ಸೀತಾರಾಮ ದಂಪತಿ ಬದುಕು ಮಂಗಳಮಯ-ಶ್ರೀ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ

KannadaprabhaNewsNetwork |  
Published : May 24, 2026, 02:45 AM IST
ಫೋಟೋ: ೨೩ಪಿಟಿಆರ್-ಸವಣೂರು ೧,೨,೩ | Kannada Prabha

ಸಾರಾಂಶ

ಅಸಾಮಾನ್ಯ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲ ಕೈ ಬೆರಳುಗಳನ್ನು ಹೊಂದಿರುವ ಕಾರಣಕ್ಕೆ ಮನುಷ್ಯ ಬದುಕು ಇತರ ಜೀವಿಗಳಿಂದ ಭಿನ್ನವಾಗಿರುತ್ತದೆ. ಮನುಷ್ಯ ಜೀವನ ಮಂಗಳಮಯ ಆಗಬೇಕಾದರೆ ಸಾಮಾಜಿಕ ವಿಸ್ತಾರ ಮತ್ತು ಆಧ್ಯಾತ್ಮಿಕ ಎತ್ತರವಿರಬೇಕು. ಅಂತಹ ಬದುಕನ್ನು ಮಂಗಳಮಯ ಬದುಕು ಎನ್ನುತ್ತೇವೆ. ಸವಣೂರು ಸೀತಾರಾಮ ರೈಗಳದ್ದು ಅಂತಹ ಮಂಗಳಮಯ ಬದುಕಾಗಿದೆ. ಅವರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಗಳು ಅವರ ಬದುಕನ್ನು ಮಂಗಳಮಯ ಮಾಡಿದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಪುತ್ತೂರು: ಅಸಾಮಾನ್ಯ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲ ಕೈ ಬೆರಳುಗಳನ್ನು ಹೊಂದಿರುವ ಕಾರಣಕ್ಕೆ ಮನುಷ್ಯ ಬದುಕು ಇತರ ಜೀವಿಗಳಿಂದ ಭಿನ್ನವಾಗಿರುತ್ತದೆ. ಮನುಷ್ಯ ಜೀವನ ಮಂಗಳಮಯ ಆಗಬೇಕಾದರೆ ಸಾಮಾಜಿಕ ವಿಸ್ತಾರ ಮತ್ತು ಆಧ್ಯಾತ್ಮಿಕ ಎತ್ತರವಿರಬೇಕು. ಅಂತಹ ಬದುಕನ್ನು ಮಂಗಳಮಯ ಬದುಕು ಎನ್ನುತ್ತೇವೆ. ಸವಣೂರು ಸೀತಾರಾಮ ರೈಗಳದ್ದು ಅಂತಹ ಮಂಗಳಮಯ ಬದುಕಾಗಿದೆ. ಅವರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಗಳು ಅವರ ಬದುಕನ್ನು ಮಂಗಳಮಯ ಮಾಡಿದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಸವಣೂರಿನ ಶಿಲ್ಪಿ ಎಂದೇ ಹೆಸರಾಗಿರುವ ಉದ್ಯಮಿ ಸವಣೂರು ಕೆ. ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್ ರೈ ಅವರ ೫೦ನೇ ವರ್ಷದ ವಿವಾಹ ವಾರ್ಷಿಕೊತ್ಸವ `ಸೀತಾ ಕಸ್ತೂರಿ ಕಲ್ಯಾಣ ೫೦ರ ಸಂಭ್ರಮ ಕಾರ್ಯಕ್ರಮ ಶನಿವಾರ ಸಂಜೆ ಸವಣೂರಿನ ರಶ್ಮಿ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿದರು.ಆಧ್ಯಾತ್ಮಿಕ, ಸಾಮಾಜಿಕ ಸಾಧನೆ ವಿಸ್ತರವಾದ ಗೌರವ ನೀಡುತ್ತದೆ. ಭಾರತೀಯ ಕೌಟುಂಬಿಕ ಪದ್ಧತಿ ವಿಶಿಷ್ಟ. ಜನ್ಮಾಂತರದ ಸಂಬಂಧ ಇದು ಎಂದು ಕಿರಿಯರಿಗೆ ತಿಳಿಸಬೇಕಾಗಿದೆ. ಸೀತಾರಾಮ ರೈ ಅವರ ಬದುಕಿನ ಶಿಸ್ತು, ಸಂಯಮ, ಸೇವೆ ಎಲ್ಲರಿಗೂ ಮಾದರಿಯಾಗಿದೆ. ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸೀತಾ ಕಸ್ತೂರಿ ಕಲ್ಯಾಣವು ಆದರ್ಶಮಯ ಕಾರ್ಯಕ್ರಮವಾಗಿದ್ದು, ಅರಿತು ಬೆರೆತು ಬಾಳಿ ಬದುಕಿದರೆ ಆ ಬದುಕು ಸಾಕ್ಷತ್ಕಾರವಾಗುತ್ತದೆ. ಸಂಬಂಧ ಅರ್ಥೈಸಿಕೊಂಡು ಬದುಕಿನಲ್ಲಿ ಕೂಡಿಸಿಕೊಂಡರೆ ಉನ್ನತಿ ಸಾಧ್ಯವಾಗುತ್ತದೆ. ಸಂಬಂದಗಳು ವ್ಯವಹಾರ, ವ್ಯಾಪಾರಗಳಾಗಬಾರದು. ಸಹಕಾರಿ ತತ್ವ ವನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಸವಣೂರು ಸೀತಾರಾಮ ರೈಗಳು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಈ ಕಾರ್ಯಕ್ರಮವು ಅವರ ದಾಂಪತ್ಯದ ಅಮೃತಮಹೋತ್ಸವಕ್ಕೆ ಮುನ್ನುಡಿಯಾಗಲಿ ಎಂದು ಹಾರೈಸಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ನ ಸಂಸ್ಥಾಪಕ ಡಾ. ಎ.ಜೆ. ಶೆಟ್ಟಿ ಮಾತನಾಡಿ ಸೀತಾರಾಮ ರೈ ಅವರು ಮಾಡಿದ ಒಳ್ಳೆಯ ಕೆಲಸಕ್ಕೆ ಉತ್ತಮ ಪ್ರತಿಫಲ ಸಮಾಜದಿಂದ ಸಿಕ್ಕಿದೆ. ಹಲವು ಮಂದಿಗೆ ಉದ್ಯೋಗ ಕೊಟ್ಟು ಬದುಕು ಕಟ್ಟಿ ಕೊಟ್ಟಿದ್ದಾರೆ. ಶಿಸ್ತಿನ ಸಿಪಾಯಿ ಆದ ತಂದೆಯ ಆದರ್ಶ ಪಾಲಿಸಿಕೊಂಡು ಬೆಳೆದಿದ್ದಾರೆ. ಆದಾಯದ ಪಾಲಿನಲ್ಲಿ ಸಮಾಜಕ್ಕೂ ಕೊಡುಗೆ ನೀಡಿದ್ದಾರೆ. ಅವರಿಗೆ ದೇವರು ಇನ್ನಷ್ಟು ಆಯಸ್ಸು ನೀಡಿ ಸಮಾಜಕ್ಕೆ ಸೇವೆ ನೀಡುವಂತಾಗಲಿ ಎಂದು ಹೇಳಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ೫೦ ದಿನ ನೆಮ್ಮದಿಯ ದಾಂಪತ್ಯ ನಡೆಸಲು ಕಷ್ಟ ಪಡುವ ದಿನದಲ್ಲಿ ೫೦ ವರ್ಷಗಳ ಸುಧೀರ್ಘ ಸಾರ್ಥಕ ಜೀವನ ನಡೆಸಿದ ಸೀತಾರಾಮ ರೈ ದಂಪತಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರ ಜನಪ್ರೀತಿಗೆ ಇಲ್ಲಿ ಸೇರಿರುವ ಸಾವಿರಾರು ಹಿರಿಯರ ಸಾನಿಧ್ಯ ಸಾಕ್ಷಿಯಾಗಿದೆ. ಸಮಾಜಕ್ಕೆ ಇನ್ನಷ್ಟು ಸೇವೆಯು ಅವರಿಂದ ಲಭಿಸಲಿ ಎಂದರು. ಸಾಧಕರಿಗೆ ಸನ್ಮಾನ ನೆರವೇರಿಸಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಬದುಕಿನಲ್ಲಿ ಆದರ್ಶತನ ಬೆಳೆಸಿಕೊಂಡು ಬಂದಿರುವ ಸವಣೂರು ಸೀತಾರಾಮ ರೈ ಸರಳ ಜೀವನ ನಡೆಸಿದವರು. ಹಂತ ಹಂತವಾಗಿ ಬೆಳೆಯುತ್ತಾ ಇದೀಗ ಈ ಮಟ್ಟವನ್ನು ಅವರು ತಲುಪಿದ್ದಾರೆ. ವಿದ್ಯಾಕ್ಷೇತ್ರ, ಧಾರ್ಮಿಕ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಧಾರ್ಮಿಕ, ಸಹಕಾರ, ಶಿಕ್ಷಣ ಕ್ಷೇತ್ರದಲ್ಲಿ ಅಪರೂಪದ ಸೇವಾ ಸಾಧಕ ಸೀತಾರಾಮ ರೈ ಅವರು ಜಿಲ್ಲೆಯ ಎಲ್ಲರಿಗೂ ಮಾದರಿಯಾಗಿದ್ದು ಅವರ ವೈವಾಹಿಕ ಕಲ್ಯಾಣೋತ್ಸವ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆಯಾಗಲಿದೆ. ವಿಕಸಿತ ಭಾರತದ ಸಂಕಲ್ಪಕ್ಕೆ ನಮ್ಮ ಜಿಲ್ಲೆಯ ಪ್ರತಿಯೊಬ್ಬರು ಕೊಡುಗೆ ನೀಡಬೇಕು ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸೀತಾರಾಮ ರೈ ಅವರು ನಡೆದು ಬಂದ ದಾರಿ ಸಮಾಜಕ್ಕೆ ಮಾರ್ಗದರ್ಶನಕರವಾಗಿದೆ. ನಾನು ಬಾಲ್ಯದಿಂದಲೇ ಅವರೊಂದಿಗೆ ಒಡನಾಟದಿಂದ ಬೆಳೆದವನು. ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ. ಅವರು ಕೇವಲ ಸವಣೂರಿನ ಶಿಲ್ಪಿಯಲ್ಲ ಅವರೊಬ್ಬ ಜಿಲ್ಲೆಯ ಶಿಲ್ಪಿ ಅವರನ್ನು ನೋಡಿ ಕಲಿತುಕೊಳ್ಳುವುದು ಬಹಳಷ್ಟಿದೆ ಎಂದರು.

