ಕನ್ನಡಪ್ರಭ ವಾರ್ತೆ ಸಿರಿಗೆರೆ
ಇಲ್ಲಿನ ಆಡಳಿತ ವೈದ್ಯಾಧಿಕಾರಿಯಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಡಾ.ಜಿ.ಆರ್.ತಿಮ್ಮೇಗೌಡ (34) ಶನಿವಾರ ತಡ ರಾತ್ರಿ ದಾವಣಗೆರೆ ಮತ್ತು ಆನಗೋಡು ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ತುತ್ತಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯ ವಿಡಿಯೋ ಸಂವಾದಲ್ಲಿ ಭಾಗವಹಿಸಲು ದಾವಣಗೆರೆಗೆ ಹೋಗಿದ್ದ ತಿಮ್ಮೇಗೌಡರು ತಡರಾತ್ರಿ ಹಿಂದಿರುಗುವಾಗ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಈ ಪರಿಣಾಮ ಕಾರು ಲಾರಿಯ ಅಡಿಗೆ ಸೇರಿಕೊಂಡು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಅವರೊಬ್ಬರೇ ಇದ್ದು ಚಾಲನೆ ಮಾಡುತ್ತಿದ್ದ ವೈದ್ಯರು ರಕ್ತದ ಮಡುವಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊರ ರೋಗಿಗಳು ಭಾಷ್ಪಾಂಜಲಿ ಸಲ್ಲಿಸಿದ್ದಾರೆ.ತೆರೆದ ಬಾಗಿಲು: ಆಸ್ಪತ್ರೆಯ ಆಡಳಿತದ ಹೊರೆ ಅವರ ಹೆಗಲ ಮೇಲಿದ್ದರೂ ಅವರು ನಿತ್ಯವೂ ಏನಿಲ್ಲವೆಂದರೂ 200 ರಿಂದ 300 ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ಕೊಡುತ್ತಿದ್ದರು. ರಾತ್ರಿ ಪಾಳಯದ ವೈದ್ಯರು ಇಲ್ಲವೆಂದರೆ ಅವರೇ ಮತ್ತೆ ಡ್ಯೂಟಿಗೆ ಸಜ್ಜುಗೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೂರಾರು ಸಂಖ್ಯೆಯ ಸಿಬ್ಬಂದಿಗೆ ಅವರು ಕಿರಿಯ ಸಹೋದರನಂತೆ ಇದ್ದರು.
ಕೋವಿಡ್‌ನ ಆತ್ಮವಿಶ್ವಾಸ:ಡಾ.ತಿಮ್ಮೇಗೌಡರು ಕೋವಿಡ್‌ನ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಹೋರಾಡಿ ಜನರ ಹೃದಯ ಗೆದ್ದರು. ಸಿಬ್ಬಂದಿ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದ ವೇಳೆ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ ಪರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಆಗ ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಠದ ಹಾಸ್ಟೆಲಿನಲ್ಲಿ ಆರಂಭವಾದ ಕೋವಿಡ್ ಕೇಂದ್ರದಲ್ಲಿಯೂ ಡಾ.ತಿಮ್ಮೇಗೌಡರು ಅಪರಿಮಿತ ಸೇವೆ ಸಲ್ಲಿಸಿ ರೋಗಿಗಳ ಹೃದಯ ಗೆದ್ದಿದ್ದರು. ಗಣಿಗಾರಿಕೆ ಸಂಸ್ಥೆಗಳಿಗೆ ಆಸ್ಪತ್ರೆಯ ಅಭಿವೃದ್ಧಿಗೆ ಅಗತ್ಯ ಸಾಮಗ್ರಿಗಳನ್ನು ಕೊಡುಗೆ ರೂಪದಲ್ಲಿ ಪಡೆದು ಅವುಗಳನ್ನು ಸಾರ್ವಜನಿಕರಿಗೆ ಬಳಸಿದ ಕೀರ್ತಿ ತಿಮ್ಮೇಗೌಡರದ್ದು. 2 ವರ್ಷದ ಹಿಂದೆಯಷ್ಟೇ ತಿಮ್ಮೇಗೌಡರು ವಿವಾಹವಾಗಿದ್ದು ಅವರಿಗೆ ಒಂದು ವರ್ಷದ ಪುಟ್ಟ ಕಂದಮ್ಮವಿದೆ.