ಗೌರ್‍ನರ್‌ ಭಾಷಣ ಮಧ್ಯೆ ಜನರು ಎದ್ದು ನಿಂತಿದ್ದೇಕೆ?

Sujatha NRPublished : Jun 30, 2025 12:03 PM

ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡಲು ಬಾರದವರೂ ಬೇಕಾದಷ್ಟು ಜನರು ಇದ್ದಾರೆ. ದೊಡ್ಡ ಕಾರ್ಯಕ್ರಮ ನಡೆಸುವ ಜವಾಬ್ದಾರಿ ಹೊತ್ತವರು ಮೊದಲೇ ಈ ಬಗ್ಗೆ ರಿಹರ್ಸಲ್‌ ಮಾಡಿಕೊಳ್ಳದಿದ್ದರೆ ಎಡವಟ್ಟು ಗ್ಯಾರಂಟಿ.

ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡಲು ಬಾರದವರೂ ಬೇಕಾದಷ್ಟು ಜನರು ಇದ್ದಾರೆ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಕಾರ್ಯಕ್ರಮಗಳಲ್ಲಿ ರೆಡಿಮೇಡ್‌ ರಾಷ್ಟ್ರಗೀತೆ ಪ್ಲೇ ಮಾಡುವುದೇ ಹೆಚ್ಚಾಗಿದೆ. ದೊಡ್ಡ ಕಾರ್ಯಕ್ರಮ ನಡೆಸುವ ಜವಾಬ್ದಾರಿ ಹೊತ್ತವರು ಮೊದಲೇ ಈ ಬಗ್ಗೆ ರಿಹರ್ಸಲ್‌ ಮಾಡಿಕೊಳ್ಳದಿದ್ದರೆ ಎಡವಟ್ಟು ಗ್ಯಾರಂಟಿ.

ದೊಡ್ಡ ಕಾರ್ಯಕ್ರಮದಲ್ಲೇ ಇಂತಹದೊಂದು ಎಡವಟ್ಟು ನಡೆದು ರಾಜ್ಯಪಾಲರು, ಗಣ್ಯರು ಹಾಗೂ ಸಾರ್ವಜನಿಕರು ಕಿರಿ ಕಿರಿ ಅನುಭವಿಸಬೇಕಾಯಿತು.

ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಸಂಘಟನೆಯೊಂದು ರಾಜಧಾನಿಯ ಅರಮನೆ ಮೈದಾನದಲ್ಲಿ ಭರ್ಜರಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು. ಗಣ್ಯರೆಲ್ಲರೂ ಬಂದ ಬಳಿಕ ವೇದಿಕೆಗೆ ಆಗಮಿಸಿದ ನಿರೂಪಕಿ, ಈಗ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸುವುದಾಗಿ ಉಲಿಯುತ್ತಿದ್ದಂತೆ ರಾಜ್ಯಪಾಲರು ಒಳಗೊಂಡಂತೆ ಎಲ್ಲರೂ ಎದ್ದು ನಿಂತರು.

ಎರಡ್ಮೂರು ನಿಮಿಷ ಕಳೆದರೂ ರಾಷ್ಟ್ರಗೀತೆ ಸದ್ದು ಕೇಳಲೇ ಇಲ್ಲ. ಗಣ್ಯರು ಆ ಕಡೆ-ಈ ಕಡೆ ನೋಡುತ್ತಿದ್ದಂತೆ ನಿರೂಪಕಿ ಟೆಕ್ನಿಕಲ್‌ ಪ್ರಾಬ್ಲಂ ಆಗಿದೆ, ನಾವೇ ಹಾಡೋಣ ಎನ್ನುತ್ತಿದ್ದಂತೆ ಕೆಲವರು ಜನಗಣ ಮನ ಎಂದು ಹಾಡತೊಡಗಿದರು. ಆದರೆ ಪ್ಲೇ ಮಾಡಿದ್ದ ರಾಷ್ಟ್ರಗೀತೆಯಲ್ಲಿ ದಿಢೀರೆಂದು ಮೊದಲೆರಡು ಸಾಲು ಕಟ್‌ ಆಗಿ ಪ್ರಸಾರಗೊಂಡಿತು.

