ರಾಮನಗರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷವೊಂದರ ಏಜೆಂಟ್‌ಗಳು ಬಿಎಲ್‌ಒ ಅಧಿಕಾರಿಗಳಿಗೆ ಮನೆಮನೆಗೆ ತೆರಳಲು ಅವಕಾಶ ನೀಡದೆ ಕಲ್ಯಾಣ ಮಂಟಪದಲ್ಲಿ ಅವರೆಲ್ಲರನ್ನು ಕೂರಿಸಿ ಮತದಾರರಿಗೆ ಗಣತಿ ನಮೂನೆ ಪ್ರತಿಗಳನ್ನು ವಿತರಿಸಿರುವ ಘಟನೆ ನಗರದ ಟಿಪ್ಪುನಗರ ಬಡಾವಣೆಯಲ್ಲಿ ನಡೆದಿದೆ.
ರಾಜಕೀಯ ಪಕ್ಷದ ಏಜೆಂಟ್ ಗಳು ಟಿಪ್ಪುನಗರ ಬಡಾವಣೆಗೆ ಸೇರಿದ 90, 91,92ರ ಮತಗಟ್ಟೆ ವ್ಯಾಪ್ತಿಗೆ ಬರುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲ್ಯಾಣ ಮಂಟಪದಲ್ಲಿ ಸೇರಿಸಿದ್ದರು. 3 ಬಿಎಲ್‌ಒ ಅಧಿಕಾರಿಗಳು ಮತ್ತು ಸಹಾಯಕರನ್ನು ಅಲ್ಲಿಗೆ ಕರೆಸಿಕೊಂಡು ಮತದಾರರ ಪೂರ್ವ ಮುದ್ರಿತ ವಿವರಗಳಿರುವ ಗಣತಿ ನಮೂನೆ (ಎನುಮರೇಷನ್ ಫಾರ್ಮ್)ಗಳನ್ನು ವಿತರಿಸಿ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಕಲ್ಯಾಣ ಮಂಟಪದಲ್ಲಿ ಮತದಾರರಿಗೆ ಎನುಮರೇಷನ್ ಫಾರ್ಮ್‌ಗಳನ್ನು ಕೊಡುತ್ತಿರುವ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜೆಡಿಎಸ್ ಕಾರ್ಯಕರ್ತರೊಬ್ಬರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನಗರ ಉಸ್ತುವಾರಿ ಅಧಿಕಾರಿಯಾದ ನಗರಸಭೆ ಆಯುಕ್ತ ಜಯಣ್ಣರವರು ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆಗಾಗಲೇ ಬಿಎಲ್‌ಒ ಅಧಿಕಾರಿಗಳು ಕಲ್ಯಾಣ ಮಂಟಪ ಬಿಟ್ಟು ಮನೆಮನೆಗೆ ಭೇಟಿ ನೀಡಿ ಎನುಮರೇಷನ್ ಫಾರ್ಮ್ ಗಳನ್ನು ವಿತರಿಸುವ ಕಾರ್ಯದಲ್ಲಿ ತೊಡಗಿದ್ದರು.
ಎಸ್‌ಐಆರ್ ಪ್ರಕ್ರಿಯೆಗೆ ಯಾರೇ ಅಡ್ಡಿ ಪಡಿಸಿದರು ಅಂತಹರ ವಿರುದ್ಧ ದೂರು ದಾಖಲಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಕಲ್ಯಾಣ ಮಂಟಪದಲ್ಲಿ ಎಸ್ ಐಆರ್ ಪ್ರಕ್ರಿಯೆ ನಡೆಸಿರುವ ಕುರಿತು ವೈರಲ್ ಆಗಿರುವ ವಿಡಿಯೋ ಆಧರಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ನಗರ ಉಸ್ತುವಾರಿ ಅಧಿಕಾರಿ ಜಯಣ್ಣ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ನಿಯಮ ಏನು ಹೇಳುತ್ತದೆ?
ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೆ ಭೇಟಿ ನೀಡತಕ್ಕದ್ದು ಮತ್ತು ಅಸ್ತಿತ್ವದಲ್ಲಿರುವ ಪ್ರತಿಯೊಬ್ಬ ಮತದಾರರಿಗೆ ಅಸ್ತಿತ್ವದಲ್ಲಿರುವ ಮತದಾರರ ಪೂರ್ವ ಮುದ್ರಿತ ವಿವರಗಳಿರುವ ಗಣತಿ ನಮೂನೆ (ಎನುಮರೇಷನ್ ಫಾರ್ಮ್) ಎರಡು ಪ್ರತಿಯಲ್ಲಿ ವಿತರಿಸತಕ್ಕದ್ದು ಮತ್ತು ನಮೂನೆಯನ್ನು ಭರ್ತಿ ಮಾಡಲು ಅವರಿಗೆ ಮಾರ್ಗದರ್ಶನ ನೀಡಬೇಕು.
ಪ್ರತಿಯೊಬ್ಬ ಮತದಾರರು ಈ ನಮೂನೆಯನ್ನು ಅಗತ್ಯ ಮಾಹಿತಿ ಮತ್ತು ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಮತಗಟ್ಟೆ ಮಟ್ಟದ ಅಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಯ ಪ್ರತಿಯನ್ನು ಸಂಗ್ರಹಿಸಲು ಮತಗಟ್ಟೆ ಮಟ್ಟದ ಅಧಿಕಾರಿಯು ಮತ್ತೊಮ್ಮೆ ಪ್ರತಿಯೊಂದು ಮನೆಗೆ ಭೇಟಿ ನೀಡಬೇಕು. ಮತಗಟ್ಟೆ ಮಟ್ಟದ ಅಧಿಕಾರಿಯು ಪಡೆದ ಅಗತ್ಯ ದಾಖಲೆಗಳೊಂದಿಗೆ ಗಣತಿ ನಮೂನೆಯ ಒಂದು ಪ್ರತಿಯನ್ನು ತನ್ನ ಬಳಿ ಇಟ್ಟುಕೊಳ್ಳತಕ್ಕದ್ದು ಮತ್ತು ಅರ್ಜಿದಾರನೇ ಇಟ್ಟುಕೊಳ್ಳುವ ಗಣತಿ ನಮೂನೆಯ ಮತ್ತೊಂದು ಪ್ರತಿಯ ಮೇಲೆ ನಮೂನೆಯನ್ನು ಮತ್ತು ದಾಖಲೆಯನ್ನು ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ನೀಡಬೇಕು.
2ಕೆಆರ್ ಎಂಎನ್ 2,3.ಜೆಪಿಜಿ