ಕೊಟ್ಟೂರು ಶೆಲ್ಟರ್ ಕಾಮಗಾರಿ ಮಂದಗತಿ ಭಕ್ತರ ಬೇಸರ

KannadaprabhaNewsNetwork |  
Published : Oct 20, 2025, 01:04 AM IST
ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಬಲ ಭಾಗದದಲ್ಲಿ ಕೈಗೊಂಡಿರುವ ಶೆಲ್ಟರ್ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ  | Kannada Prabha

ಸಾರಾಂಶ

ಸ್ವಾಮಿಯ ದೇವಸ್ಥಾನದ ಈ ಕಾಮಗಾರಿಯನ್ನು ಶಾಸಕ ಕೆ.ನೇಮರಾಜ ನಾಯ್ಕ್ ಈ ವರ್ಷದ ಆರಂಭದ ತಿಂಗಳಲ್ಲಿ ಚಾಲನೆ ನೀಡಿದ್ದರು.

ಕೊಟ್ಟೂರು: ಇಲ್ಲಿನ ಕೊಟ್ಟೂರು ಗುರುಕೊಟ್ಟೂರೇಶ್ವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಬಿಸಿಲು, ಮಳೆಯಿಂದ ರಕ್ಷಣೆಗಾಗಿ ನಿರ್ಮಿಸಲು ಉದ್ದೇಶಿಸಿದ ದೇವಸ್ಥಾನದ ಬಲ ಭಾಗದ ಶೆಲ್ಟರ್ ನಿರ್ಮಾಣ ಕಾರ್ಯ, ನಿರ್ಮಿಸುವ ಹೊಣೆಗಾರಿಕೆ ಹೊತ್ತಿರುವ ನಿರ್ಮಿತಿ ಕೇಂದ್ರ ನಿರ್ಲಕ್ಷ ವಹಿಸುತ್ತಿದೆ. ಇದರಿಂದ ಕಾಮಗಾರಿ ಯಾವಾಗ ಪೂರ್ಣಗೊಳ್ಳುವುದು ಎನ್ನುವ ಅನುಮಾನ ಕಾಡತೊಡಗಿದೆ.ಸ್ವಾಮಿಯ ದೇವಸ್ಥಾನದ ಈ ಕಾಮಗಾರಿಯನ್ನು ಶಾಸಕ ಕೆ.ನೇಮರಾಜ ನಾಯ್ಕ್ ಈ ವರ್ಷದ ಆರಂಭದ ತಿಂಗಳಲ್ಲಿ ಚಾಲನೆ ನೀಡಿದ್ದರು. ₹83 ಲಕ್ಷದ ಈ ಕಾಮಗಾರಿಯ ಮೊತ್ತವನ್ನು ಈಗಾಗಲೇ ಮುಕ್ಕಾಲು ಭಾಗದ ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ಮಿತಿ ಕೇಂದ್ರ ಪಡೆದಿದೆ. ಕಾಮಗಾರಿ ಕುಂಟುತ್ತಾ ಸಾಗಿದೆ.

ದೇವಸ್ಥಾನದ ಬಲ ಭಾಗದ ಎರಡು ಕಡೆ ಮಾತ್ರ ಪಿಲ್ಲರ್, ಬೀಮ್ ಹಾಕುವ ಕಾಮಗಾರಿ ಮುಗಿದಿದೆ. ಎದುರು ಭಾಗದಲ್ಲಿನ ಒಂದು ಹಂತಕ್ಕೆ ಪಿಲ್ಲರ್ ಹಾಕಿ ಕಾಮಗಾರಿ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದೆ.

ಈ ಸಮಯದಲ್ಲಿ ವಿದ್ಯುತ್ ತಂತಿಗೆ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಳ್ಳುವ ಜೆಸ್ಕಾಂ ಕಾರ್ಯದ ನೆಪವೊಡ್ಡಿ ಅರ್ಧಕ್ಕೆ ಕಾಮಗಾರಿ ನಿಂತಿದೆ.