ಇದರಿಂದ ಕೊಂಚ ಗೊಂದಲಗೊಂಡ ಜನರು ರೆಡಿಮೇಡ್‌ ರಾಷ್ಟ್ರಗೀತೆಗೆ ತಕ್ಕಂತೆ ಹಾಡಿ, ಅಸಮಾಧಾನದಿಂದಲೇ ಕುಳಿತುಕೊಂಡರು.

ಇದಾಗಿ ಸ್ವಲ್ಪ ಹೊತ್ತಿನಲ್ಲೇ ರಾಜ್ಯಪಾಲರು ಮಾತನಾಡತೊಡಗಿದರು, ಭಾಷಣದ ಮಧ್ಯೆ ಮತ್ತೊಮ್ಮೆ ರೆಡಿಮೇಡ್‌ ರಾಷ್ಟ್ರಗೀತೆ ಪ್ರಸಾರಗೊಂಡಿತು. ಭಾಷಣದ ಮಧ್ಯ ಇದೇನು ರಾಷ್ಟ್ರಗೀತೆ ಎಂದುಕೊಂಡು ರಾಜ್ಯಪಾಲರು ಕ್ಷಣಹೊತ್ತು ಸ್ತಬ್ಧವಾದರು. ಸಮಾರಂಭದಲ್ಲಿ ನೆರೆದ ಜನ ಮತ್ತೊಮ್ಮೆ ಎದ್ದು ನಿಂತರು. ಗಾಬರಿಯಿಂದಲೇ ರಾಜ್ಯಪಾಲರು ಕ್ಯಾ ಹುವಾ.. ಎಂದು ಪ್ರಶ್ನಿಸುತ್ತಿದ್ದಂತೆ ರಾಷ್ಟ್ರಗೀತೆ ಪ್ರಸಾರ ಸ್ಥಗಿತಗೊಂಡಿತು.

ಕಾರು, ಬೈಕ್‌ ಮೇಲೆ ಜಾತಿ ಸಮೀಕ್ಷೆ ಸ್ಟೀಕರ್‌

ಪರಿಶಿಷ್ಟ ಜಾತಿ ಸಮೀಕ್ಷೆ ಮಾಡುವವರು ಮನೆಗಳ ಸಮೀಕ್ಷೆ ಮಾಡಿ ಸ್ಟಿಕ್ಕರ್‌ ಅಂಟಿಸುವುದನ್ನು ಬಿಟ್ಟು ಕಾರು, ಬೈಕ್‌ಗಳ ಸಮೀಕ್ಷೆ ಆರಂಭಿಸಿ ಬಿಟ್ಟರಾ...?

ಗಣತಿದಾರರಿಗೆ ಸಮೀಕ್ಷೆಯ ಖಾತರಿಗಾಗಿ ನೀಡಿದ್ದ ಸ್ಟಿಕ್ಕರುಗಳು ಕಾರು, ಬೈಕ್‌ ಮೇಲೆ ಪ್ರತ್ಯಕ್ಷವಾದರೆ ಯಾರಿಗೆ ತಾನೇ ಇಂತಹ ಅನುಮಾನ, ಆತಂಕ ಬರುವುದಿಲ್ಲ ಹೇಳಿ...

ಎರಡು ತಿಂಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಏನೆಲ್ಲಾ ಕಸರತ್ತು ಮಾಡಿದರೂ ಅಂದಾಜಿನ ಗುರಿಯಂತೆ ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದರ ನಡುವೆ ಗಣತಿದಾರರು ನಮ್ಮನೆಗೆ ಬಂದಿಲ್ಲ ಎಂಬ ದೂರುಗಳು ಮಾತ್ರ ಕಡಿಮೆಯಾಗಿಲ್ಲ.

