ಭಾರತದ ಕಾಂಪ್ಯಾಕ್ಟ್‌ ಎಸ್‌ಯುವಿ ವಲಯಕ್ಕೆ ಚೆಕ್‌ ಗಣರಾಜ್ಯದ ಸ್ಕೋಡಾ ಪ್ರವೇಶ : ಕೈಲಾಕ್‌ ಅನಾವರಣ

KannadaprabhaNewsNetwork | Updated : Nov 09 2024, 05:29 AM IST

ಸಾರಾಂಶ

ಮಾರುತಿ ಸುಜುಕಿ ಬ್ರೆಜ್ಜಾ, ಟಾಟಾ ನೆಕ್ಸಾನ್‌, ಹ್ಯುಂಡೈ ವೆನ್ಯೂ ಹಾಗೂ ಕಿಯಾ ಸೊನೆಟ್‌ ಕಾರುಗಳು ಆಳುತ್ತಿರುವ 4 ಮೀಟರ್‌ ಒಳಗಿನ ಭಾರತದ ಕಾಂಪ್ಯಾಕ್ಟ್‌ ಎಸ್‌ಯುವಿ ವಲಯಕ್ಕೆ ಚೆಕ್‌ ಗಣರಾಜ್ಯದ ಸ್ಕೋಡಾ ಪ್ರವೇಶಿಸಿದ್ದು, ಬಹುನಿರೀಕ್ಷಿತ ’ಕೈಲಾಕ್‌’ ಕಾರನ್ನು ಅನಾವರಣಗೊಳಿಸಿದೆ.

  ಮುಂಬೈ : ಮಾರುತಿ ಸುಜುಕಿ ಬ್ರೆಜ್ಜಾ, ಟಾಟಾ ನೆಕ್ಸಾನ್‌, ಹ್ಯುಂಡೈ ವೆನ್ಯೂ ಹಾಗೂ ಕಿಯಾ ಸೊನೆಟ್‌ ಕಾರುಗಳು ಆಳುತ್ತಿರುವ 4 ಮೀಟರ್‌ ಒಳಗಿನ ಭಾರತದ ಕಾಂಪ್ಯಾಕ್ಟ್‌ ಎಸ್‌ಯುವಿ ವಲಯಕ್ಕೆ ಚೆಕ್‌ ಗಣರಾಜ್ಯದ ಸ್ಕೋಡಾ ಪ್ರವೇಶಿಸಿದ್ದು, ಬಹುನಿರೀಕ್ಷಿತ ’ಕೈಲಾಕ್‌’ ಕಾರನ್ನು ಅನಾವರಣಗೊಳಿಸಿದೆ.

ಈಗಾಗಲೇ ಭಾರತದಲ್ಲಿ ಮಾರಾಟವಾಗುತ್ತಿರುವ ‘ಸ್ಕೋಡಾ ಕುಶಾಕ್‌’ನ ಮಿನಿ ಅವತಾರದಂತಿರುವ ಇದು, ಸ್ಕೋಡಾ ಕಂಪನಿ ಭಾರತದಲ್ಲಿ ಹೊರತರುತ್ತಿರುವ 10 ಲಕ್ಷ ರು. ಒಳಗಿನ ಮೊದಲ ಕಾರು. ಈ ಕಾರಿನ ಉದ್ದ ಪ್ರತಿಸ್ಪರ್ಧಿ ಕಾರುಗಳಷ್ಟೆ ಇದೆ. ಅಗಲದಲ್ಲಿ ಮಾತ್ರ ಕೆಲವೇ ಮಿ.ಮೀ. ವ್ಯತ್ಯಾಸವಿದೆ. ಎಕ್ಸ್‌ಶೋ ರೂಂ ಬೆಲೆಯೂ 5- 10 ಸಾವಿರ ರು. ಕಡಿಮೆ. ಬೇಸ್‌ ಮಾಡೆಲ್‌ಗೆ 7.89 ಲಕ್ಷ ರು. ನಿಗದಿಗೊಳಿಸಲಾಗಿದೆ (ತೆರಿಗೆ, ವಿಮೆ, ಇತರೆ ಶುಲ್ಕ ಸೇರಿದರೆ 10 ಲಕ್ಷ ರು. ಒಳಗೆ ಈ ಕಾರು ಸಿಗುವ ನಿರೀಕ್ಷೆ ಇದೆ).