ಧಾರ್ಮಿಕ ಇಲಾಖೆ ನಿರ್ಮಿತಿ ಕೇಂದ್ರ ಮತ್ತು ಜೆಸ್ಕಾಂ ಅಧಿಕಾರಿಗಳ ನಡುವೆ ಹೆಚ್ಚಿನ ಸಮನ್ವಯತೆ ಕಂಡು ಬಾರದ ಕಾರಣಕ್ಕಾಗಿ ಶಾಸಕರು ಮಧ್ಯ ಪ್ರವೇಶಿಸಿ ಕೇಬಲ್ ಕಾರ್ಯಕ್ಕೆ ನೆರವಾಗಿ ವಿದ್ಯುತ್ ತಂತಿ ತೆರವಿಗೆ ಅವಕಾಶ ಮಾಡಿಕೊಟ್ಟರು. ಈ ಕಾರ್ಯ ಮಾಡಿ ತಿಂಗಳಾದರೂ ಅರ್ಧಂಬರ್ಧ ಕಾಮಗಾರಿ ಪೂರೈಸಿದ ನಿರ್ಮಿತಿ ಕೇಂದ್ರದವರು ಇತ್ತ ಎಡತಾಕದೇ ಸುಮ್ಮನಾಗಿ ಬಿಟ್ಟಿದ್ದಾರೆ.

ಮುಂದಿನ ಡಿಸಂಬರ್ ನಲ್ಲಿ ಕೊಟ್ಟೂರೇಶ್ವರ ಕಾರ್ತಿಕ ಮಹೋತ್ಸವ ನಡೆಯಲಿದೆ. ದೀಪಾವಳಿ ಪಾಡ್ಯದ ದಿನದಿಂದ ಸ್ವಾಮಿಯ ಬೆಳ್ಳಿ ಪಲ್ಲಕ್ಕಿ ಪ್ರತಿ ಸೋಮವಾರ, ಗುರುವಾರ ರಾತ್ರಿ ನಡೆಯಲಿದೆ. ಉತ್ಸವ ಕಣ್ತುಂಬಿಕೊಳ್ಳಲು ಭಕ್ತರು ಸೇರಲಿದ್ದಾರೆ. ರಸ್ತೆಯಲ್ಲಿ ಹರಡಿರುವ ಜೆಲ್ಲಿ ಕಲ್ಲು, ಎಂ ಸ್ಯಾಂಡ್ ಭಕ್ತರಿಗೆ ಕಿರಿ-ಕಿರಿಯಾಗುವುದು ನಿಶ್ಚಿತ.

ಕಾಮಗಾರಿಗೆ ಮುಂಗಡ ಹಣ ಪಡೆದು ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳದಿರುವುದನ್ನು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಸೇರಿದಂತೆ ಇತರರು ಗಮನಿಸುತ್ತಿದ್ದರೂ ನಿರ್ಮಿತಿ ಕೇಂದ್ರದವರ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ ಎಂದು ದೇವಸ್ಥಾನ ಪ್ರದೇಶದ ವಾಸಿಗರು ಭಕ್ತರು ತೀವ್ರ ಬಗೆಯ ಅಸಮಾಧಾನ ತೋರುತ್ತಿದ್ದಾರೆ.

ಶೆಲ್ಟರ್ ಕಾಮಗಾರಿ ಕಾರಣದಿಂದ ದಿನನಿತ್ಯ ದೇವಸ್ಥಾನದ ಬಲ ಭಾಗದ ರಸ್ತೆಗುಂಟ ಪಾದ ಸಂಚಾರದ ಮೂಲಕ ಕೈಗೊಳ್ಳುವುದು ನಿಜಕ್ಕೂ ಯಮಯಾತನೆ. ಜತೆಗೆ ವ್ಯಾಪಾರ ಮತ್ತಿತರ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯದಂತಾಗಿದೆ ಎನ್ನುತ್ತಾರೆ ಭಕ್ತ ಕೊಟ್ರೇಶ್.

ಕಾಮಗಾರಿ ವೇಗ ಪಡೆದಿದೆ. ವಿದ್ಯುತ್ ತಂತಿ ತೆರವು ಕೆಲಸಕ್ಕಾಗಿ ಕಾಮಗಾರಿಯ ಕೆಲವು ದಿನದ ಮಟ್ಟಿಗೆ ನಿಲ್ಲಿಸಿದ್ದು ಬಿಟ್ಟರೆ ನಿರಂತರ ಕೆಲಸ ಸಾಗಿದೆ. ಡಿಸೆಂಬರ್ ವೇಳೆಗೆ ದೇವಸ್ಥಾನದ ರಸ್ತೆಯ ಶೆಲ್ಟರ್ ಹಾಕುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಮುಗಿಸುತ್ತೇವೆ ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಎಇಇ ಶಿವಕುಮಾರ್.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