ಹೀಗಾಗಿ ಸರ್ಕಾರ ಪ್ರತಿ ಮನೆಗೆ ಹೋಗಿ ಗಣತಿ ನಡೆದಿರುವ ಬಗ್ಗೆ ಸ್ಟಿಕ್ಕರ್‌ ಅಂಟಿಸುವಂತೆ ಗಣತಿದಾರರಿಗೆ ಸೂಚನೆ ನೀಡಿದೆ. ಕಳೆದ ನಾಲ್ಕೈ ದು ದಿನದಿಂದ ಪ್ರತಿ ದಿನ ಎರಡು ಲಕ್ಷ ಮನೆಗಳಿಗೆ ತೆರಳಿ ಗಣತಿ ನಡೆದಿರುವ ಬಗ್ಗೆ ಸ್ಟಿಕ್ಕರ್‌ ಅಂಟಿಸಲಾಗುತ್ತಿದೆ. ಸ್ಟಿಕ್ಕರ್‌ ಅಂಟಿಸುವುದು ಮಾತ್ರವಲ್ಲ. ಅಂಟಿಸಿದ ಮನೆಯ ಜಿಪಿಎಸ್‌ ಲೋಕೇಷನ್‌ ಇರುವ ಫೋಟೋ ತರಬೇಕೆಂದು ಗಣತಿದಾರರಿಗೆ ಖಡಕ್‌ ಎಚ್ಚರಿಕೆ ಇದೆ. ಈ ನಡುವೆ ಮನೆ ಸದಸ್ಯರಿಗೆ ಮಾಹಿತಿ ನೀಡದೇ ಬಾಗಿಲಿಗೆ ಸ್ಟಿಕ್ಕರ್‌ ಅಂಟಿಸಿದ್ದಾರೆ ಎಂಬ ದೂರು ಅನೇಕ ಕಡೆ ಕೇಳಿ ಬಂದಿದೆ.

ಆದರೆ ಮನೆಗಳಿಗೆ ಅಂಟಿಸುವ ಸ್ಟಿಕ್ಕರ್‌ ಇದ್ದಕ್ಕಿದ್ದಂತೆ ಕಾರು, ಬೈಕಿನ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆ ಪಾಪ ಗಣತಿದಾರರ ಮೇಲೆ ಅನುಮಾನ ಶುರುವಾಗಿದೆ. ಕೊನೆಗೆ ಅಧಿಕಾರಿಗಳು ಇಂತಹ ಸ್ಟಿಕ್ಕರ್‌ ಅಂಟಿಸಿಕೊಂಡು ಸಂಚರಿಸುವ ವಾಹನಗಳನ್ನು ನಿಲ್ಲಿಸಿ, ಸ್ಟಿಕ್ಕರ್‌ ಅಂಟಿಸಿದವರು ಯಾರು ಎಂಬುದನ್ನು ಪತ್ತೆ ಮಾಡಿದ್ದಾರೆ.

ವಿಶೇಷವೆಂದರೆ ಕಾರು, ಬೈಕ್‌ಗೆ ಸ್ಟಿಕ್ಕರ್‌ ಅಂಟಿಸಿದವರಿಗೆ ಶಿಕ್ಷೆ ವಿಧಿಸುವುದಕ್ಕೆ ಆಗಿಲ್ಲ. ಏಕೆಂದರೆ, ಅಂಟಿಸಿದವರು ಮಕ್ಕಳಾಗಿದ್ದರು.

ಹೌದು, ಗಣತಿದಾರರು ಪ್ರತಿ ಮನೆಗೆ ತೆರಳಿ ಸಮೀಕ್ಷೆ ಮಾಡಿ ಸ್ಟಿಕ್ಕರ್‌ ಅಂಟಿಸಿ ಹೋಗಿದ್ದಾರೆ. ನಂತರ ಮಕ್ಕಳು ಆಟವಾಡುವಾಗ ಆ ಸ್ಟಿಕ್ಕರ್‌ ಕಿತ್ತು ಮನೆಯ ಮುಂದೆ ನಿಂತಿರುವ ಕಾರು, ಬೈಕ್‌ಗೆ ಅಂಟಿಸಿದ್ದೇ ಈ ಅವಾಂತರಕ್ಕೆ ಕಾರಣವಾಯಿತು.

