ಕನ್ನಡಪ್ರಭ ವಾರ್ತೆ ಮಂಗಳೂರು
ಕಾಸರೋಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು.ಶಿಬಿರ ಉದ್ಘಾಟಿಸಿದ ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಪ್ರಾತಃಸ್ಮರಣೀಯ ನೆಡ್ಲೆ ನರಸಿಂಹ ಭಟ್ ನಮಗೆಲ್ಲ ಗುರು ಸಮಾನರು. ಅವರು ಚೆಂಡೆ ಮದ್ದಲೆ ಬಾರಿಸುವ ವಿಧಾನವೇ ಬಹಳ ಸೊಗಸು. ಸಾಹಿತ್ಯ, ಲಯ, ಘಾತ ಪೆಟ್ಟುಗಳ, ಹುಸಿಪೆಟ್ಟುಗಳ ವ್ಯತ್ಯಾಸದೊಂದಿಗೆ ಸ್ಪಷ್ಟತೆಯಿಂದ, ಮಹಿಷಾಸುರಾದಿ ಬಣ್ಣದ ವೇಷಗಳ ನಡೆಗಳನ್ನು ಬಾರಿಸುವ ವಿಧಾನ ಬಹಳ ಅಂದವಾದವು ಎಂದರು.ಕರ್ನಾಟಕ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ, ಯಕ್ಷಗಾನ ಪೋಷಕ ಟಿ. ಶ್ಯಾಮ ಭಟ್ ಮಾತಾನಾಡಿ, ವೃತ್ತಿಪರ ಮೇಳಗಳ ಹಿಮ್ಮೇಳದ ಪ್ರತಿಯೊಬ್ಬ ಕಲಾವಿದನೂ ಇಂತಹ ಶಿಬಿರದಲ್ಲಿ ಭಾಗವಹಿಸಿ ತನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಹಿರಿಯ ಹಿಮ್ಮೇಳ ವಾದಕ ಪದ್ಯಾಣ ಶಂಕರನಾರಾಯಣ ಭಟ್ ಮುಖ್ಯ ಅತಿಥಿಯಾಗಿದ್ದರು.ಸಿರಿಬಾಗಿಲು ಪ್ರತಿಷ್ಠಾನವತಿಯಿಂದ ಟಿ. ಶ್ಯಾಮ್ ಭಟ್ ಅವರನ್ನು ಗೌರವಿಸಲಾಯಿತು. ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಕೊಳಗಿ ಕೇಶವ ಹೆಗಡೆ ಇವರನ್ನು ಗಡಿನಾಡು ಕಾಸರಗೋಡಿನ ಹಿರಿಯ ವಿದ್ವಾಂಸ ಕಲಾವಿದ ವಿಶ್ವವಿನೋದ ಬನಾರಿ, ಹಿರಿಯ ಭಾಗವತ ಸರಪಾಡಿ ಶಂಕರನಾರಾಯಣ ಕಾರಂತ ಇವರನ್ನು ಪ್ರತಿಷ್ಠಾನ ವತಿಯಿಂದ ಗೌರವಿಸಲಾಯಿತು. ನೆಡ್ಲೆ ಸಂಸ್ಮರಣೆ: ತೆಂಕುತಿಟ್ಟು ಯಕ್ಷಗಾನದ ಹಿರಿಯ ಅನುಭವಿ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ನೆಡ್ಲೆ ನರಸಿಂಹ ಭಟ್ ಕುರಿತಾದ ಸಂಸ್ಮರಣ ಭಾಷಣ ಮಾಡಿ, ನೆಡ್ಲೆ ನರಸಿಂಹ ಭಟ್ಟರು ಸರಳ ರೀತಿಯಿಂದ ಪ್ರತಿಯೊಬ್ಬ ಕಲಾವಿದನಿಗೂ ಹೇಳಿಕೊಡುವ ವಿಧಾನ, ಅವರ ಜೊತೆಗಿನ ಒಡನಾಟದ ಕೆಲವು ನೆನಪುಗಳನ್ನು ಬಿತ್ತರಿಸಿದರು. ಅವರು ಪಾತ್ರ ಪ್ರಸ್ತುತಿಯಲ್ಲಿ ಔಚಿತ್ಯ ಪ್ರಜ್ಞೆಯ ಕುರಿತಾಗಿ ರಂಗದಲ್ಲಿ ಕಲಾವಿದ ಯಾವ ರೀತಿ ಪ್ರಸಂಗದೊಳಗಿದ್ದು ಸ್ಪಂದಿಸಬೇಕು ಎಂಬುದನ್ನು ವಿವರಿಸಿದರು. ಬಲಿಪ ಶಿವಶಂಕರ ಭಟ್ ಮತ್ತು ಕೃಷ್ಣ ಪ್ರಕಾಶ್ ಒಳಿತ್ತಾಯ ಇವರು ಪ್ರಸಂಗ ಸಾಹಿತ್ಯದ ಪ್ರಸ್ತುತಿ ಮತ್ತು ಮದ್ದಳೆ ಸಹಯೋಗವನ್ನು ಪ್ರಾತ್ಯಕ್ಷಿಕೆ ಮೂಲಕ ನಿರೂಪಿಸಿ ವಿವರಿಸಿದರು.