ಗಜೇಂದ್ರಗಡ: ತಾಲೂಕಿನ ಗುಳಗುಳಿ ಗ್ರಾಮದಲ್ಲಿ ಸೋಮವಾರ ಡಾ. ಬಿ.ಆರ್. ಅಂಬೇಡ್ಕರ ಹೆಸರಿನ ನಾಮಫಲಕಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾಕಿದ ಘಟನೆ ಜರುಗಿದ್ದು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
ಬಳಿಕ ಅಧಿಕಾರಿಗಳು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಹಿನ್ನೆಲೆ ಪ್ರತಿಭಟನೆಯನ್ನು ಮೊಟಕುಗೊಳಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ ಅವರ ನಾಮಫಲಕಕ್ಕೆ ತಹಸೀಲ್ದಾರ್ ಸೇರಿ ಅಧಿಕಾರಿಗಳು ಹಾಗೂ ಮುಖಂಡರು ಪೂಜೆ ಸಲ್ಲಿಸಿದರು.ಮುಖಂಡರಾದ ಡಿ.ಜಿ. ಕಟ್ಟಿಮನಿ, ಮಂಜುನಾಥ ಬುರಡಿ, ದುರಗೇಶ ಹಿರೇಮನಿ, ಈಶ್ವರ ದೊಡ್ಡಮನಿ, ಸುರೇಶ ದಾರಿಮನಿ, ಶಿವಲಿಂಗಪ್ಪ ದೊಡ್ಡಮನಿ, ಯಮನೂರಪ್ಪ ದಾರಿಮನಿ, ನಾಗರಾಜ ದೊಡ್ಡಮನಿ, ಬಸವರಾಜ ಕಡಬಿನ, ಶರಣು ಅರಳಿಗಿಡದ, ಆನಂದ ಮಾದರ, ರಾಚಯ್ಯ ಬಾಳಿಕಾಯಿಮಠ, ಪುಂಡಲಿಕ ಮಾದರ, ಬಸವರಾಜ ಹಾದಿಮನಿ, ಯಮನಪ್ಪ ಹರಿಜನ, ಯಮನೂರ ಅಬ್ಬಿಗೇರಿ, ಲಕ್ಷ್ಮಣ ಲಕ್ಕಲಕಟ್ಟಿ, ಹನುಮಂತ ದಾರಿಮನಿ, ವಾಸಪ್ಪ ಪೂಜಾರ, ರಾಮಪ್ಪ ದಾರಿಮನಿ ಇತರರು ಇದ್ದರು.
ಬಂಧಿಸಲು ಸೂಚನೆ: ತಾಲೂಕಿನ ಗುಳಗುಳಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಕೃತ್ಯವೆಸಗಿದ ಕಿಡಿಗೇಡಿಗಳನ್ನು ಬಂಧಿಸಲು ಡಿವೈಎಸ್‌ಪಿ ಹಾಗೂ ಸಿಪಿಐ ಅವರಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ತಿಳಿಸಿದರು.