ದೀಪಾಲಂಕಾರ... ಇದು ಸವರ್ಣ ದೀರ್ಘ ಸಂಧಿ

ಕನ್ನಡ ವ್ಯಾಕರಣ, ಸಂಧಿ ಸಮಾಸ ವಿಚಾರ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮೇಷ್ಟ್ರ ತದ್ರೂಪಿ. ಸದನದ ಒಳಗೆ ಹಾಗೂ ಹೊರಗೆ ಅವಕಾಶ ಸಿಕ್ಕಾಗಲೆಲ್ಲಾ ಸಂಧಿಗಳ ಬಗ್ಗೆ ಮಾತನಾಡುವುದು ಕನ್ನಡ ರಾಮಯ್ಯರ ಹಳೆಯ ರೂಢಿ.

ಜೂ.28ರ ಶನಿವಾರವೂ ಅಷ್ಟೇ. ದಸರಾ-2025ರ ಆಚರಣೆ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಕಳೆದ ಬಾರಿ ದಸರಾಗೆ 21 ದಿನ ವಿದ್ಯುತ್‌ ಶಕ್ತಿ ಇತ್ತು. ಈ ಬಾರಿಯೂ 21 ದಿನ ನೀಡಲು ಸೂಚಿಸಿದ್ದೇನೆ’ ಎಂದರು.

ಈ ವೇಳೆ ಹಿಂದೆ ಕುಳಿತಿದ್ದ ಶಾಸಕ ಅಶೋಕ್‌ ರೈ, ‘ದೀಪಾಲಂಕಾರ ಸರ್’ ಎಂದು ಮೆಲ್ಲಗೆ ಕಿವಿಯಲ್ಲಿ ಪಿಸುಗುಟ್ಟಿದರು.

ತಕ್ಷಣ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ನಿಧಾನಕ್ಕೆ ಹಿಂದೆ ತಿರುಗಿ ಗಲ್ಲದ ಮೇಲೆ ಕೈ ಇಟ್ಟುಕೊಂಡು ಅಶೋಕ್‌ ರೈ ಮುಖ ದಿಟ್ಟಿಸುತ್ತಾ, ‘ಹೌದು ದೀಪಾಲಂಕಾರ. ದೀಪ ಪ್ಲಸ್‌ ಅಲಂಕಾರ ದೀಪಾಲಂಕಾರ. ಇದು ಸವರ್ಣ ದೀರ್ಘ ಸಂಧಿ’ ಎಂದು ಸಂಧಿ ಸಮೇತ ನುಡಿದರು.

ಪಕ್ಕದಲ್ಲಿದ್ದ ಡಿ.ಕೆ. ಶಿವಕುಮಾರ್, ‘ಅವರು ಮಂಗಳೂರಿನವರಲ್ಲ, ಅದಕ್ಕೆ ಗ್ಲಾಮರಸ್‌ ಭಾಷೆ’ ಎಂದು ಅಶೋಕ್‌ ರೈ ಕಾಲೆಳೆದರು. ಮಾತು ಮುಂದುವರೆಸಿ, ‘ಇದಕ್ಕೆ ಜಾರ್ಜ್‌ಗೆ 10 ಕೋಟಿ’ ಎಂದು ಶಿವಕುಮಾರ್‌ ಮತ್ತೊಮ್ಮೆ ಹಾಸ್ಯಚಟಾಕಿ ಹಾರಿಸಿದರು. ಸುದ್ದಿಗೋಷ್ಠಿಯಲ್ಲಿನ ಈ ಮಾತುಗಳಿಂದ ಪತ್ರಕರ್ತರಾದಿಯಾಗಿ ಎಲ್ಲರಿಗೂ ಭರಪೂರ ಮನರಂಜನೆ ಸಿಕ್ಕಿದ್ದಂತೂ ಸುಳ್ಳಲ್ಲ.

-ಸಂಪತ್‌ ತರೀಕೆರೆ

-ವಿಶ್ವನಾಥ ಮಲೇಬೆನ್ನೂರು

-ಶ್ರೀಕಾಂತ್‌ ಎನ್‌. ಗೌಡಸಂದ್ರ

Read more Articles on