ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ೧೭ ವರ್ಷ ವಯೋಮಿತಿಯ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ೨೦೨೫-೨೬ ಉದ್ಘಾಟನಾ ಸಮಾರಂಭ ಸೆ. ೨೨ರಂದು ಬೆಳಗ್ಗೆ ೯.೩೦ಕ್ಕೆ ತಾಲೂಕು ಕ್ರೀಡಾಂಗಣ ಕಾಳಮ್ಮನಗರದಲ್ಲಿ ನಡೆಯಲಿದೆ.
ಸೆ. ೨೨ರಂದು ಯಲ್ಲಾಪುರದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ನಡೆಯಲಿರುವ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಘಟ್ಟದ ಮೇಲಿನ ೬ ತಾಲೂಕುಗಳಿಂದ ೧೨೦೦ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಅದಕ್ಕಾಗಿ ೧೦೦ ನಿರ್ಣಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಹೇಳಿದರು.
ಅವರು ಗುರುವಾರ ತಮ್ಮ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿದರು. ತಾಲೂಕಿನ ವಿವಿಧ ಸಂಘ-ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆದು ಈ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ನಡೆಸಲು ಉದ್ದೇಶಿಸಿದ್ದೇವೆ. ಹಲವಾರು ಸಮಿತಿಗಳನ್ನು ನೇಮಿಸಿ, ಶಿಕ್ಷಕರಿಗೆ ಹೊಣೆಗಾರಿಕೆ ನೀಡಲಾಗಿದೆ ಎಂದರು.ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಪ್ರಕಾಶ ತಾರೀಕೊಪ್ಪ ಮಾತನಾಡಿ, ಅಂದು ಗುಂಪು ಆಟಗಳಾದ ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ಇವುಗಳನ್ನು ಮಾತ್ರ ನಡೆಸಲಾಗುವುದು. ಉಳಿದ ವೈಯಕ್ತಿಯ ಸ್ಪರ್ಧೆಗಳನ್ನು ಶಿರಸಿ ಮತ್ತು ಹಳಿಯಾಳಗಳಲ್ಲಿ ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಅಲ್ಲದೇ, ಸಿದ್ದಾಪುರ, ಜೋಯಿಡಾದಂತಹ ದೂರದ ತಾಲೂಕಿನ ವಿದ್ಯಾರ್ಥಿಗಳಿಗೆ ಒಂದು ದಿನ ಮುಂಚಿತವಾಗಿ ಬರಲು ಮೊರಾರ್ಜಿ ವಸತಿ ಶಾಲೆಯಲ್ಲಿ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿ ಪ್ರಶಾಂತ ಜಿ.ಎನ್., ಪ್ರೌಢಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ಚಂದ್ರಶೇಖರ ಎಸ್., ಕಾರ್ಯದರ್ಶಿ ವೆಂಕಟೇಶ ಪಾಲನಕರ ಉಪಸ್ಥಿತರಿದ್ದರು.