ಮೇಳವೆಂಬ ಸಮೂಹ ವ್ಯವಸ್ಥೆಯೊಂದಿಗೆ ವೈಯಕ್ತಿಕ ಹೊಂದಾಣಿಕೆ ಕುರಿತು ವಿದ್ವಾಂಸ ಉಜಿರೆ ಅಶೋಕ್ ಭಟ್ ನಿರೂಪಿಸಿದರು. ಪ್ರಸಂಗ ಸಾಹಿತ್ಯ ಪ್ರಸ್ತುತಿಯಲ್ಲಿ ಛಂದಸ್ಸಿನ ಮಹತ್ವದ ಕುರಿತು ಕಟೀಲು ಮೇಳದ ಪ್ರಧಾನ ಭಾಗವತ ಅಂಡಾಲ ದೇವಿ ಪ್ರಸಾದ ಶೆಟ್ಟಿ, ಧ್ವನಿವರ್ಧಕದ ಸಮರ್ಪಕ ಬಳಕೆಯ ಕುರಿತು ವಿಶ್ರಾಂತ ಆಕಾಶವಾಣಿ ಉದ್ಘೋಷಕ, ಹವ್ಯಾಸಿ ಭಾಗವತ ಸುಬ್ರಾಯ ಸಂಪಾಜೆ, ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರು ಪ್ರಸಂಗಗಳ ಸಾಂಪ್ರದಾಯಿಕ ನಡೆ, ಉತ್ತರ ಕನ್ನಡ ಜಿಲ್ಲೆಯ ಯಕ್ಷರಂಗ ಮಾಸ ಪತ್ರಿಕೆಯ ಸಂಪಾದಕ ಕಡತೋಕ ಗೋಪಾಲಕೃಷ್ಣ ಭಾಗವತ ಅವರು ಕಲಾವಿದನ ಸಾಮಾಜಿಕ ಸಾಂಸ್ಕೃತಿಕ ಜವಾಬ್ದಾರಿ ಕುರಿತು, ಕೊಂಕನಣಾಜೆ ಚಂದ್ರಶೇಖರ ಭಟ್ ಅವರು ಮದ್ದಲೆಗಾರನ ಸ್ಥಾನ-ಹೊಂದಾಣಿಕೆ ಕುರಿತಾಗಿ ವಿವರಿಸಿದರು. ಹಿರಿಯ ಕಲಾವಿದರಾದ ವಾಸುದೇವರಂಗ ಭಟ್ ಮಧೂರು, ರಮೇಶ್ ಭಟ್ ಪುತ್ತೂರು ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಡಾ.ಸತೀಶ್ ಪುಂಚಿತ್ತಾಯ ಮುಂತಾದವರು ಉಪಸ್ಥಿತರಿದ್ದರು. ಡಾ. ಸುಣ್ಣಂಗಳಿ ಶ್ರೀ ಕೃಷ್ಣ ಭಟ್ ಹಾಗೂ ಎಸ್. ಎನ್. ಭಟ್ ಬಾಯಾರು ನಿರ್ವಹಿಸಿದರು. ರಾದಾಕೃಷ್ಣ ಕಲ್ಚಾರ್ ಸಂಪೂರ್ಣ ಕಾರ್ಯಕ್ರಮದ ಅವಲೋಕನ ಮಾಡಿದರು. ಇತ್ತೀಚೆಗೆ ಅಗಲಿದ ಮಹನೀಯರಾದ ಪಾತಾಳ ವೆಂಕಟರಮಣ ಭಟ್, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಡಾ. ಬಿ.ಎಸ್.ರಾವ್ ಕಾಸರಗೋಡು ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ವಂದಿಸಿದರು. 60ಕ್ಕೂ ಹೆಚ್ಚು ಹಿಮ್ಮೇಳ ಕಲಾವಿದರು ಭಾಗವಹಿಸಿದ್ದರು. ಒಂದು ಇಡೀ ದಿನ ಅಧ್ಯಯನ ಪೂರ್ಣ ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಬೆಳಗಿ ಬಂತು.