ಗಿರೀಶ್ ಮಾದೇನಹಳ್ಳಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ಅವರ ಪತಿಗೆ ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ‘ಬಿ’ ರಿಪೋರ್ಟ್ ಸಲ್ಲಿಸಿದೆ.
ತನ್ಮೂಲಕ ಲೈಂಗಿಕ ಹಗರಣದ ಸುಳಿಯಲ್ಲಿ ಸಿಲುಕಿರುವ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಮುನಿರತ್ನ ಅವರ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯೆ ಪತಿ ಲಗ್ಗೆರೆ ನಾರಾಯಣಸ್ವಾಮಿ ಮಾಡಿದ್ದ ಹನಿಟ್ರ್ಯಾಪ್ ಆರೋಪಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲವೆಂದು ತನ್ನ ವರದಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ದೂರುದಾರ ನಾರಾಯಣಸ್ವಾಮಿ ಹಾಗೂ ಆರೋಪಿತ ಮುನಿರತ್ನ ಸೇರಿ ಕೆಲವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಯಿತು. ಆದರೆ ತನಿಖೆಯಲ್ಲಿ ಹನಿಟ್ರ್ಯಾಪ್ ಯತ್ನ ಕೃತ್ಯಕ್ಕೆ ಪೂರಕವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?:
ಶಾಸಕ ಮುನಿರತ್ನ ಅವರಿಗೆ ಮಾತ್ರವಲ್ಲ, ಅವರ ಬೆಂಬಲಿಗರಿಗೂ ಎಸ್‌ಐಟಿ ರಿಲೀಫ್ ನೀಡಿದೆ. ತಮ್ಮ ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣದ ದೂರುದಾರೆಗೆ ಮುನಿರತ್ನ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲೂ ನ್ಯಾಯಾಲಯಕ್ಕೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಸಿದೆ. ಈ ಮೂಲಕ ಮುನಿರತ್ನ ಬೆಂಬಲಿಗರಾದ ಸುನಂದಮ್ಮ ಸೇರಿ ಮತ್ತಿತರರು ಸಂಕಷ್ಟದಿಂದ ಪಾರಾಗಿ ನಿರಾಳರಾಗಿದ್ದಾರೆ.ಐದು ಕೇಸ್‌ನಲ್ಲಿ ಎರಡರಲ್ಲಿ ಸಾಕ್ಷ್ಯವಿಲ್ಲ: ಎಸ್ಐಟಿ
ಇನ್ನುಳಿದ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಅವರಿಗೆ ಜಾತಿನಿಂದನೆ, ಬಿಜೆಪಿ ಕಾರ್ಯಕರ್ತೆ ಮೇಲೆ ಅತ್ಯಾಚಾರ ಹಾಗೂ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಅವರಿಗೆ ಜೀವ ಬೆದರಿಕೆ ಪ್ರಕರಣಗಳಲ್ಲಿ ಮುನಿರತ್ನ ವಿರುದ್ಧ ಸಾಕ್ಷ್ಯಗಳು ಪತ್ತೆಯಾಗಿದೆ ಎಂದು ಎಸ್‌ಐಟಿ ಹೇಳಿದೆ.