ಪದವಿ ದಿನಾಚರಣೆ ಉದ್ಘಾಟಿಸಿದ ಐಐಐಟಿ ಧಾರವಾಡದ ನಿರ್ದೇಶಕ
ಕನ್ನಡಪ್ರಭ ವಾರ್ತೆ ಹೊಸಪೇಟೆಇಂದಿನ ಇಂಟರ್ನೆಟ್ ಯುಗದಲ್ಲಿ ಕಲಿಕೆಗೆ ಹೆಚ್ಚಿನ ಅವಕಾಶಗಳಿವೆ. ಆದರೆ, ನಿರ್ದಿಷ್ಟ ಪಠ್ಯಕ್ರಮದ ಕ್ರಮದ ಕೊರತೆಯಿಂದ ಅದು ಸಮರ್ಥವಾಗಿ ಉಪಯೋಗವಾಗುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಅಗತ್ಯತೆ ಗುರುತಿಸಿ, ಸೂಕ್ತ ಆನ್‌ಲೈನ್ ಸಂಪನ್ಮೂಲಗಳನ್ನು ಆರಿಸಿಕೊಂಡು ಕಲಿಕೆಯನ್ನು ಮುಂದುವರಿಸಿದರೆ ಕೌಶಲ್ಯ ಸಂಪಾದನೆ ಸಾಧ್ಯ ಎಂದು ಐಐಐಟಿ ಧಾರವಾಡದ ನಿರ್ದೇಶಕ ಡಾ. ಎಸ್.ಆರ್. ಮಹಾದೇವ ಪ್ರಸನ್ನ ತಿಳಿಸಿದರು.
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಿಂಚನ 2025ರ ಅಂಗವಾಗಿ ನಡೆದ ಪದವಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ತಂತ್ರಜ್ಞಾನದ ಅಡೆತಡೆ ದಾಟಲು ಪ್ರಾಯೋಗಿಕ ಕೌಶಲ್ಯದ ಅಗತ್ಯತೆ ಇದೆ. ಪದವಿ ಶಿಕ್ಷಣ ಅಪೂರ್ಣತೆಯಿಂದ ಕೂಡಿದ್ದು, ಬಹುತ್ವ ಕೇಂದ್ರಿತ ಕಲಿಕೆಯಿಂದ ಈ ಅಪೂರ್ಣತೆಯನ್ನು ದಾಟಬೇಕು. ಡೇಟಾ ಸೈನ್ಸ್ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಈ ತಂತ್ರಜ್ಞಾನದ ಅಡೆತಡೆಗಳನ್ನು ನಿವಾರಿಸಲು ನೆರವಾಗುತ್ತವೆ ಎಂದರು.ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ್ ಬಾದಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆದ ಮಾತ್ರಕೆ ಉದ್ಯೋಗಕ್ಕೆ ಅರ್ಹತೆ ಪಡೆಯುವುದಿಲ್ಲ. ತಮ್ಮನ್ನು ತಾವು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಬೇಕು. ಈ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳ ಜೊತೆ ಸಂಹವನ ನಡೆಸಿ ಅವರ ಅನುಭವದ ಲಾಭ ಪಡೆಯಬೇಕು. ಕಾಲೇಜಿನ ಜೊತೆಗಿನ ಭಾವನಾತ್ಮಕ ಸಂಬಂಧ ಹಾಗೆಯೇ ಮುಂದುವರೆಯಬೇಕು. ಇವತ್ತು ಸ್ವದೇಶೀ ನಿರ್ಮಿತ ಯುದ್ಧ ಸಾಮಗ್ರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬ್ರಹ್ಮೋಸ್ ಕ್ಷಿಪಣಿಯ ಯಶಸ್ಸಿನಿಂದ ಅನೇಕ ದೇಶಗಳು ನಮ್ಮ ರಕ್ಷಣಾ ವಿಭಾಗವನ್ನು ಸಂಪರ್ಕಿಸಿವೆ. ಅಂತಹ ಕ್ಷೇತ್ರದಲ್ಲಿ ಈಗಿನ ಎಂಜಿನಿಯರ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜ್ಞಾನಶಕ್ತಿ, ರಾಷ್ಟ್ರಶಕ್ತಿ ಆಗಬೇಕು. ನಮ್ಮ ಶಿಕ್ಷಣ ಸಂಸ್ಥೆಯಿಂದ ಐಎಎಸ್, ಐಪಿಎಸ್ ಅಕಾಡೆಮಿ ಕೋಚಿಂಗ್ ಕೊಡುವ ಯೋಜನೆ ಇದೆ ಎಂದು ತಿಳಿಸಿದರು.
ಪಿಡಿಐಟಿಯ ಪ್ರಾಂಶುಪಾಲ ಡಾ. ರೋಹಿತ್ ಯು.ಎಂ. ನೂತನ ಪದವಿಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಪದವಿ ದಿನಾಚರಣೆಯ ಸಂಯೋಜಕ ಪ್ರೊ. ಮಾಲತೇಶ ಕಮತರ್, ಎನ್.ಸಿ.ಸಿ. ಪಡೆಗಳ ಜೊತೆಯಲ್ಲಿ ಪದವಿ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಸಲಾಯಿತು. 400ಕ್ಕೂ ಹೆಚ್ಚು ಬಿಇ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.
ಪಿಡಿಐಟಿಯ ಆಡಳಿತ ಮಂಡಳಿಯ ಸದಸ್ಯ ಐ.ಎನ್. ಸಂಗನಬಸಪ್ಪ, ಅನಿಲ್ ಆರ್.ಜವಳಿ, ಬಿ.ಚಂದ್ರಮೌಳಿ, ವಿರೂಪಾಕ್ಷ ರೆಡ್ಡಿ, ಉಪಪ್ರಾಂಶುಪಾಲ ಡಾ. ಪಾರ್ವತಿ ಕಡ್ಲಿ, ಸಂಯೋಜಕರಾದ ಡಾ. ವಸಂತಮ್ಮ ಎಚ್., ಪ್ರೊ. ಮಾಲತೇಶ ಕಮತರ್ ಇದ್ದರು.