
ಕನ್ನಡಪ್ರಭ ವಾರ್ತೆ ವಿಜಯಪುರ
ಹೋರಾಟಗಾರರಾದ ಅರವಿಂದ ಕುಲಕರ್ಣಿ, ಗಿರೀಶ ಕಲಘಟಗಿ, ಅಕ್ರಮ ಮಾಶಾಳಕರ, ಭಗವಾನರೆಡ್ಡಿ, ಜಗದೇವ ಸೂರ್ಯವಂಶಿ, ಭರತಕುಮಾರ, ಅನೀಲ, ಸಿದ್ದಲಿಂಗ, ಭೋಗೇಶ ಸೋಲಾಪುರ ಸೇರಿದಂತೆ ಒಟ್ಟು 27 ಜನರ ವಿರುದ್ಧ ಪಿಎಸ್ಐ ಸೀತಾರಾಮ ಲಮಾಣಿ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?:ಸಾರ್ವಜನಿಕರಿಗೆ ತೊಂದರೆಯಾಗುವಂತೆ, ಅನುಮತಿ ಪಡೆಯದೇ ಪ್ರತಿಭಟನೆ ಮಾಡುತ್ತಿದ್ದರು. ಪ್ರತಿಭಟನೆ ನಿಲ್ಲಿಸಲು ಹೋದ ಕಾನ್‌ಸ್ಟೇಬಲ್ ಶ್ರೀನಿವಾಸ ಬಿರಾದಾರಗೆ ಸ್ವಾಮೀಜಿ ಕಪಾಳ ಮೋಕ್ಷ ಮಾಡಿದರು. ಹಲ್ಲೆ ತಡೆಯೋಕೆ ಹೋದ ನನಗೂ ಸಂಗನಬಸವೇಶ್ವರ ಸ್ವಾಮೀಜಿ ಕಪಾಳ ಮೋಕ್ಷ ಮಾಡಿದರು. ಸ್ವಾಮೀಜಿ ನನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದರು. ಈ ವೇಳೆ ಸ್ವಾಮೀಜಿ ಹಾಗೂ ಇತರರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಸರ್ಕಾರಿ ಕೆಲಸಕ್ಕೆ ಅಡ್ಡಿ, ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಏನಾಗಿತ್ತು?:ಜಿಲ್ಲೆಯಲ್ಲಿ ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿ ಕಳೆದ 107 ದಿನಗಳಿಂದ ಹೋರಾಟ ನಡೆಯುತ್ತಿದೆ. ಗುರುವಾರ ಉಸ್ತುವಾರಿ ಸಚಿವರ ಮನೆ ಮುಂದೆ ನಡೆಯುತ್ತಿದ್ದ ಹೋರಾಟದಲ್ಲಿ ಬಸವನ ಬಾಗೇವಾಡಿ ತಾಲೂಕಿನ ಪಿ.ಬಿ.ಹುಣಶ್ಯಾಳ ಗ್ರಾಮದ ಶ್ರೀಮಠದ ಶ್ರೀ ಸಂಗನಬಸವೇಶ್ವರ ಸ್ವಾಮೀಜಿ ಮೊಬೈಲ್ ಕಸಿದುಕೊಳ್ಳಲು ಪೊಲೀಸರು ಮುಂದಾಗಿದ್ದರು. ತಮ್ಮನ್ನು ನೂಕಾಡಿದ್ದರಿಂದ ಸಿಟ್ಟಿಗೆದ್ದ ಸ್ವಾಮೀಜಿ, ಪೊಲೀಸರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವೇಳೆ ಪೊಲೀಸರು ಸ್ವಾಮೀಜಿಯನ್ನು ಮತ್ತೆ ದೂಡಿ ಪೊಲೀಸ್ ವ್ಯಾನ್ ಹತ್ತಿಸಿದ್ದಾರೆ. ಅಷ್ಟೆ ಅಲ್ಲದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಹೋರಾಟಗಾರರನ್ನು ವಶಕ್ಕೆ ಪಡೆದಿದ್ದರಿಂದ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.