20ರಿಂದ ಎಸ್‌ಇಆರ್ ಆರಂಭ: ಡಿಸಿ ಸ್ವರೂಪ

KannadaprabhaNewsNetwork |  
Published : Jun 04, 2026, 02:45 AM IST
02ಸ್ವರೂಪ | Kannada Prabha

ಸಾರಾಂಶ

ಭಾರತದ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಸ್ಪೆಷಲ್ ಇಂಟೆನ್ಸಿವ್ ರಿವಿಶನ್) - 2026 ಕಾರ್ಯವನ್ನು ಕೈಗೊಳ್ಳಲು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ಒಟ್ಟು ಪ್ರಕ್ರಿಯೆಯು ಜೂ. 20ರಿಂದ ಅ. 5ರವರೆಗೆ ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪ ಟಿ.ಕೆ. ಅವರು ತಿಳಿಸಿದ್ದಾರೆ.

ಉಡುಪಿ: ಭಾರತದ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಸ್ಪೆಷಲ್ ಇಂಟೆನ್ಸಿವ್ ರಿವಿಶನ್) - 2026 ಕಾರ್ಯವನ್ನು ಕೈಗೊಳ್ಳಲು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ಒಟ್ಟು ಪ್ರಕ್ರಿಯೆಯು ಜೂ. 20ರಿಂದ ಅ. 5ರವರೆಗೆ ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪ ಟಿ.ಕೆ. ಅವರು ತಿಳಿಸಿದ್ದಾರೆ.

ಮಂಗಳವಾರ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದರು. ಮತದಾರರ ಪಟ್ಟಿಯನ್ನು ನಿಖರ, ಸಮಗ್ರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಈ ವಿಶೇಷ ಪರಿಷ್ಕರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಪರಿಷ್ಕರಣೆಗೆ ಅರ್ಹತಾ ದಿನಾಂಕ ಅ. 1 ಎಂದು ನಿಗದಿಪಡಿಸಲಾಗಿದೆ ಎಂದರು.

ಜೂ. 20ರಿಂದ 29ರವರೆಗೆ ಪೂರ್ವಸಿದ್ಧತೆ, ಸಿಬ್ಬಂದಿ ತರಬೇತಿ ಹಾಗೂ ಅಗತ್ಯ ದಾಖಲೆಗಳ ಮುದ್ರಣ, ಜೂ. 30ರಿಂದ ಜು. 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಮನೆ ಭೇಟಿ, ಮತದಾರರಿಗೆ ಗಣತಿ ನಮೂನೆ ದ್ವಿಪ್ರತಿಯಲ್ಲಿ ವಿತರಣೆ, ಜು. 29ರಂದು ಮತಗಟ್ಟೆಗಳ ಪುನರ್‌ವಿಂಗಡಣೆ, ಆ. 5ರಂದು ಕರಡು ಮತದಾರರ ಕರಡು ಪಟ್ಟಿ ಪ್ರಕಟವಾಗಲಿದೆ.

ಆ. 5ರಿಂದ ಸೆ. 4ರವರೆಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಅರ್ಜಿ ಸಲ್ಲಿಕೆ, ಅ. 3ರವರೆಗೆ ಈ ಅರ್ಜಿಗಳ ಪರಿಶೀಲನೆ, ವಿಲೇವಾರಿ ನಡೆಯಲಿದ್ದು, ಅ. 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಶೇ . 92.55 ಮ್ಯಾಪಿಂಗ್ ಪೂರ್ಣ: ಜಿಲ್ಲೆಯಲ್ಲಿ ಈ ಪರಿಷ್ಕರಣೆಗೆ ಪೂರ್ವಭಾವಿಯಾಗಿ 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ (ಮ್ಯಾಪಿಂಗ್) ಮಾಡಲಾಗುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ ಶೇ. 92.55ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಇದು ರಾಜ್ಯದಲ್ಲೇ ಗಮನಾರ್ಹ ಸಾಧನೆಯಾಗಿದೆ. ಉಳಿದ ಮತದಾರರ ಮ್ಯಾಪಿಂಗ್ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ಪರಿಷ್ಕರಣೆ ಕಾರ್ಯಕ್ಕೆ ಜಿಲ್ಲಾ ಚುನಾವಣಾಧಿಕಾರಿ, ಅಪರ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಚುನಾವಣಾ ತಹಸೀಲ್ದಾರರು, ಮಾಸ್ಟರ್ ತರಬೇತುದಾರರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು, ಅವರ ಮೇಲ್ವಿಚಾರಕರು ಹಾಗೂ ಬೂತ್ ಮಟ್ಟದ ಏಜೆಂಟರಿಗೆ ತರಬೇತಿ ನೀಡಲಾಗುತ್ತದೆ ಎಂದರು.

ಮಾಹಿತಿ ನೀಡುವುದು ಕಡ್ಡಾಯ: ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಮನೆ ನಿವಾಸಿಗಳು ಲಭ್ಯವಿಲ್ಲದಿದ್ದರೆ ನಮೂನೆಯನ್ನು ಅಲ್ಲಿಯೇ ಬಿಟ್ಟು ಹೋಗಲಾಗುತ್ತದೆ. ನಂತರ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಲು ಕನಿಷ್ಠ ಮೂರು ಬಾರಿ ಭೇಟಿ ನೀಡಲಿದ್ದಾರೆ. ಪ್ರತಿಯೊಬ್ಬ ಮತದಾರರು ತಮ್ಮ ಗಣತಿ ನಮೂನೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಡಿಸಿ ತಿಳಿಸಿದ್ದಾರೆ.

ಮತದಾರರು ಭರ್ತಿ ಮಾಡಿದ ನಮೂನೆ, ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ನೀಡಬಹುದು ಅಥವಾ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬಹುದು. ಈ ಎಲ್ಲ ವಿವರಗಳನ್ನು ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂ ಕಚೇರಿಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಪ್ರಕಟಿಸಲಾಗುತ್ತದೆ.

ಜಿಲ್ಲೆಯ ಎಲ್ಲ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಯಾವುದೇ ತಿದ್ದುಪಡಿ ಅಥವಾ ಸೇರ್ಪಡೆ ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವ ಮೂಲಕ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಸತೀಶಗೆ 5ನೇ ಬಾರಿಗೆ ಒಲಿದ ಸಚಿವ ಪಟ್ಟ