ಸಹಕಾರಿ ಕ್ಷೇತ್ರಗಳ ಚುನಾವಣೆಯಲ್ಲಿ ಜಯಿಸಿದ ಬಿಜೆಪಿ ಕಾರ್ಯಕರ್ತರಿಗೆ ಸನ್ಮಾನ
ಶೃಂಗೇರಿ ಕ್ಷೇತ್ರ ಶಾಸಕ ರಾಜೇಗೌಡರು ಸಾವಿನ ಮನೆಗೆ ಸಂತಾಪ ಹೇಳಲು ಹೋಗುವಾಗಲೂ ಸೈರನ್ ಹಾಕಿಯೇ ಓಡಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಜೀವರಾಜ್ ಆರೋಪಿಸಿದರು.
ಕೊಪ್ಪ ಮಂಡಲದ ಭಾಜಾಪ ಕಚೇರಿಯಲ್ಲಿ ಸಹಕಾರಿ ಕ್ಷೇತ್ರಗಳ ನಿರ್ದೇಶಕ ಹಾಗೂ ತೆರವುಗೊಂಡ ಗ್ರಾಪಂ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಕಾರ್ಯಕರ್ತರಿಗೆ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಜೀವರಾಜ್ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಪಾದಿಸುತ್ತಿದ್ದ ಶೃಂಗೇರಿ ಶಾಸಕ ರಾಜೇಗೌಡರ ಕೈಯಲ್ಲಿ ಶಾಸಕರ ಅಧಿಕಾರದೊಂದಿಗೆ ಕ್ಯಾಬಿನೆಟ್ ದರ್ಜೆಯ ಅಧಿಕಾರಗಳಿದ್ದರೂ ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಡ್ಡಗಾಲು ಹಾಕುವವರು ಯಾರೂ ಇಲ್ಲದಿದ್ದರೂ ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ ಎಂದರು.ದೌರ್ಜನ್ಯ ಮತ್ತು ದ್ವೇಷ ರಾಜಕಾರಣವನ್ನು ಮೈಗೂಡಿಸಿಕೊಂಡಿರುವ ಶಾಸಕರ ಕ್ಷೇತ್ರದಲ್ಲಿ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಶೃಂಗೇರಿಯಲ್ಲಿ ನಡೆದ ಹಿಟ್ ಅಂಡ್ ರನ್ ಕೇಸಿನಲ್ಲಿ ಆಕ್ಸಿಡೆಂಟ್ ಆಗಿ ಗಾಯವಾದವರನ್ನು ಜೈಲಿಗೆ ಕಳುಹಿಸಿದ್ದಾರೆ. ಅತ್ತಿಕೊಡಿಗೆ ಪಿಎಸಿಎಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಚುನಾವಣೆ ತಪ್ಪಿಸಲು ಪ್ರಯತ್ನಿಸಿದರು. ಆದರೂ ಬಿಜೆಪಿ ಬೆಂಬಲಿತರು ಅಲ್ಲಿ ಗೆದ್ದು ಅಧ್ಯಕ್ಷರಾಗಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಂಡದಿಂದ ಹಿಡಿದು ಮೆಟ್ರೋ, ಹಾಲು, ರಿಜಿಸ್ಟ್ರೇಷನ್ ಶುಲ್ಕ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಏನು ಕೇಳಿದರೂ ೨೦೦೦ ಕೊಟ್ಟಿದ್ದೇವೆ ಎನ್ನುತ್ತಾರೆ. ಹೆಂಡತಿಗೆ ೨೦೦೦ ಕೊಟ್ಟು ಗಂಡನಿಂದ ದುಪ್ಪಟ್ಟು ವಸೂಲಿ ಮಾಡಲಾಗುತ್ತಿದೆ ಎಂದರು.
ಕೊಪ್ಪ ಟಿಎಪಿಸಿಎಂಎಸ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್‌ನ ನವೀನ್ ಕುಮಾರ್, ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ವಿಶ್ವನಾಥ್, ಹಾಲ್ಮುತ್ತೂರು ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಸಂತೋಷ್ ಸೇರಿದಂತೆ ಜಯಗಳಿಸಿದವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಸುರೇಶ್ ಕಣಗಲ್, ಶೃತಿ ರೋಹಿತ್, ಪದ್ಮಾವತಿ ರಮೇಶ್ ಮುಂತಾದವರು ಇದ್ದರು.