಾಗಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಎಸ್‌ಐಆರ್‌ ಪ್ರಕ್ರಿಯೆ ದೇಶದ ಮತದಾರರ ಶುದ್ಧೀಕರಣವಾಗಿದೆ. ಅರ್ಹರು ಬಿಟ್ಟುಹೋಗದಂತೆ ಅನರ್ಹರು ಸೇರ್ಪಡೆಯಾಗಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ದೇಶದ ಮತದಾರರ ಶುದ್ಧೀಕರಣವಾಗಿದೆ. ಅರ್ಹರು ಬಿಟ್ಟುಹೋಗದಂತೆ ಅನರ್ಹರು ಸೇರ್ಪಡೆಯಾಗಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಭಾನುವಾರ ಇಲ್ಲಿನ ಅರವಿಂದ ನಗರದಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸೆಂಟ್ರಲ್‌ ಕ್ಷೇತ್ರದ ಬಿಎಲ್‌ಎ-2ಗಳ ಎಸ್‌ಐಆರ್‌ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೇಶಾದ್ಯಂತ ಮತಗಳ್ಳತನವಾಗಿದೆ ಎಂದು ಆರೋಪ ಮಾಡಿ ಹೋರಾಟ ನಡೆಸಿದ್ದರು. ಆದರೆ, ಅದನ್ನು ಸಾಬೀತು ಪಡಿಸದೇ ಆರೋಪ ಮಾಡುತ್ತ ಸುಳ್ಳನ್ನೇ ಸತ್ಯವನ್ನಾಗಿಸಲು ಹೊರಟರು. ಒಂದು ಸುಳ್ಳನ್ನು ಪದೇ ಪದೇ ಹೇಳಿ ಸತ್ಯವೆಂದು ಜನರಲ್ಲಿ ಗೊಂದಲ ಸೃಷ್ಟಿಸಿದರು ಎಂದು ಆರೋಪಿಸಿದರು.

ಇಂದಿಗೂ ಹಲವರಲ್ಲಿ ಇದೇ ಗೊಂದಲ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈ ಎಸ್‌ಐಆರ್‌ ಮೂಲಕ ಅರ್ಹ ಮತದಾರರನ್ನು ಸೇರ್ಪಡೆ ಮಾಡುವುದು, ಇರುವ ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕಲು ಈ ನಿರ್ಣಯ ಕೈಗೊಂಡಿದೆಯೇ ಹೊರತು ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಮಾಡಿದ ತಂತ್ರವಲ್ಲ ಎಂಬುದನ್ನು ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

ಎಸ್‌ಐಎರ್‌ ಚುನಾವಣಾ ಪೂರ್ವ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದನ್ನು ವ್ಯವಸ್ಥಿತವಾಗಿ ತಂತ್ರಜ್ಞಾನ ಬಳಸಿಕೊಂಡು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಬಿಎಲ್‌ಎಗಳು ಪ್ರತಿಯೊಂದು ಮನೆಮನೆಗೆ ತೆರಳಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ಮೂಲಕ ಮತದಾರರ ಪಟ್ಟಿಯಲ್ಲಿರದ ಅರ್ಹರನ್ನು ಸೇರ್ಪಡೆ ಮಾಡುವುದು ಜತೆಗೆ ಅನರ್ಹರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಶ್ರಮಿಸಬೇಕಿದೆ. ಈ ಎಸ್‌ಐಆರ್‌ ಶುದ್ಧೀಕರಣದಲ್ಲಿ ಶುದ್ಧ ಮನಸ್ಸಿನಿಂದ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಈಗಾಗಲೇ ಕ್ಷೇತ್ರದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಭೆ ಮಾಡಲಾಗಿದೆ. ಎಸ್‌ಐಆರ್‌ದಿಂದಾಗಿ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡುವ ಅವಕಾಶ ಬಿಎಲ್‌ಎ ದೊರೆಯಲಿದ್ದು, ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಶ್ರಮಿಸುವಂತೆ ಕರೆ ನೀಡಿದರು.

