ಕುಂಚ ನಮ್ಮದು-ಬಣ್ಣ ನಿಮ್ಮದು ಗುಂಪಿನ ಕಾರ್ಯ ಶ್ಲಾಘನೀಯ

KannadaprabhaNewsNetwork | Published : Jul 1, 2025 12:47 AM

ರಾಜ್ಯದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಉಚಿತವಾಗಿ ಬಣ್ಣ ಹಚ್ಚುವುದರ ಮೂಲಕ ಕನ್ನಡ ಶಾಲೆಗಳ ಉಳಿವು, ಬೆಳವಣಿಗೆಗಾಗಿ ಕ್ರಿಯಾಶೀಲರಾಗಿರುವ ಕುಂಚ ನಮ್ಮದು-ಬಣ್ಣ ನಿಮ್ಮದು ಗುಂಪಿನ ಕನ್ನಡಿಗ, ಕನ್ನಡತಿಯರ ಕಾರ್ಯ ಶ್ಲಾಘನೀಯವಾದುದು ಎಂದು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ರಾಜ್ಯದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಉಚಿತವಾಗಿ ಬಣ್ಣ ಹಚ್ಚುವುದರ ಮೂಲಕ ಕನ್ನಡ ಶಾಲೆಗಳ ಉಳಿವು, ಬೆಳವಣಿಗೆಗಾಗಿ ಕ್ರಿಯಾಶೀಲರಾಗಿರುವ ಕುಂಚ ನಮ್ಮದು-ಬಣ್ಣ ನಿಮ್ಮದು ಗುಂಪಿನ ಕನ್ನಡಿಗ, ಕನ್ನಡತಿಯರ ಕಾರ್ಯ ಶ್ಲಾಘನೀಯವಾದುದು ಎಂದು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಸಂತಸ ವ್ಯಕ್ತಪಡಿಸಿದರು.

ಶಿವನೂರಿನ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಉಚಿತವಾಗಿ ಬಣ್ಣ ಹಚ್ಚುವುದರ ಮೂಲಕ ಶಾಲೆಯ ಅಂದವನ್ನು ಹೆಚ್ಚಿಸಿದ ಕುಂಚ ನಮ್ಮದು-ಬಣ್ಣ ನಿಮ್ಮದು ಗುಂಪಿನ ಕನ್ನಡಿಗ-ಕನ್ನಡತಿಯರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಈ ತಂಡದವರ ಸರ್ಕಾರಿ ಕನ್ನಡ ಶಾಲೆಗಳ ಪ್ರೇಮಕ್ಕೆ ಎಲ್ಲರ ಪರವಾಗಿ ಅಭಿನಂದನೆ ತಿಳಿಸಿದರು.ಶಾಲೆಯ ಮುಖ್ಯ ಶಿಕ್ಷಕರಾದ ವಿದ್ಯಾ ಚಂಗೋಲಿ ಮಾತನಾಡಿ, ತಮ್ಮ ಶಾಲೆಯ ಅಂದವನ್ನು ಹೆಚ್ಚಿಸಿದ ಈ ಯುವಕರನ್ನು ಮತ್ತು ಉಚಿತವಾಗಿ ಬಣ್ಣ ಕೊಡಿಸಿ ಕೆಲಸದ ಎಲ್ಲ ಜವಾಬ್ದಾರಿ ನಿರ್ವಹಿಸಿದ ಶಿವನೂರಿನ ಶಿವಶಕ್ತಿ ಗ್ರಾಮಾಭಿವೃದ್ಧಿ ಸಂಘದ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಿವಶಕ್ತಿ ಗ್ರಾಮಾಭಿವೃದ್ಧಿ ಸಂಘ ಮತ್ತು ಶಾಲೆಗಳ ಪರವಾಗಿ ಕಲಾಕಾರರನ್ನು ಸನ್ಮಾನಿಸಲಾಯಿತು. ತಮ್ಮ ವೃತ್ತಿಯ ಜೊತೆಗೆ ಬಿಡುವು ಮಾಡಿಕೊಂಡು ಕರ್ನಾಟಕದಾದ್ಯಂತ ಈ ಕೆಲಸ ಮಾಡುತ್ತಿರುವುದಾಗಿ ಗೌರವ ಸ್ವೀಕರಿಸಿದವರ ಪರವಾಗಿ ಮಾತನಾಡಿ ಭಾಗ್ಯಾ ಮತ್ತು ಸಂತೋಷ ತಿಳಿಸಿದರು. ರಾಯಚೂರು, ಕಾಗವಾಡ, ವಿಜಯಪುರ, ರಾಯಭಾಗ, ಮಾರ್ಗನಕೊಪ್ಪ ಮುಂತಾದ ಪ್ರದೇಶಗಳಿಂದ ಆಗಮಿಸಿದ ತಂಡದ ಸದಸ್ಯರಾದ ಭಾಗ್ಯಾ, ಪೂಜಾ, ಮಂಜುಳಾ, ಸಂತೋಷ ಮುಂತಾದವರು ತಮ್ಮ ಹೆಸರಿನ ಮುಂದೆ ಕನ್ನಡಿಗ-ಕನ್ನಡತಿಯರು ಎಂದು ಇಟ್ಟುಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಪ್ರೊ.ಎನ್.ಜಿ.ಪಾಟೀಲ ಅಭಿನಂದನಾ ಪರ ಮಾತುಗಳನ್ನು ಆಡಿದರು. ಶಿಕ್ಷಕ ಮಹಾಂತೇಶ ಪೂಜೇರ ಸ್ವಾಗತಿಸಿ, ನಿರೂಪಿಸಿದರು. ಶಿವಾನಂದ ಮಾಟೊಳ್ಳಿ ವಂದಿಸಿದರು. ಊರಿನ ಯುವಕರು, ಶಾಲೆಯ ಸಿಬ್ಬಂದಿ, ಎಸ್.ಡಿ.ಎಂ.ಸಿ ಮತ್ತು ಪಂಚಾಯತಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.