ಎಸ್‌ಕೆಡಿಆರ್‌ಪಿಡಿ ಕಳ್ಳತನ ಪತ್ತೆ ಹಚ್ಚಿದ ಪೊಲೀಸರು

KannadaprabhaNewsNetwork |  
Published : Nov 02, 2023, 01:02 AM IST
1ಡಿಡಬ್ಲೂಡಿ2ರಾಯಾಪೂರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ ಕಚೇರಿಯಲ್ಲಿ ಕದ್ದ ಹಣವನ್ನು ವಶಕ್ಕೆ ಪಡೆದಿರುವ ಪೊಲೀಸರು. | Kannada Prabha

ಸಾರಾಂಶ

ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯ ರಾಯಾಪೂರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ ಧಾರವಾಡ

ಇಲ್ಲಿಯ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯ ರಾಯಾಪೂರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ (ಎಸ್‌ಕೆಡಿಆರ್‌ಪಿಡಿ) ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಬುಧವಾರ ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್‌ ಆಯುಕ್ತರಾದ ರೇಣುಕಾ ಸುಕಮಾರ ಅವರು, ಕಳೆದ ಅ. 24ರಂದು ಕಚೇರಿಯ ಸೇಫ್ಟಿ ಕೋಣೆಯ ಲಾಕರ್‌ಗಳನ್ನು ಮೀಟಿ ಅಲ್ಲಿದ್ದ ₹1.24 ಕೋಟಿ ಹಣವನ್ನು ಕಳ್ಳರ ಗುಂಪೊಂದು ಕಳ್ಳತನ ಮಾಡಿತ್ತು. ದುರ್ದೈವ ಎಂದರೆ, ಕಚೇರಿಯಲ್ಲಿ ಯಾವುದೇ ಸಿಸಿ ಟಿವಿಯಾಗಲಿ ಅಥವಾ ಕಾವಲುಗಾರನಾಗಿ ಇರಲಿಲ್ಲ. ಹೀಗಾಗಿ ಕಳ್ಳರು ಸಲೀಸಾಗಿ ಹಣವನ್ನು ಎತ್ತಿಕೊಂಡು ಹೋಗಿದ್ದರು. ಈ ಕುರಿತು ಅಂದೇ ರಾತ್ರಿ ಪ್ರಕರಣ ಸಹ ದಾಖಲಾಗಿತ್ತು ಎಂದರು.

ಯಾವುದೇ ಕುರುಹುಗಳಿಲ್ಲದ ಪ್ರಕರಣ ಪತ್ತೆ ಹಚ್ಚುವುದು ನಮಗೂ ಸವಾಲಾಗಿತ್ತು. ಹೀಗಾಗಿ, ವೈಜ್ಞಾನಿಕ ಕುರುಹು ಆಧಾರದ ಮೇಲೆ ಪ್ರಕರಣವನ್ನು ನಮ್ಮ ಸಿಬ್ಬಂದಿ ಒಂದೇ ವಾರದಲ್ಲಿ ಬೇಧಿಸಿ 10 ಜನರನ್ನು ಬಂಧಿಸಿದ್ದಾರೆ. ಜೊತೆಗೆ ಅವರಿಂದ ₹ 79.89 ಲಕ್ಷ ಹಣ, ಕಳ್ಳತನಕ್ಕೆ ಬಳಸಿದ ಕಾರು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಯಾರವರು ಕಳ್ಳರು:

ಕಚೇರಿಯಲ್ಲಿ ಸಾಕಷ್ಟು ಕೋಣೆಗಳಿದ್ದರೂ ಕಳ್ಳರು ಹಣವಿರುವ ಕೋಣೆಯಲ್ಲಿ ಮಾತ್ರ ನುಗ್ಗಿ ಕಳ್ಳತನ ಮಾಡಿದ್ದರಿಂದ, ಈ ಪ್ರಕರಣದಲ್ಲಿ ಸಂಸ್ಥೆಯ ಸಿಬ್ಬಂದಿ ಕೈವಾಡ ಇರುವುದನ್ನು ಪತ್ತೆ ಹಚ್ಚಿದ ನಮ್ಮ ತಂಡವು ಪ್ರಕರಣದ ಬೆನ್ನು ಬಿದ್ದಿತ್ತು. ಅಂತೆಯೇ, ಕಚೇರಿಯ ನಿರ್ವಹಣಾ ಸಿಬ್ಬಂದಿ ಹುಬ್ಬಳ್ಳಿಯ ಹನುಮಯ್ಯ ಸ್ವಾಮಿ ಬಡಾವಣೆಯ ಕುಶಾಲಕುಮಾರ ಕೃಷ್ಣಾ ಸವಣೂರು, ಕಚೇರಿಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನವಲಗುಂದ ಕಳ್ಳಿಮಠ ಓಣಿಯ ಬಸವರಾಜ ಶೇಖಪ್ಪ ಬಾಬಜಿ ಹಾಗೂ ಕಚೇರಿ ಸಹಾಯಕ ಮತ್ತು ನವಲಗುಂದದ ಭೋವಿ ಓಣಿಯ ಮಹಾಂತೇಶ ಲಕ್ಷ್ಮಣ ಹಿರಗಣ್ಣವರ ಎಂಬುವರು ಪತ್ತೆಯಾದರು. ಅವರ ಮೂಲಕ ಇನ್ನುಳಿದ ಆರೋಪಿಗಳಾದ ನವಲಗುಂದದ ಜಿಲಾನಿ ಬವರಸಾಬ ಜಮಾದಾರ, ಪರಶುರಾಮ ಹನುಮಂತಪ್ಪ ನೀಲಪ್ಪಗೌಡರ, ರಂಗಪ್ಪ ನಾಗಪ್ಪ ಗುಡಾರದ, ಮಂಜುನಾಥ ಯಮನಪ್ಪ ಭೋವಿ, ಕಿರಣ ಶರಣಪ್ಪ ಕುಂಬಾರ, ರಜಾಕ ಅಲ್ಲಾವುದ್ದೀನ ಮುಲ್ಲಾನವರ ಹಾಗೂ ವೀರೇಶ ಸಿದ್ದಪ್ಪ ಚವಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದರು.

ಹು-ಧಾ ಅವಳಿ ನಗರದಲ್ಲಿ ಇಸ್ಟೀಟು ಜೂಜಾಟ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಇನ್ಮುಂದೆ ಪೊಲೀಸರು ನಿರಂತರ ಹಾಗೂ ಏಕಾಏಕಿ ಕಾರ್ಯಾಚರಣೆ ಮೂಲಕ ಅಕ್ರಮ ಚಟುವಟಿಕೆಗೆ ಬ್ರೇಕ್‌ ಹಾಕಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತ ಪ್ರಶಾಂತ ಸಿದ್ದನಗೌಡರ, ವಿದ್ಯಾಗಿರಿ ಪಿಐ ಸಂಗಮೇಶ ಹಾಗೂ ಪ್ರಕರಣ ಪತ್ತೆ ಹಚ್ಚಿದ ಪೊಲೀಸರ ತಂಡವಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