ಕನ್ನಡ ಬೆಳೆಸಲು ಮಾತೃ ಹೃದಯ ಅವಶ್ಯ : ನಾಗಾಭರಣ ಅಭಿಪ್ರಾಯ

Published : Jun 30, 2025, 09:40 AM IST
TS Nagabharana

ಸಾರಾಂಶ

ಪ್ರಾಚೀನ ಇತಿಹಾಸವಿರುವ ಕನ್ನಡ ಬೆಳೆಸಲು ಮಾತೃ ಹೃದಯ ಇರಬೇಕು. ಮಾತೃ ಹೃದಯ ಹಿಡಿತ ಸಾಧಿಸುವುದಿಲ್ಲ, ಪ್ರೀತಿ ಹಂಚುತ್ತದೆ ಎಂದು ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

 ಬೆಂಗಳೂರು :  ಪ್ರಾಚೀನ ಇತಿಹಾಸವಿರುವ ಕನ್ನಡ ಬೆಳೆಸಲು ಮಾತೃ ಹೃದಯ ಇರಬೇಕು. ಮಾತೃ ಹೃದಯ ಹಿಡಿತ ಸಾಧಿಸುವುದಿಲ್ಲ, ಪ್ರೀತಿ ಹಂಚುತ್ತದೆ ಎಂದು ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

‘ಕರ್ನಾಟಕ ವಿಕಾಸ ರಂಗ’ ಭಾನುವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಅವರಿಗೆ ಜರಗನಹಳ್ಳಿ ಶಿವಶಂಕರ್‌ ‘ನುಡಿಸಿರಿ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡಿಗರು ವಿಶಾಲ ಹೃದಯಿಗಳಾಗಿದ್ದು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತಾರೆ. ಕನ್ನಡಿಗರ ಸಂಬಂಧಗಳು ಎಷ್ಟೇ ದೂರವಿದ್ದರೂ ಪ್ರೀತಿ, ಸ್ನೇಹ ಎಂದಿಗೂ ಕಡಿಮೆ ಆಗುವುದಿಲ್ಲ ಎಂದರು.

ಕನ್ನಡದ ಸಂಘಟಕ ನಾಡಿನ ಜನರನ್ನು ಒಂದುಗೂಡಿಸುತ್ತಾನೆ. ಜರಗನಹಳ್ಳಿ ಶಿವಶಂಕರ್ ಅವರ ಸಾಹಿತ್ಯ ಸ್ಫೂರ್ತಿದಾಯಕವಾಗಿತ್ತು. ಅವರ ಸಾಹಿತ್ಯ ಓದಿದವರ ಮನಸ್ಸಿನಲ್ಲಿ ಉಳಿಯುತ್ತಿತ್ತು. ಜರಗನಹಳ್ಳಿ ಶಿವಶಂಕರ್ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಕನ್ನಡ ಭಾಷೆಯ ಬೆಳವಣಿಗೆಗೂ ಪೂರಕವಾಗಿದೆ ಎಂದು ಬಣ್ಣಿಸಿದರು.

ಸಾಹಿತಿ ರಾ.ನಂ.ಚಂದ್ರಶೇಖರ್‌ ಮಾತನಾಡಿ, ಮಾಸ್ಕೇರಿ ನಾಯಕ ಅವರು ಬರೆದ ಕವನಗಳು ಜನರ ಮನಸ್ಸನ್ನು ಮುಟ್ಟಿವೆ. ಅವರ ಕಥನ, ಕವನ ಸಂಕಲನಗಳು ಹಲವಾರು ಬಾರಿ ಮರು ಮುದ್ರಣವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಎಲ್ಲೆಡೆ ಗ್ರಂಥಾಲಯಗಳು ಇರಬೇಕು. ಹರಕು ಚಪ್ಪಲಿ ಇದ್ದರೂ ಪರವಾಗಿಲ್ಲ, ಕನ್ನಡಿಗರ ಕೈಯಲ್ಲಿ ಪುಸ್ತಕ ಇರಬೇಕು ಎಂದು ಆಶಿಸಿದರು.

ಪ್ರಶಸ್ತಿ ಸ್ವೀಕರಿಸಿದ ಮಾಸ್ಕೇರಿ ಎಂ.ನಾಯಕ ಅವರು ಮಾತನಾಡಿ, ಕನ್ನಡ ವಿಶ್ವ ಭಾಷೆಯಾಗಿದೆ ಎಂದು ವಿನೋಬಾ ಭಾವೆಯವರು ಹೇಳಿದ್ದರು. ಅಹಂಕಾರದಿಂದ ಮನುಷ್ಯ ದಾರಿ ತಪ್ಪುತ್ತಾನೆ. ವಿನಯತೆಯಿಂದ ಎಲ್ಲರ ಪ್ರೀತಿ-ವಿಶ್ವಾಸ ಗೆಲ್ಲಬಹುದು. ಜನರು ಪ್ರೀತಿಯಿಂದ ನೀಡುವ ಪ್ರಶಸ್ತಿ ಸ್ವೀಕರಿಸಬೇಕು. ಜರಗನಹಳ್ಳಿ ಶಿವಶಂಕರ್‌ ವಿನಯವಂತರಾಗಿದ್ದು ಸರಳ ವ್ಯಕ್ತಿತ್ವದವರಾಗಿದ್ದರು ಎಂದು ತಿಳಿಸಿದರು.

ಸರ್ವಮಂಗಳ ಅರಳಿಮಟ್ಟಿ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ಜರಗನಹಳ್ಳಿ ಶಿವಶಂಕರ್‌ರವರ ಪುತ್ರಿ ಶುಭೋಧ ಶಿವಶಂಕರ್ ಹಾಜರಿದ್ದರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸಕಾಲದಲ್ಲಿ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ: ಡೀಸಿ
ಮಂಜುನಾಥ್‌ ಹೊಸಕೋಟೆ ಟೌನ್ ಬ್ಯಾಂಕ್‌ ಅಧ್ಯಕ್ಷ