ಕನ್ನಡಪ್ರಭ ವಾರ್ತೆ ಮಂಡ್ಯ
ಮಾ.೧೨ರಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಹು ನಿರೀಕ್ಷಿತ ಬಾಯ್ಲಿಂಗ್ ಹೌಸ್‌ಗೆ ಹಣ ಬಿಡುಗಡೆಗೊಳಿಸುವ ತೀರ್ಮಾನ ಕೈಗೊಳ್ಳುವುದರೊಂದಿಗೆ ಜಿಲ್ಲೆಯ ರೈತರ ಜೊತೆ ದೃಢವಾಗಿ ನಿಲ್ಲುವೆ ಎನ್ನುವ ಸಂದೇಶವನ್ನು ಕಾಂಗ್ರೆಸ್ ಸರ್ಕಾರ ರವಾನಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಾಯ್ಲಿಂಗ್ ಹೌಸ್ ಅಳವಡಿಕೆ ಕಾರ್ಯಕ್ಕೆ ಏಪ್ರಿಲ್ ಎರಡನೇ ವಾರದಲ್ಲಿ ಟೆಂಡರ್ ಕರೆಯಲಾಗುವುದು. ನಾಲ್ಕೂವರೆ ತಿಂಗಳಲ್ಲಿ ಕಾಮಗಾರಿ ಮುಗಿದು ಆಗಸ್ಟ್ ಅಂತ್ಯದ ವೇಳೆಗೆ ಕಾರ್ಖಾನೆ ಕಾರ್ಯಾರಂಭಕ್ಕೆ ಸಜ್ಜುಗೊಳ್ಳಲಿದೆ. ಈ ಸಾಲಿನಿಂದ ಸಮರ್ಥವಾಗಿ ನಿರೀಕ್ಷಿತ ಪ್ರಮಾಣದ ಕಬ್ಬು ಅರೆಯುವ ವಿಶ್ವಾಸ ವ್ಯಕ್ತಪಡಿಸಿದರು.೨೦೨೩-೨೪ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ ₹೬೦ ಕೋಟಿ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದೆ. ಈಗ ಬಿಡುಗಡೆ ಮಾಡುತ್ತಿರುವ ಹಣ ಸಾಲವೋ, ನೆರವೋ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಕ್ಯಾಬಿನೇಟ್ ತೀರ್ಮಾನವಷ್ಟೇ ಹೊರಬಿದ್ದಿದೆ. ಅಧಿಕೃತ ಆದೇಶ ಕೈಸೇರಿದ ಬಳಿಕ ಅದು ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಷುಗರ್ ಕಾರ್ಖಾನೆಗೆ ಬ್ಯಾಂಕುಗಳ ಸಾಲ ಯಾವುದೂ ಇಲ್ಲ. ಕೆಎಸ್‌ಐಡಿಎಸ್‌ನಲ್ಲಿ ₹೩.೫ ಕೋಟಿ ಸಾಲ ಪಡೆದಿದ್ದು ₹೫೩ ಕೋಟಿ ಬಡ್ಡಿಯಾಗಿದೆ. ಬಡ್ಡಿ ಮನ್ನಾಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಹಾರ ಸಚಿವಾಲಯದ ₹೧೯ ಕೋಟಿ ಸಾಲವಿದ್ದು ಇದಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. ಮೈಷುಗರ್ ಬಳಿ ₹೫ ರಿಂದ ₹೬ ಕೋಟಿ ಹಣವಿರುವುದಾಗಿ ಹೇಳಿದರು.
೨೦೨೫- ೨೬ನೇ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಉತ್ತರ ಪ್ರದೇಶದ ಶ್ರೇಯಾ ಇನ್‌ಸ್ಟಿಟ್ಯೂಷನ್ ಅವರಿಗೆ ಟೆಂಡರ್ ನೀಡಲಾಗಿದೆ. ಪ್ರತಿ ಟನ್‌ಗೆ ₹೮೮೦ ನಂತೆ ಒಪ್ಪಂದವಾಗಿದೆ. ಈಗಾಗಲೇ ಕಾರ್ಖಾನೆಯ ಸ್ವಚ್ಛತಾ ಕೆಲಸಕ್ಕೆ ಅಣಿಗೊಳಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಆರ್‌ಬಿ ಟೆಕ್ ಕಂಪನಿಯವರು ಸಮರ್ಥವಾಗಿ ಕಬ್ಬು ನುರಿಸದೆ ಕಾರ್ಖಾನೆಗೆ ನಷ್ಟ ಉಂಟುಮಾಡಿದರು. ಆ ಹಿನ್ನೆಲೆಯಲ್ಲಿ ಅವರನ್ನು ಕೈಬಿಟ್ಟು ಹೊಸಬರಿಗೆ ನೀಡುವುದಕ್ಕೆ ನಿರ್ಧರಿಸಿ ಟೆಂಡರ್ ಕರೆಯಲಾಗಿತ್ತು. ಅದು ಶ್ರೇಯಾ ಇನ್‌ಸ್ಟಿಟ್ಯೂಷನ್ ಅವರಿಗೆ ಟೆಂಡರ್ ಆಗಿರುವುದಾಗಿ ತಿಳಿಸಿದರು.
ಪ್ರಸಕ್ತ ಸಾಲಿನಿಂದ ಸಹ ವಿದ್ಯುತ್ ಘಟಕವನ್ನೂ ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರ ಸಹಕಾರದೊಂದಿಗೆ ಕಾರ್ಖಾನೆಯ ಡಿಸ್ಟಿಲರಿ ಘಟಕ ಆರಂಭಿಸುವುದಕ್ಕೂ ಸರ್ಕಾರದ ಮನವೊಲಿಸಲಾಗುವುದು. ಡಿಸ್ಟಿಲರಿ ಘಟಕ ಆರಂಭವಾದರೆ ಸರ್ಕಾರದ ನೆರವಿಲ್ಲದೆ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿದೆ ಎಂದು ನುಡಿದರು.