ಅಂಕಗಳಿಕೆ ಜತೆ ಕೌಶಲ್ಯವೂ ಮುಖ್ಯ: ಮುರಳೀಧರ್ ಭಟ್

KannadaprabhaNewsNetwork |  
Published : Oct 11, 2026, 03:30 AM IST
ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಮುರಳೀಧರ್ ಭಟ್ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ ಕಾಲೇಜಿನಲ್ಲಿ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಇಂತಹ ಹಲವಾರು ಉಪಯುಕ್ತ ತರಬೇತಿ, ಕಾರ್ಯಾಗಾರಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಮೊದಲಾದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಂಡಿದ್ದಾರೆ.

ಕುಮಟಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಿಕೆಯಿಂದ ಉದ್ಯೋಗ ಪಡೆಯುವುದು ಅಸಾಧ್ಯ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಸಂವಹನ, ಭಾಷೆ, ಮಂಡನೆ ಇತ್ಯಾದಿ ಕೌಶಲ್ಯಗಳನ್ನೂ ಕಲಿತರೆ ಮಾತ್ರ ಭವಿಷ್ಯದ ವೃತ್ತಿ ಬದುಕಿಗೆ ಭದ್ರ ಬುನಾದಿ ಸಾಧ್ಯ ಎಂದು ಕೆನರಾ ಕಾಲೇಜು ಸೊಸೈಟಿಯ ಸದಸ್ಯ ಮುರಳೀಧರ್ ಭಟ್ ಹೇಳಿದರು.

ಇಲ್ಲಿನ ಡಾ. ಬಾಳಿಗಾ ವಾಣಿಜ್ಯ ಕಾಲೇಜ್‌ನಲ್ಲಿ ಕರಿಯರ ಗೈಡೆನ್ಸ್ ಹಾಗೂ ಪ್ಲೇಸ್ಮೆಂಟ್ ಸೆಲ್, ಭಾರತಿ ಸಂಸ್ಥೆ, ಲಯನ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವ್ಯಕ್ತಿತ್ವ ವಿಕಸನ, ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅರವಿಂದ ನಾಯಕ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಇಂತಹ ಹಲವಾರು ಉಪಯುಕ್ತ ತರಬೇತಿ, ಕಾರ್ಯಾಗಾರಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಮೊದಲಾದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಂಡಿದ್ದಾರೆ. ಇದು ಮುಂದುವರಿಯಲಿದೆ ಎಂದರು.

ಮುಖ್ಯ ಅತಿಥಿ, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.

ಶಿಬಿರದ ಸಂಪನ್ಮೂಲ ವ್ಯಕ್ತಿ ಆರ್.ಕೆ. ಬಾಲಚಂದ್ರ ಮಾತನಾಡಿ, ನಾವು ರಾಜ್ಯದ ಹಲವಾರು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜ್ಞಾನಸಂವರ್ಧನೆ, ಕೌಶಲ್ಯ ವರ್ಧನೆ ಮೊದಲಾದವುಗಳಿಗೆ ಸಂಬಂಧಪಟ್ಟಂತೆ ಇಂತಹ ಹಲವಾರು ತರಬೇತಿ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ನಮ್ಮಿಂದ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಉದ್ಯೋಗ ಗಿಟ್ಟಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗಾನಂದ ಗಾಂಧಿ, ಭಾರತಿ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾತನಾಡಿದರು. ಪ್ಲೇಸ್ಮೆಂಟ್ ಸೆಲ್ ಚೇರ್ಮನ್ ಪ್ರೊ. ಸಂತೋಷ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೇಶವ ನಾಯ್ಕ, ಖಜಾಂಚಿ ಆನಂದ ಹೆಗಡೆ, ಐಕ್ಯುಎಸಿ ಸಂಯೋಜಕಿ ಪ್ರೊ. ರಾಗಿಣಿ ಸಿ. ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲೂ ದೋಸ್ತಿ ಮುಂದುವರಿಯಲಿ!
ಸಂಕಷ್ಟಕ್ಕೆ ಅಂಜದೇ ಆತ್ಮವಿಶ್ವಾಸದಿಂದ ಬದುಕು ಸಾಗಿಸಿ: ಮುರುಳೀಧರ ಹೆಗಡೆ