ಹುಬ್ಬಳ್ಳಿ: ಯುವತಿ ವಿಚಾರವಾಗಿ ಇಲ್ಲಿಯ ರಾಜಗೋಪಾಲನಗರದ ವಿನಾಯಕ ಭಂಡಾರಿ ಎಂಬಾತನನ್ನು ಒತ್ತಾಯ ಪೂರ್ವಕವಾಗಿ ಶೆಡ್‌ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರಿಪೇಟೆ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು. ಇಂದಿರಾನಗರದ ಪೃಥ್ವಿರಾಜ ಬೆತಾಪಲ್ಲಿ, ನವೀನ ತಲಪೂರ, ನಿಖಿಲ್ ಕತ್ರಿಮಲ್ಲ, ಮನೋಜ ಸಾಮ್ರಾಣಿ, ಯಶವಂತ ತಲಪೂರ ಮತ್ತು ಪ್ರಭುಕುಮಾರ ದೊಡಮನಿ ಬಂಧಿತ ಆರೋಪಿಗಳು. ಬಂಧಿತರಿಂದ 2 ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಭಾನುವಾರ ತಡರಾತ್ರಿ ಕೌಲಪೇಟೆ ಪಾನ್‌ಶಾಪ್ ಬಳಿ ವಿನಾಯಕ ಭಂಡಾರಿಯನ್ನು ಅಪಹರಿಸಿಕೊಂಡು ಶೆಡ್‌ಗೆ ಹೋಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.ಏನಿದು ಪ್ರಕರಣ?: ಹಲ್ಲೆಗೊಳಗಾದ ವಿನಾಯಕ ಭಂಡಾರಿ ಯುವತಿ ಜತೆಗೆ ಈ ಹಿಂದೆ ಒಡನಾಟ ಹೊಂದಿದ್ದನು. ನಂತರ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ದೂರಾಗಿದ್ದರು. ಅದೇ ಯುವತಿಯನ್ನು ಪೃಥ್ವಿರಾಜ ಬೇತಾಪಲ್ಲಿ ಪ್ರೀತಿಸುತ್ತಿದ್ದನು. ಅಲ್ಲದೇ, ಯುವತಿ ವಿನಾಯಕ ಭಂಡಾರಿ ಪತ್ನಿ ಸಹೋದರಿಯಾಗಿದ್ದು, ಇವರ ಪ್ರೀತಿ ವಿಚಾರಕ್ಕೆ ಅಡ್ಡಿ ಉಂಟು ಮಾಡಿದ್ದನು. ಇದೇ ಹಿನ್ನೆಲೆಯಲ್ಲಿ ಪೃಥ್ವಿರಾಜ ಬೇತಾಪಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಪೃಥ್ವಿರಾಜ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇಲ್ಲಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಕೂಡ ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಗಡಿಪಾರು ಸೇರಿದಂತೆ ಕಾನೂನಾತ್ಮಕ ಕ್ರಮಕೈಗೊಳ್ಳಲು ಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ಯಾಸ್ ರಿಫಿಲ್ಲಿಂಗ್ ದಂಧೆ ಕುರಿತು ತನಿಖೆ: ಇದೇ ವೇಳೆ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಪಗೇರಿಯಲ್ಲಿ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಯುತ್ತಿದೆ ಎಂದು ಆಹಾರ ನಿರೀಕ್ಷಕ ಶಿವಪ್ಪ ವನಹಳ್ಳಿಯವರು ದೂರು ನೀಡಿದ್ದು, ಪರವಾನಗಿ ಇಲ್ಲದ, ಅನಧಿಕೃತವಾಗಿ 409 ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ಈ ಕುರಿತು ರಾಜೇಸಾಬ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ವಿರುದ್ಧ ದೂರು ನೀಡಿದ್ದು, ಆತ ಪರಾರಿಯಾಗಿದ್ದಾನೆ.ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಯಾವ ಉದ್ದೇಶದಿಂದ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿತ್ತು. ಅಲ್ಲಿ ಯಾವ ರೀತಿಯ ಚಟುವಟಿಕೆ ನಡೆಯುತ್ತಿದೆ ಎಂದು ತನಿಖೆ ಮೂಲಕ ಹೊರತರುವುದಾಗಿ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಕರೆ ಬಂದಿವೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.ಉಪನಗರ ಠಾಣೆಯ ಕಟ್ಟಡ ಫ್ಲೈ ಓವರ್ ಕಾಮಗಾರಿ ವ್ಯಾಪ್ತಿಗೆ ಹೋಗಲಿದೆ. ಸದ್ಯ ಈ ಕಟ್ಟಡದಲ್ಲಿ ಮಹಿಳಾ ಪೊಲೀಸ್ ಠಾಣೆ, ಟ್ರಾಫಿಕ್ ಮ್ಯಾನೆಜ್ಮೆಂಟ್ ಜಂಕ್ಷನ್, ಉತ್ತರ ವಿಭಾಗ ಎಸಿಪಿ ಕಚೇರಿಗಳಿವೆ. ಹೀಗಾಗಿ ಎಲ್ಲ ಕಚೇರಿಗಳನ್ನು ಸೂಕ್ತ ಸ್ಥಳ ನೋಡಿ ಸ್ಥಳಾಂತರಕ್ಕೆ ಕ್ರಮವಹಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ಉಮೇಶ ಚಿಕ್ಕಮಠ, ಪಿಐ ಮಲ್ಲಿಕಾರ್ಜುನ ಸಿಂದೂರ, ಕಮರಿಪೇಟೆಯ ಮಹಾಂತೇಶ ಹೊಳಿ ಉಪಸ್ಥಿತರಿದ್ದರು.