ಅಗ್ನಿಪರೀಕ್ಷೆ ಎದುರಿಸುತ್ತಿರುವ ಶಿರಸಿ ಅಗ್ನಿಶಾಮಕ ದಳ

KannadaprabhaNewsNetwork | Published : Mar 24, 2025 12:30 AM

ಸಾರಾಂಶ

ಬೇಸಿಗೆಯ ಝಳ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ.

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ಬೇಸಿಗೆಯ ಝಳ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ. ಅಲ್ಲಲ್ಲಿ ಅರಣ್ಯಕ್ಕೆ ಬೆಂಕಿಯಂತಹ ಪ್ರಕರಣ ವರದಿಯಾಗುತ್ತಿವೆ. ಆದರೆ ಬೆಂಕಿ ಅನಾಹುತಗಳಿಂದ ಕಾಡು ಹಾಗೂ ಆಸ್ತಿಗಳನ್ನು ರಕ್ಷಿಸಲು ತಾಲೂಕಿನಲ್ಲಿರುವುದು ಒಂದೇ ಅಗ್ನಿಶಾಮಕ ವಾಹನವಾದ್ದರಿಂದ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲು ಸಾಧ್ಯವಾಗದೇ ಅಗ್ನಿಶಾಮಕ ದಳವು ಅಗ್ನಿಪರೀಕ್ಷೆಯನ್ನು ಎದುರಿಸುವಂತಾಗಿದೆ.

ಶಿರಸಿ ತಾಲೂಕು ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದ್ದು, ಜನವರಿಯಿಂದ ಮೇವರೆಗೆ ಹೆಚ್ಚಿನ ಪ್ರಮಾಣದ ಅಗ್ನಿ ಅವಘಡಗಳ ಪ್ರಕರಣಗಳು ದಾಖಲಾಗುತ್ತದೆ. ಅರಣ್ಯ ಪ್ರದೇಶಕ್ಕೆ ಬಿದ್ದ ಬೆಂಕಿಯು ತೋಟ-ಗದ್ದೆಯನ್ನು ವ್ಯಾಪಿಸಿ ಅಡಕೆ, ತೆಂಗಿನಮರಗಳು ಬೆಂಕಿಗೆ ಆಹುತಿಯಾದ ಅನೇಕ ಘಟನೆಗಳು ನಡೆದರೆ ತುರ್ತು ಸಂದರ್ಭದಲ್ಲಿ ಬೆಂಕಿ ಆರಿಸಲು ಶಿರಸಿಯಲ್ಲಿ ಒಂದೇ ಅಗ್ನಿಶಾಮಕ ದಳದ ವಾಹನ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೇ ಇರುವುದರಿಂದ ಸಮಸ್ಯೆಗೆ ಕಾರಣವಾಗಿದೆ.

೧೫ ವರ್ಷ ಮುಗಿದ ವಾಹನಗಳನ್ನು ರಸ್ತೆಗೆ ಇಳಿಸದಂತೆ ಕೇಂದ್ರ ಸರ್ಕಾರದ ಆದೇಶದಿಂದ ಅವಧಿ ಮುಗಿದ ಒಂದು ವಾಹನ ಠಾಣೆಯ ಶೆಡ್‌ನೊಳಗೆ ನಿಂತಿದೆ. ಬನವಾಸಿಯನ್ನೊಳಗೊಂಡ ಶಿರಸಿ ತಾಲೂಕಿನಲ್ಲಿ ಈ ಹಿಂದೆ ೨ ಅಗ್ನಿಶಾಮಕದಳದ ವಾಹನ ಕಾರ್ಯ ನಿರ್ವಹಿಸುತ್ತಿತ್ತು. ಒಂದು ವಾಹನದ ಅವಧಿ ಮುಕ್ತಾಯಗೊಂಡಿರುವುದರಿಂದ ಇನ್ನೊಂದು ವಾಹನ ತೀರಾ ಅವಶ್ಯಕತೆಯಿದೆ ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಪೊಲೀಸ್, ಆ್ಯಂಬುಲೆನ್ಸ್ ಸೇವೆಯಂತೆ ಅಗ್ನಿಶಾಮಕದಳದ ಸೇವೆಯೂ ತುರ್ತು ಅವಶ್ಯವಿದೆ. ಶಿರಸಿ ತಾಲೂಕು ಭೌಗೋಳಿಕವಾಗಿ ವಿಶಾಲವಾಗಿರುವುದರಿಂದ ಕನಿಷ್ಠ ೨ ಅಗ್ನಿಶಾಮಕದಳದ ವಾಹನ ಅವಶ್ಯವಿದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಾಹನದ ಅವಧಿಯೂ ಇನ್ನು ೧ ವರ್ಷ ಮಾತ್ರ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ. ಬೇಸಿಗೆಯ ೪ ತಿಂಗಳು ತಾಲೂಕಿನಲ್ಲಿ ಅಗ್ನಿ ಅವಘಡಗಳ ಪ್ರಮಾಣ ಹೆಚ್ಚಾಗಿರುತ್ತದೆ. ಅಗ್ನಿಶಾಮಕದಳದ ಸೇವೆ ತೀರಾ ಅವಶ್ಯವಾಗಿರುತ್ತದೆ. ಶಿರಸಿಗೆ ಇನ್ನೊಂದು ಅಗ್ನಿಶಾಮಕದಳದ ವಾಹನ ನೀಡಲು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮಂಜುನಾಥ ಹೆಗಡೆ ಹೆಗಡೆಕಟ್ಟಾ ಆಗ್ರಹಿಸಿದ್ದಾರೆ.