ಊರಿಗೆ ಹೋದಾಗ ಅಕ್ಕಿ, ರಾಗಿ ಮೂಟೆ, ತೆಂಗಿನ ಕಾಯಿ, ತರಕಾರಿ ಜತೆಗೆ ಹೆಂಡತಿ, ಮಕ್ಕಳ ಲಗೇಜು ತುಂಬಿಕೊಂಡು ಬರಲು ಸಾಕಾಗುವಷ್ಟು ಅಂದರೆ, 446 ಲೀಟರ್‌ ಬೂಟ್‌ ಸ್ಪೇಸ್‌ ಹೊಂದಿದೆ. ಪ್ರತಿಸ್ಪರ್ಧಿ ಕಾರುಗಳ ಡಿಕ್ಕಿಯಲ್ಲಿ ಇಷ್ಟು ಸ್ಥಳಾವಕಾಶ ಇಲ್ಲ. ಹಿಂದಿನ ಸೀಟನ್ನು ಮಡಚಿದರೆ 1256 ಲೀಟರ್ ಬೂಟ್‌ ಸ್ಪೇಸ್‌ ದೊರಕಲಿದೆ.

ಆರು ಏರ್‌ಬ್ಯಾಗ್‌, ಡ್ರೈವರ್‌ ಹಾಗೂ ಪಕ್ಕ ಕೂರುವವರಿಗೆ ವೆಂಟಿಲೇಟೆಡ್‌ ಸೀಟು, 25 ಸುರಕ್ಷತಾ ಅಂಶಗಳು ಈ ಕಾರಿನಲ್ಲಿವೆ. ಆಕರ್ಷಕ ಗ್ರಿಲ್‌, ಎಲ್‌ಇಡಿ ಲೈಟ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಆರು ಏರ್ ಬ್ಯಾಗ್ ಬೇಸ್‌ ಮಾಡೆಲ್‌ನಲ್ಲೂ ಸಿಗುವುದು ಪಕ್ಕಾ. ಕುಶಾಕ್‌, ಸ್ಲಾವಿಯಾ ಪ್ಲಾಟ್‌ಫಾರ್ಮ್‌ ಅನ್ನೇ ಬಳಸಿ ಈ ಕಾರು ತಯಾರಿಸಲಾಗಿದೆ. ಆ ಎರಡೂ ಕಾರು ಸುರಕ್ಷತೆಯಲ್ಲಿ ಫೈವ್‌ ಸ್ಟಾರ್‌ ಹೊಂದಿವೆ.

1 ಲೀಟರ್‌ 3 ಸಿಲಿಂಡರ್‌ನ ಟರ್ಬೋ ಚಾರ್ಜ್‌ಡ್‌ ಪೆಟ್ರೋಲ್ ಎಂಜಿನ್‌ ಕಾರು ಇದಾಗಿದೆ. ಬೇಸ್ ಮಾಡೆಲ್‌ ಹೊರತುಪಡಿಸಿ ಬೇರೆ ಮಾದರಿಯ ಕಾರಿನ ದರವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಕುಶಾಕ್‌ಗೆ ಹೋಲಿಸಿದರೆ ಹಿಂಬದಿ ಲೆಗ್‌ರೂಂ ಕಡಿಮೆ ಇದ್ದರೂ ಕೈಲಾಕ್‌ನಲ್ಲಿ ಆರಾಮವಾಗಿ ಕೂರಲು ಅಡ್ಡಿ ಇಲ್ಲ. ಡಿ.2ರಿಂದ ಕೈಲಾಕ್‌ ಬುಕಿಂಗ್‌ ಶುರುವಾಗಲಿದೆ. ಗಣರಾಜ್ಯೋತ್ಸವದ ಮರುದಿನ ಡೆಲಿವರಿ ಸಿಗಲಿದೆ.

Share this article