ಧರ್ಮಸ್ಥಳ ಕ್ಷೇತ್ರವನ್ನು ಕಳಂಕಿತಗೊಳಿಸಲು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಕಠಿಣ ನಿಲುವು ತಾಳುವುದು ನಮ್ಮೆಲ್ಲರ ಜವಾಬ್ದಾರಿ. ಆದ ಕಾರಣ ಸರಕಾರ ಈ ಕುರಿತು ಎಸ್ ಐ ಟಿ ತನಿಖೆಯ ಕುರಿತ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಉಡುಪಿ ಜಿಲ್ಲ ಬಿಜೆಪಿ ಮಾಧ್ಯಮ ಪ್ರಮುಖ್ಖ್ ಶ್ರೀನಿಧಿ ಹೆಗ್ಡೆ ಆಗ್ರಹಿಸಿದ್ದಾರೆ
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ, ಇದು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ. ಇದು ನಮ್ಮ ನಾಡಿನ ನಂಬಿಕೆಯ ಮಡಿಲು, ಇಂತಹ ಕ್ಷೇತ್ರದ ವಿರುದ್ಧ ಧಾರ್ಮಿಕ ಶ್ರದ್ಧೆಯ ವಿರೋಧಿಗಳು ಸುಳ್ಳುಗಳ ಕಂತೆಯೊಂದಿಗೆ ಅಪಪ್ರಚಾರ ಮಾಡುತ್ತಿರುವುದು, ನಿಜಕ್ಕೂ ಭಕ್ತರ ನಂಬಿಕೆಗೆ ನೋವುಂಟು ಮಾಡುವಂತಾಗಿದೆ. ಈ ದುಷ್ಟ ಶಕ್ತಿಗಳಿಗೆ, ಭಕ್ತರು ಶಾಂತವಾಗಿ ಕುರುಡಾಗಿ ನಿಲ್ಲದೆ, ಕಾನೂನಿನ ಮೂಲಕ, ಶ್ರದ್ಧೆಯ ಶಕ್ತಿಯಿಂದ, ಧೈರ್ಯದಿಂದ ನಿಲ್ಲಬೇಕಿದೆ. ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹೇಳಿದ್ದಾರೆ.
ರಾಜ್ಯ ಸರ್ಕಾರ ತನಿಖೆಗೆ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ. ಈ ಮಧ್ಯೆ ಕೆಲವರು ಕ್ಷೇತ್ರವನ್ನು ಗುರಿಯಾಗಿಸಿ, ಕೆಲವರ ಕುಮ್ಮಕ್ಕಿನಿಂದ, ಧರ್ಮ, ದೇವರು ಹಾಗೂ ಶ್ರದ್ಧಾಭಕ್ತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವುದು ಕಂಡುಬರುತ್ತಿದೆ ಇದು ಅಕ್ಷಮ್ಯ ಹಾಗೂ ಒಪ್ಪಲು ಅಸಾಧ್ಯ. ಇದು ಕೇವಲ ತೇಜೋವಧೆ ಮಾತ್ರವಲ್ಲ, ಇದು ನಂಬಿಕೆಯ ಮೇಲೆ ಹೂಡುತ್ತಿರುವ ಆಯುಧ. ಇದು ನಮ್ಮ ಶ್ರದ್ಧೆಯ ಪ್ರಭಾವವನ್ನು ಕುಗ್ಗಿಸುವ, ವಿಭಜನೆಯ ಮೂಲಕ ಶ್ರದ್ಧಾ ಚಟುವಟಿಕೆಗೆ ಮಸಿ ಬಳಿಯುವ ಯತ್ನ ಅಲ್ಲದೆ ಮತ್ತೇನೂ ಅಲ್ಲ. ಈ ಭಯಾನಕ ಅಪಪ್ರಚಾರದ ಹಿಂದೆ ಒಂದಿಷ್ಟು ಯೋಜಿತ ಜಾಲವಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವ ಹಾಗಿಲ್ಲ. ಹಿಂದಿನ ವರ್ಷಗಳಲ್ಲಿ ಪ್ರಭಾವಿ ಹುದ್ದೆಗಳಲ್ಲಿ ಇದ್ದ ಕೆಲವು ಶಕ್ತಿಗಳು ಇಂದು ತೆರೆಮರೆಯಲ್ಲಿ ನೇಪಥ್ಯ ನಾಯಕರಂತೆ ಕೆಲಸ ಮಾಡುತ್ತಿರುವ ಶಂಕೆಯೂ ಮೂಡುತ್ತಿದೆ. ಇನ್ನು ಕೆಲವು ಸಾಮಾಜಿಕ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ತನಿಖೆ ಮುಗಿಯುವ ಮುನ್ನವೇ ತೀರ್ಪು ನೀಡುವಂತೆ ವರ್ತಿಸುತ್ತಿರುವುದು ಗಂಭೀರ ಬೆಳವಣಿಗೆ. ಅಭಿಪ್ರಾಯ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ‘ಅಭಿವ್ಯಕ್ತಿ ಸ್ವೇಚ್ಛಾಚಾರ’ ಖಂಡನಾರ್ಹ ಎಂದವರು ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ನೂರಾರು ದೇವಸ್ಥಾನಗಳ ಪುನರುತ್ಥಾನ, ವ್ಯಸನಮುಕ್ತ ಚಳವಳಿ, ರುದ್ರಭೂಮಿಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ ಸೇರಿದಂತೆ ಸಾವಿರಾರು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ನಾಡಿನ ಆಸ್ತಿಯಂತೆ ಬಾಳುತ್ತಿದೆ. ಇಂತಹ ಕ್ಷೇತ್ರವನ್ನು ಕಳಂಕಿತಗೊಳಿಸಲು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಕಠಿಣ ನಿಲುವು ತಾಳುವುದು ನಮ್ಮೆಲ್ಲರ ಜವಾಬ್ದಾರಿ. ಆದ ಕಾರಣ ಸರಕಾರ ಈ ಕುರಿತು ಎಸ್ ಐ ಟಿ ತನಿಖೆಯ ಕುರಿತ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು, ಹಾಗೂ ಕೋಟ್ಯಂತರ ಹಿಂದೂಗಳ ನಂಬಿಕೆಯ ತೇಜೋವಧೆಗೆ ಮುಂದಾಗಿರುವ ವಿಚಿತ್ರಕಾರಿ ಶಕ್ತಿಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಈ ಮೂಲಕ ಧರ್ಮಸ್ಥಳ ಮಾತ್ರ ಅಲ್ಲದೆ, ಸನಾತನಿ ಹಿಂದೂಗಳ ಧರ್ಮದ ಆಶ್ರಯವನ್ನೇ ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಶ್ರೀನಿಧಿ ಹೆಗ್ಡೆ ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.