ಧಾರವಾಡ: ಎಂಟು ಶತಮಾನಗಳ ಇತಿಹಾಸ ಹೊಂದಿರುವ ಧರ್ಮಸ್ಥಳ ಹಾಗೂ ಈ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಯುತ್ತಿದ್ದು, ಕ್ಷೇತ್ರದ ಹೆಸರು ಹಾಳು ಮಾಡುತ್ತಿರುವವರ ವಿರುದ್ಧ ತನಿಖೆ ನಡೆಸಲು ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಆಗ್ರಹಿಸಲಾಯಿತು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮಹಿಳಾ ಸಂಘಗಳ ಸದಸ್ಯರು, ಎಸ್‌ಡಿಎಂ ಸಮೂಹ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಅನಾಮಿನಿಕ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡುತ್ತಿದೆ. ಇಷ್ಟಾಗಿಯೂ ಯಾವುದೇ ಆಧಾರ ಇಲ್ಲದೇ ಅನವಶ್ಯಕವಾಗಿ ಯೂಟ್ಯೂಬರ್ ಸಮೀರ, ಮಹೇಶ ಶೆಟ್ಟಿ ತಿಮ್ಮರೋಡಿ, ಗಿರೀಶ ಮಟ್ಟೆಣ್ಣವರ, ಸಂತೋಷ ಶೆಟ್ಟಿ, ಜಯಂತಿ ಟಿ. ಸೇರಿದಂತೆ ಹಲವು ಯೂಟ್ಯೂಬರ್‌ಗಳು ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿ ಪ್ರಸಾರ ಮಾಡುತ್ತಿದ್ದಾರೆ. ಕ್ಷೇತ್ರವನ್ನು ನಂಬಿರುವ ಭಕ್ತರಿಗೆ ಇದು ತೀವ್ರ ನೋವು ತರಿಸಿದೆ. ಸಾಮಾಜಿಕ ಹಾಗೂ ಧಾರ್ಮಿಕವಾಗಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ ಹೆಗ್ಗಡೆ ಹಾಗೂ ಅವರ ಕುಟುಂಬವನ್ನು ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅವರ ವರ್ತನೆ ಗಮನಿಸಿದರೆ ನ್ಯಾಯ ಪಡೆದುಕೊಳ್ಳುವ ಬದಲು ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವುದೇ ಗುರಿಯಾಗಿದೆ.
ಸೌಜನ್ಯಾ ಕೊಲೆ ಪ್ರಕರಣದ ಹೋರಾಟದ ಹೆಸರಿನಲ್ಲಿ ಇವರು ನಿರಂತರವಾಗಿ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅದರಿಂದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಇದರಿಂದ ಸಮಾಜದಲ್ಲಿ ಉದ್ವಿಗ್ನತೆ, ಶಾಂತಿಭಂಗ ಆಗುವ ಸ್ಥಿತಿಗೆ ಬಂದಿದೆ. ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಆದಾಯದ ಮೂಲಗಳೇನು? ಸಮಾಜಕ್ಕೆ ಅವರೇನಾದರೂ ಕೊಡುಗೆಗಳನ್ನು ನೀಡಿದ್ದಾರೆಯೇ? ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ? ಎಂಬುದನ್ನು ತನಿಖೆಗೊಳಪಡಿಸಿ ಸತ್ಯಾಂಶ ಹೊರ ತರಬೇಕು. ಈ ಷಡ್ಯಂತ್ರದ ಹಿಂದಿರುವ ಸತ್ಯಾಂಶ ಬಯಲಿಗೆ ತರಲು ರಾಜ್ಯ ಸರ್ಕಾರ ಮತ್ತೊಂದು ಎಸ್‌ಐಟಿ ರಚನೆ ಮಾಡಬೇಕು ಎಂದು ಭಕ್ತರು ತಮ್ಮ ಮನವಿಯಲ್ಲಿ ಮುಖ್ಯಮಂತ್ರಿಗೆ ಆಗ್ರಹಿಸಿದರು.ಭಕ್ತ ವೇದಿಕೆಯ ಮುಖಂಡರು, ಬಿಜೆಪಿ ಮುಖಂಡ ರಾಜಣ್ಣ ಕೊರವಿ, ಭಕ್ತರು, ಕಾಂಗ್ರೆಸ್ ಮುಖಂಡ ಶಿವಶಂಕರ ಹಂಪಣ್ಣವರ, ಎಸ್‌ಡಿಎಂ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ವಿಜಯ ಕುಲಕರ್ಣಿ, ಜೈನ ಸಮಾಜದ ಸಂತೋಷ ಪಾಟೀಲ, ಸವಿತಾ ಅಮರಶೆಟ್ಟಿ, ಅಕ್ಕಸಾಲಿಗ ವರ್ತಕರ ಸಂಘದ ಮೋಹನ ಅರ್ಕಸಾಲಿ, ವಸಂತ ಅರ್ಕಸಾಲಿ ಸೇರಿದಂತೆ ಹಲವು ಮಾತನಾಡಿದರು.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರು ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ? 800 ವರ್ಷಗಳ ಇತಿಹಾಸ ಹೊಂದಿರುವ ಕ್ಷೇತ್ರವನ್ನು ಅಪವಿತ್ರಗೊಳಿಸಲು ಪಣ ತೊಟ್ಟಂತೆ ವರ್ತಿಸುತ್ತಿದ್ದಾರೆ. ಇದನ್ನು ಭಕ್ತಗಣ ಸಹಿಸೋದಿಲ್ಲ. ರಾಜ್ಯ ಸರ್ಕಾರ ಕ್ಷೇತ್ರದ ವಿರುದ್ಧ ಪಿತೂರಿ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಲಕ್ಷಾಂತರ ಭಕ್ತರು ರಾಜಧಾನಿಗೆ ಬರಬೇಕಾದೀತು ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ರಾಜಣ್ಣ ಕೊರವಿ ಹೇಳಿದರು.