ಕೊಂಬೆಟ್ಟು ಸರಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕಿ ಕಾವ್ಯ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.

ಸನ್ಮಾನ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ, ಕಂಬಳ ಉದ್ಘೋಷಕ ಮತ್ತು ತೀರ್ಪುಗಾರರಾದ ಎಡ್ತೂರು ರಾಜೀವ್ ಶೆಟ್ಟಿ ಮತ್ತು ಕನ್ನಡ ಚಲನಚಿತ್ರ ರಂಗದ ನಿರ್ಮಾಪಕ ರವಿ ರೈ ಕಳಸ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಶಿಕಲಾ ಆಳ್ವ ಸನ್ಮಾನ ಪತ್ರ ವಾಚಿಸಿದರು.

ಸವಣೂರು ಸೀತಾರಾಮ ರೈ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸೀತಾರಾಮ ರೈ ಅವರ ಪುತ್ರಿ ರಶ್ಮಿ ಎ. ಶೆಟ್ಟಿ ಮತ್ತು ಅಳಿಯ ಅಶ್ವಿನ್ ಎಲ್. ಶೆಟ್ಟಿ ಸವಣೂರು, ಸೊಸೆ ಪಲ್ಲವಿ ಎಂ. ರೈ ಮತ್ತು ಪುತ್ರ ಮಹೇಶ್ ರೈ ಸವಣೂರು, ಸೊಸೆ ಅಶ್ವಿತಾ ಆರ್. ರೈ ಮತ್ತು ಪುತ್ರ ಡಾ. ರಾಜೇಶ್ ರೈ ಸವಣೂರು ಸ್ವಾಮೀಜಿಗಳು ಹಾಗೂ ಅತಿಥಿಗಳನ್ನು ಗೌರವಿಸಿದರು.

ಪವಿತ್ರ ರೂಪೇಶ್ ಶೇಟ್ ಮತ್ತು ತಂಡ ಪ್ರಾರ್ಥಿಸಿದರು. ಎನ್. ಜಯಪ್ರಕಾಶ ರೈ ಚೊಕ್ಕಾಡಿ ವಂದಿಸಿದರು. ಚಂದ್ರಶೇಖರ್ ಮತ್ತು ಮಾಧವಿ ರೈ ಕಾರ್ಯಕ್ರಮ ನಿರ್ವಹಿಸಿದರು.

ಕುಟುಂಬಿಕರ ಸಮ್ಮುಖದಲ್ಲಿ ಡಾ. ಮೋಹನ್ ಆಳ್ವ ನೇತೃತ್ವದಲ್ಲಿ ಆಳ್ವಾಸ್ ಪ್ರತಿಷ್ಠಾನದ ನೇತೃತ್ವದಲ್ಲಿ ಸೀತಾರಾಮ ರೈ ಮತ್ತು ಕಸ್ತೂರಿಕಲಾ ದಂಪತಿ ಪರಸ್ಪರ ಹಾರ ಹಾಕಿದರು.

ಅಪರಾಹ್ನ ೩ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಜರಗಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಹ್ಮಾವರ ಜಿ ಎಮ್ ಶಾಲೆಯಲ್ಲಿ ರಾಜ್ಯ ತ್ರೋಬಾಲ್ ಆಯ್ಕೆ ಶಿಬಿರ
ಮೂಲ್ಕಿ: ನೂತನ ಪ್ಲಾಟ್‌ಫಾರ್ಮ್ ಲೋಕಾರ್ಪಣೆಗೆ ಸಿದ್ಧ