ಸೆಂಟ್ರಲ್‌ ಕಾರ್ಯಕರ್ತರ ಆಧಾರಿತ ಮತಕ್ಷೇತ್ರವಾಗಿದೆ. ಕ್ಷೇತ್ರದ 50 ಸಾವಿರ ಮನೆಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸುವ ಗುರಿ ಹೊಂದಿದ್ದೇನೆ. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು, ಮುಂದೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮತದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯುವೆ ಎಂದರು.

ಬಳಿಕ ವಿಪ ಸದಸ್ಯ ಕೇಶವ್‌ ಪ್ರಸಾದ ಎಸ್‌ಐಆರ್‌ ಕುರಿತು ಬಿಎಲ್‌ಎ-2 ಮಾಹಿತಿ ನೀಡಿದರು. ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಮಂಡಳದ ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ವೀಣಾ ಬರದ್ವಾಡ, ಮಲ್ಲಿಕಾರ್ಜುನ ಗುಂಡೂರ, ಮೀನಾಕ್ಷಿ ವಂಟಮೂರಿ, ಜಗದೀಶ ಹಿರೇಮನಿ, ವಸಂತ ನಾಡಜೋಶಿ, ರಾಮನಗೌಡ ಶೆಟ್ಟನಗೌಡ್ರ ಸೇರಿದಂತೆ ಹಲವರಿದ್ದರು.ಮಹಿಳೆಯರ ಬಗ್ಗೆ ಸಿದ್ದುಗೆ ಗೌರವವಿಲ್ಲ: ಜೋಶಿ ಕಿಡಿ

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮಹಿಳೆಯರ ಬಗ್ಗೆ ಗೌರವವೇ ಇಲ್ಲ. ಯಾವಾಗಲೂ ʼಅವಳಿವಳುʼ ಎಂದೇ ಸಂಬೋಧಿಸುತ್ತಾರೆ. ಇದು ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ಅವಮಾನ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಏಕವಚನದಲ್ಲಿ ಕರೆದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಿಂದಲೇ ಆಯ್ಕೆಯಾದ ಸಂಸದೆ, ಕೇಂದ್ರ ಹಣಕಾಸು ಸಚಿವೆ ಬಗ್ಗೆ ಸಿಎಂ ಹೀಗೆ ಏಕವಚನದಲ್ಲಿ ಮಾತನಾಡಿರುವುದು ಅವರ ಹುದ್ದೆಗೆ ಯೋಗ್ಯ ತರುವಂಥದ್ದಲ್ಲ. ಸಿದ್ದರಾಮಯ್ಯ ಅವರಿಂದ ಪ್ರತಿ ಬಾರಿಯೂ ಇಂಥ ಅವಮಾನಕರ ಹೇಳಿಕೆ ಮರುಕಳಿಸುತ್ತಲೇ ಇದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಸ್ಥಾನದಲ್ಲಿ ನಿಂತಾಗಲೆಲ್ಲಾ ನನ್ನದು ʼಅಪ್ಪಟ ಗ್ರಾಮೀಣ ಭಾಷೆʼ ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನೂ ಹೀಗೆ ಏಕವಚನದಲ್ಲೇ ಕರೆಯುವ ಧೈರ್ಯ ತೋರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇದೆಂಥಾ ಮನುವಾದ ಸಿಎಂರದ್ದು?:

ಮಹಿಳೆಯರ ಬಗ್ಗೆ ಏಕವಚನ ಸಂಬೋಧನೆ ಸಭ್ಯತೆಯಲ್ಲ. ಈ ಅವಮಾನ ಸ್ವೀಕಾರಾರ್ಹವಲ್ಲ. ದೇಶದ ಗೌರವಾನ್ವಿತರಾಗಿರುವ ಹಣಕಾಸು ಸಚಿವೆ ಅವರನ್ನು ಹೀಗೆ ಏಕವಚನದಲ್ಲಿ, ಅಗೌರವದಿಂದ ಸಂಬೋಧನೆ ಮಾಡುವುದು ಯಾವ ಸಂಸ್ಕೃತಿ? ಇವರದ್ದು ಇದೆಂಥಾ ಮನುವಾದ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