ಉದ್ಯೋಗಾಕಾಂಕ್ಷಿಗಳಿಗೆ ದ.ಕ.ದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ: ಝಕರಿಯಾ ಜೋಕಟ್ಟೆ

KannadaprabhaNewsNetwork |  
Published : Jun 23, 2025, 11:52 PM IST
ಉದ್ಯಮಿ ಝಕರಿಯಾ ಜೋಕಟ್ಟೆ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿಯಾಗಿ ಭಾಗವಹಿಸಿದ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ತಮ್ಮ ಜೀವನಾನುಭವವನ್ನು ತೆರೆದಿಟ್ಟರು.

ಕನ್ನಡಪ್ರಭ ವಾರ್ತೆ ಮಂಗಳೂರು

ನನ್ನ ಜೀವನದ ಕಷ್ಟದ ದಿನಗಳೇ ತಾಳ್ಮೆಯನ್ನೂ, ಸಾಧನೆಗೆ ಸ್ಫೂರ್ತಿಯನ್ನೂ ತುಂಬಿವೆ. ಮೂರು ದಿನದ ಬದುಕಲ್ಲಿ ಎಲ್ಲರೊಡನೆ ಎಲ್ಲರೊಡನೆ ಪ್ರೀತಿ- ವಿಶ್ವಾಸದಿಂದ ಕಳೆಯಬೇಕು. ಕರಾವಳಿ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಇಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕು ಎಂದು ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಹೇಳಿದ್ದಾರೆ.ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿಯಾಗಿ ಭಾಗವಹಿಸಿದ ಅವರು ತಮ್ಮ ಜೀವನಾನುಭವವನ್ನು ತೆರೆದಿಟ್ಟರು. ಉದ್ಯೋಗಾಕಾಂಕ್ಷಿಗಳಿಗಾಗಿ ದ.ಕ. ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯುವ ಯೋಜನೆ ಇದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾಗಿ, ಬೀದಿಗಳನ್ನು ಸುತ್ತಿ ಬೆಲ್ಲ ಮಾರುತ್ತಿದ್ದ ನಾನು ಕಠಿಣ ಪರಿಶ್ರಮದಿಂದ ದುಡಿದು, ಇಂದು ಏಳು ಸಾವಿರ ಮಂದಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದೇನೆ. ಆರಂಭದ ದಿನಗಳಲ್ಲಿ ಮಿಕ್ಸಿಂಗ್ ಮಾಡಿದ ಸಿಮೆಂಟನ್ನು 20 ಮಹಡಿಗಳ ಕಟ್ಟಡಕ್ಕೆ ಹೊತ್ತುಕೊಂಡು ಹೋಗುವ ಕೆಲಸ ಮಾಡಿದ್ದೆ, 1979ರಲ್ಲಿ ಡ್ರೆಜ್ಜಿಂಗ್ ಕಂಪನಿಯಲ್ಲಿ ಮರೈನ್ ಸರ್ವೇ ಕೆಲಸಕ್ಕೆ ಸೇರಿದೆ. 1985ರಲ್ಲಿ ದುಬೈನ ಪೆಟ್ರೋ ಕೆಮಿಕಲ್ಸ್‌ ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದು ನನ್ನ ಜೀವನದ ದಿಕ್ಕನ್ನೆ ಬದಲಿಸಿತು. ನೆದರ್‌ಲ್ಯಾಂಡ್‌ನ ಶೂನ್ಯ ಆಮ್ಲಜನಕ ಪ್ರದೇಶದಲ್ಲಿನ ತರಬೇತಿಯು ಬದುಕಲು ಕಲಿಸಿತು. ಈ ಕಂಪೆನಿಯಲ್ಲಿ 30 ವರ್ಷ ಬದ್ಧತೆಯಿಂದ ಕೆಲಸ ಮಾಡಿದೆ, ಅದೇ ನನಗೆ ಹೊಸ ಉದ್ಯಮ ಸೃಷ್ಟಿಗೆ ಪ್ರೇರೇಪಣೆ ನೀಡಿತು ಎಂದು ಝಕರಿಯಾ ಹೇಳಿದರು.2010ರಲ್ಲಿ ದುಬೈಯಲ್ಲಿ ನಾಲ್ಕು ಮಂದಿ ಸೇರಿ ಮುಝೈನ್ ಸಂಸ್ಥೆ (ಪೆಟ್ರೋಕೆಮಿಕಲ್ಸ್‌ ಘಟಕ ಸ್ಥಾಪನೆ ಮತ್ತು ನಿರ್ವಹಣೆ ಕಂಪೆನಿ) ಆರಂಭಿಸಿದೆವು. ಕಾರ್ಮಿಕರೆನ್ನುವ ಬದಲಿಗೆ ಪಾಲುದಾರರು ಎಂಬ ಧ್ಯೇಯದಲ್ಲಿ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದ್ದರಿಂದ ಕಂಪನಿ ಕೆಲವೇ ಸಮಯದಲ್ಲಿ ಉನ್ನತ ಸಾಧನೆ ಮಾಡಿದೆ. ಏಳು ಸಾವಿರ ಮಂದಿ ಕಾರ್ಮಿಕರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರೇ ಇದ್ದಾರೆ, ಎಲ್ಲ ಧರ್ಮದವರು ಪರಸ್ಪರ ಅನ್ಯೋನ್ಯತೆಯಿಂದ ಇದ್ದೇವೆ ಎಂದರು.ನಾನು ಎಸ್ಸೆಸ್ಸೆಲ್ಸಿ ಫೇಲಾಗಿದ್ದರೂ ಈಗ ಪೆಟ್ರೋಕೆಮಿಕಲ್ಸ್‌ ರಿಫೈನರಿ ಕ್ಷೇತ್ರದ ಡಾಕ್ಟರ್‌ ಅಂತ ಅನಿಸಿಕೊಂಡಿದ್ದೇವೆ. ಯಾವುದೇ ರಿಫೈನರಿಯಲ್ಲಿ ಏನೇ ಸಮಸ್ಯೆ ಬಂದರೂ ಮೊದಲು ಕರೆ ಬರೋದು ನನಗೆ. ಶಾಲಾ ಶಿಕ್ಷಣಕ್ಕಿಂತ ಅನುಭವದಿಂದ ಎಂಜಿನಿಯರ್‌ ಆಗಿದ್ದೇನೆ ಎಂದು ಝಕರಿಯಾ ಜೋಕಟ್ಟೆ ಹೇಳಿದರು.ಎಂಎಸ್‌ಇಝಡ್‌ನ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ಭಂಡಾರ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಇದ್ದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರಿಫ್‌ ಪಡುಬಿದ್ರಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