)
- ರೈತ, ಕಾರ್ಮಿಕ ವಿರೋಧಿ ನೀತಿಗಳ ಕೈಬಿಡುವಂತೆ ಸರ್ಕಾರಗಳಿಗೆ ಮುಖಂಡರ ತಾಕೀತು - - -
ಕೇಂದ್ರ, ರಾಜ್ಯ ಸರ್ಕಾರಗಳ ಭೂ ಸ್ವಾಧೀನ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ವಿವಿಧ ನೀತಿಗಳನ್ನು ವಿರೋಧಿಸಿ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ಎಸ್‌ಕೆಎಂ ಹಾಗೂ ಜೆಸಿಟಿಯು ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಸೋಮವಾರ ಜಿಲ್ಲಾ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಜೈಲ್ ಭರೋ ಚಳವಳಿ ನಡೆಸಲಾಯಿತು.
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯಿಂದ ಉಭಯ ಸಂಘಟನೆಗಳ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತಕ್ಕೆ ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆ ತಡೆ ನಡೆಸಿ, ಅಲ್ಲಿಂದ ಉಪ ವಿಭಾಗಾಧಿಕಾರಿ ಕಚೇರಿ ಬಳಿ ತೆರಳಿ, ಹಳೇ ಪಿ.ಬಿ. ರಸ್ತೆ ತಡೆ ನಡೆಸಿದರು. ಪ್ರತಿಭಟನೆ ವೇಳೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ 70ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ವಶಕ್ಕೆ ಪಡೆದು, ಪೊಲೀಸ್ ಭವನಕ್ಕೆ ಕರೆದೊಯ್ದು ಕೆಲ ಗಂಟೆಗಳ ನಂತರ ಬಿಡುಗಡೆ ಮಾಡಿದರು.ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಈ ಸಂದರ್ಭ ಮಾತನಾಡಿ, ಸರ್ಕಾರ ಈಚೆಗೆ ಜಾರಿಗೆ ತಂದ ನಾಲ್ಕೂ ಕಾರ್ಮಿಕ ಸಂಹಿತೆಗಳನ್ನು ತಕ್ಷಣ ರದ್ದುಪಡಿಸಬೇಕು. ಪರಿಷ್ಕರಿಸಿದ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ರೈತರಿಂದ ಬಲವಂತ ಭೂ ಸ್ವಾಧೀನ, ಅನ್ಯಾಯದ ಭೂ ಸ್ವಾಧೀನ, ಕಾರ್ಪೋರೇಟ್ ಭೂ ಕಬಳಿಕೆಯನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧ ಗ್ಯಾರಂಟಿ ನೀಡಬೇಕು. ರೈತರು, ಕೃಷಿ ಕೂಲಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಲಿ. ವಿದ್ಯುತ್ ತಿದ್ದುಪಡಿ ಕಾಯ್ದೆ 2025, ಬೀಜ ಕಾಯ್ದೆ ಮತ್ತು ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟನ್ನು ಹಿಂಪಡೆಯಲಿ ಎಂದು ತಾಕೀತು ಮಾಡಿದರು.
ರೈತ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಮಂಜುನಾಥ ಕೈದಾಳೆ, ಕೆ.ಎಚ್.ಆನಂದರಾಜ, ಇ.ಶ್ರೀನಿವಾಸ, ತಿಪ್ಪೇಸ್ವಾಮಿ ಅಣಬೇರು, ಕರೆನಹಳ್ಳಿ ರಾಜು, ಗುಮ್ಮನೂರು ಬಸವರಾಜ, ಸತೀಶ ಅರವಿಂದ, ಆವರಗೆರೆ ಚಂದ್ರು, ಐರಣಿ ಚಂದ್ರು, ಸರೋಜಾ, ಬುಳ್ಳಾಪುರ ಹನುಮಂತಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರೈತರು, ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.
(ಬಾಕ್ಸ್-1)
ಕಾರ್ಮಿಕ ಮುಖಂಡ ಮಧು ತೊಗಲೇರಿ ಮಾತನಾಡಿ, ಡೀಸೆಲ್, ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಎಲ್ಲ ಅತ್ಯಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಬೆಲೆ ಏರಿಕೆಗೆ ಸೂಕ್ತ ನಿಯಂತ್ರಣ ಹೇರದ ಸರ್ಕಾರಗಳು ಅಸಡ್ಡೆ ತೋರುತ್ತಿವೆ. ಶಿಕ್ಷಣ, ಆರೋಗ್ಯ, ವಿಮೆ, ಸಾರಿಗೆ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಖಾಸಗೀಕರಣವನ್ನು ತಕ್ಷಣ ತಡೆಯಬೇಕು, ಸಂಸತ್, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶಾಸನಬದ್ಧವಾಗಿ ಮೀಸಲಾತಿ ಹಾಗೂ ಕನಿಷ್ಠ ಕೂಲಿಯ ಖಾತ್ರಿ ನೀಡಬೇಕು. ರಾಜ್ಯಾದ್ಯಂತ ಎದುರಾಗಿರುವ ಬರಗಾಲಕ್ಕೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
(ಬಾಕ್ಸ್-2)
ರೈತ ಮುಖಂಡ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ತೀವ್ರ ಬರ ಆವರಿಸಿದೆ. ಬರ ಪೀಡಿತ ಜಿಲ್ಲೆ, ತಾಲೂಕುಗಳನ್ನು ಘೋಷಣೆ ಮಾಡಬೇಕಾದ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿವೆ. ಬೆಳೆ ಹಾನಿಗೆ ಪರಿಹಾರ ನೀಡಬೇಕು. ಬರಕ್ಕೆ ಸೂಕ್ತ ಪರಿಹಾರ ಕಾರ್ಯ ಕೈಗೊಳ್ಳಲಿ. ಸಿಎಂ, ಡಿಸಿಎಂ, ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಕಾವೇರಿ ನೀರನ್ನು ರಾತ್ರೋರಾತ್ರಿ ತಮಿಳುನಾಡಿಗೆ ಹರಿಸುವ ಕೆಲಸ ಈ ಸರ್ಕಾರ ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಅಚ್ಚುಕಟ್ಟು ರೈತರ ಬದುಕಿನ ಕಡೆಗೂ ಸರ್ಕಾರ ಗಮನಹರಿಸಲಿ. ರೈತರು, ಕೃಷಿ ಕೂಲಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
-(ಫೋಟೋಗಳಿವೆ)