ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮುಹೂರ್ತ ನಿಗದಿ । ಫೆ. 26ರಿಂದ ಭಕ್ತರಿಗೆ ಸೇವೆಗೆ ಅವಕಾಶ
ದಕ್ಷಿಣ ಭಾರತ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆ ಫೆ. 24ರಿಂದ ಮಾ. 4ರ ವರೆಗೆ ನಡೆಯಲಿದ್ದು, ಭಾನುವಾರ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮುಹೂರ್ತ ನಿಗದಿಪಡಿಸಲಾಯಿತು.
ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ–ವಿಧಾನಗಳು ಜ. 7ರಿಂದ ಪ್ರಾರಂಭವಾಗಲಿವೆ. ಜ. 7ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ. 3ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆ. 6ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಫೆ. 10ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಫೆ. 13ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಫೆ. 13ರಂದು ಉತ್ತರ ದಿಕ್ಕಿಗೆ 4ನೇ ಹೊರಬೀಡು, ಫೆ. 17ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ. ಫೆ. 18ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.ಫೆ. 24ರಂದು ಮಧ್ಯಾಹ್ನ 12.30ರಿಂದ 01.08ರೊಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ಸಭಾ ಮಂಟಪದಲ್ಲಿ ರಾತ್ರಿ 11.36ರಿಂದ 11.43ರೊಳಗೆ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಫೆ. 25ರಂದು ಬೆಳಗ್ಗೆ 7.27ರಿಂದ 7.45ರೊಳಗೆ ದೇವಿಯ ರಥಾರೋಹಣ ಕಾರ್ಯ ನಡೆಯಲಿದ್ದು, ಆನಂತರ 9.07ರ ನಂತರ ದೇವಿಯ ಶೋಭಾಯಾತ್ರೆ, ಆನಂತರ ಗದ್ದುಗೆಯ ಮೇಲೆ ಸ್ಥಾಪನೆ ಕಾರ್ಯ ಜರುಗುವುದು. ಫೆ. 26ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ.
ಮಾ. 4ರಂದು ಬೆಳಗ್ಗೆ 10.47ಕ್ಕೆ ಜಾತ್ರೆ ಮುಕ್ತಾಯವಾಗಲಿದೆ. ಮಾ. 19ರ ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ. ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ದೇವಿ ಸಾನಿಧ್ಯದಲ್ಲಿ ದೀಪ ಬೆಳಗಿಸಲಾಯಿತು. ಆನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು. ಪುರೋಹಿತರಾದ ಶರಣ್ ಆಚಾರ್ಯ, ರಾಮಕೃಷ್ಣ ಭಟ್ಟ ಕೆರೇಕೈ ಜಾತ್ರೆಯ ದಿನಾಂಕ ಪ್ರಕಟಿಸಿದರು.ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಲಕ್ಷಾಂತರ ಭಕ್ತರು ಆಗಮಿಸುವ ಜಾತ್ರೆಯಲ್ಲಿ ಸ್ವಚ್ಛತೆ, ನೀರು, ಸಾರಿಗೆ ಇತರ ಮೂಲಭೂತ ಸೌಕರ್ಯ ಒದಗಿಸಬೇಕು. ರಾಜ್ಯದ ಸುಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಯನ್ನು ಎಲ್ಲರ ಸಹಕಾರದಿಂದ ಯಶಸ್ವಿಗೊಳಿಸಬೇಕಿದೆ. ಜಾತ್ರೆ ಸಮಯದಲ್ಲಿ ಹಳ್ಳಿಗಳಿಗೆ ಸಾರ್ವಜನಿಕರ ಬೇಡಿಕೆ ಅನುಗುಣವಾಗಿ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಸ್ಥಳೀಯರು ಹಾಗೂ ಸಾರ್ವಜನಿಕರು ಸಹಕಾರ ನೀಡಿದರೆ ಮಾರಿಕಾಂಬಾ ದೇವಾಲಯದ ರಥಬೀದಿ ಅಗಲೀಕರಣ ಮಾಡಲಾಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ವಿದ್ಯುತ್ ಲೈನ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ನೆಲದಲ್ಲಿ ವಿದ್ಯುತ್ ಲೈನ್ ಅಳವಡಿಸುವ ಯೋಜನೆಗೆ ₹3 ಕೋಟಿ ಅನುದಾನವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಮಂಜೂರು ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮಾತನಾಡಿ, ಭಾವನಾತ್ಮಕ ಮಾರಿಕಾಂಬಾ ದೇವಿ ಜಾತ್ರೆ ಯಶಸ್ವಿಗೊಳಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ. ರಾಜ್ಯವಲ್ಲದೇ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ನೀರು, ಸ್ವಚ್ಛತೆ ಕುರಿತು ಜವಾಬ್ದಾರಿಯಿಂದ ಆದ್ಯತೆ ಮೇರೆಗೆ ನಗರಸಭೆ ನಿರ್ವಹಣೆ ಮಾಡಬೇಕಿದೆ ಎಂದು ಹೇಳಿದರು. ವಿವಿಧ ಇಲಾಖೆ ಕೈಗೊಳ್ಳಬೇಕಾದ ವ್ಯವಸ್ಥೆ ಕುರಿತು ವಿವರಿಸಿದರು.ಡಿಎಸ್‌ಪಿ ಗೀತಾ ಪಾಟೀಲ, ನಗರಸಭೆ ಪೌರಾಯುಕ್ತ ಪ್ರಕಾಶ ಚೆನ್ನಪ್ಪನವರ್, ಹೆಸ್ಕಾಂ ಎಇಇ ನಾಗರಾಜ ಪಾಟೀಲ, ಸಾರಿಗೆ ಸಂಸ್ಥೆಯ ಅಧಿಕಾರಿ ಪ್ರವೀಣ ಶೇಟ್, ನಗರಸಭೆ ಮಾಜಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಪ್ರಮುಖರಾದ ರಘು ಕಾನಡೆ, ರಾಮು ಕಿಣಿ, ಜಿ.ಎಸ್. ಹೆಗಡೆ ಹಲ್ಲುಸರಿಗೆ, ವಿನಯ ಹೆಗಡೆ ಪಡಿಗೇರಿ, ಜ್ಯೋತಿ ಭಟ್ಟ ಮತ್ತಿತರರು ಸೂಕ್ತ ಸಲಹೆ ನೀಡಿದರು.
ದೇವಸ್ಥಾದ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುದೇಶ ಜೋಗಳೇಕರ ಸ್ವಾಗತಿಸಿದರು. ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ, ಧರ್ಮದರ್ಶಿ ಮಂಡಳಿ ಸದಸ್ಯರಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಮಂಜು ಪೂಜಾರಿ ಮತ್ತಿತರರಿದ್ದರು. ದೇವಾಲಯದ ವ್ಯವಸ್ಥಾಪಕ ಚಂದ್ರಕಾಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.