ತಡವಾಗಿ ಬಂದ ವಾಹನ:

ತಾಲೂಕಿನ ಹೆಗಡೆಕಟ್ಟಾ ಸಮೀಪದ ಹಕ್ಕಿಗದ್ದೆಯ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಕಾಡ್ಗಿಚ್ಚಿನಿಂದ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಪ್ರದೇಶದಂಚಿನಲ್ಲಿರುವ ತೋಟಗಳನ್ನು ವ್ಯಾಪಿಸಿಕೊಂಡಿತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ಠಾಣೆ ಸಂಪರ್ಕಿಸಿದರು. ಆದರೆ ಅಲ್ಲಿ ಇರುವ ಏಕೈಕ ವಾಹನ ಕೆಎಚ್‌ಬಿ ಕಾಲನಿಗೆ ಹೋಗಿತ್ತು. ಅಲ್ಲಿಂದ ಬಂದ ಬಳಿಕ ಕಳುಹಿಸುವುದಾಗಿ ಠಾಣೆ ಸಿಬ್ಬಂದಿ ಹೇಳಿದರು. ಕೆಲ ಸಮಯದ ನಂತರ ಅಲ್ಲಿಂದ ಬಂದು, ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ತೆರಳಲು ಸಿದ್ಧವಾದರೂ ವಾಹನ ಸುಸ್ತಿತಿಯಲ್ಲಿಲ್ಲದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸ್ಥಳೀಯರೇ ಸೇರಿಕೊಂಡು ಬೆಂಕಿ ನಂದಿಸಿದರು. ಈ ಘಟನೆ ಅಗ್ನಿಶಾಮಕ ವಾಹನ ಕೊರತೆಯಿಂದಾಗುವ ಸಮಸ್ಯೆಗೆ ತಾಜಾ ಉದಾಹರಣೆಯಂತಿದೆ.

ಬನವಾಸಿಯಲ್ಲಿ ಅಗ್ನಿಶಾಮಕ ಠಾಣೆಯಾಗಲಿ: ತಾಲೂಕಿನ ಪೂರ್ವಭಾಗವು ೧೧ ಗ್ರಾಪಂ ವ್ಯಾಪ್ತಿ ಹೊಂದಿದೆ. ಶಿರಸಿಯಿಂದ ೨೨ ಕಿ.ಮೀ ದೂರದಲ್ಲಿರುವ ಬನವಾಸಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಅಗ್ನಿಶಾಮಕ ಠಾಣೆ ಸ್ಥಾಪಿಸಿದರೆ ಸುತ್ತಮುತ್ತಲಿನ ಪ್ರದೇಶಕ್ಕೆ ಅನುಕೂಲವಾಗುತ್ತದೆ. ಅಗ್ನಿ ಸೇರಿದಂತೆ ಇನ್ನಿತರ ಅವಘಡಗಳು ಉಂಟಾದರೆ ಶಿರಸಿಯಿಂದ ವಾಹನ ತೆರಳಬೇಕಿದೆ. ಆ ಸಮಯದಲ್ಲಿ ತಾಲೂಕಿನಲ್ಲಿ ಇನ್ನೊಂದು ಅವಘಡ ಉಂಟಾದರೆ ವಾಹನ ಲಭ್ಯವಿರುವುದಿಲ್ಲ. ಈ ಕಾರಣದಿಂದ ಬನವಾಸಿಯಲ್ಲಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಲು ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂಬ ಆಗ್ರಹ ಬನವಾಸಿ ಭಾಗದ ಸುತ್ತಮುತ್ತಲಿನ ಗ್ರಾಮದ ನಾಗರಿಕರು ಒತ್ತಾಯಿಸಿದ್ದಾರೆ.

ಶಿರಸಿ ತಾಲೂಕು ವಿಶಾಲವಾಗಿರುವುದರಿಂದ ಅಗ್ನಿ ಅವಘಡ ನಿಯಂತ್ರಿಸಲು ಕನಿಷ್ಠ ೨ ಅಗ್ನಿಶಾಮಕ ವಾಹನ ಅವಶ್ಯವಿದೆ. ತುರ್ತು ಸೇವೆ ಪರಿಗಣಿಸಿ, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿ, ಇನ್ನೊಂದು ಹೊಸ ವಾಹನ ಶಿರಸಿಗೆ ಲಭ್ಯವಾಗುವಂತೆ ಮಾಡಲಿ ಎನ್ನುತ್ತಾರೆ ಮಂಜುನಾಥ ಹೆಗಡೆ ಹೆಗಡೆಕಟ್ಟಾ.

Share this article