ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಉಭಯ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಸಾರ್ವಜನಿಕರು ಎಸ್ಐಆರ್ ಕರಾಳ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮುಖಾಂಡರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಗೌರವಾಧ್ಯಕ್ಷ ಎಸ್.ಎಲ್.ಆನಂದಪ್ಪ, ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಕಸಿಯುವ ಕೇಂದ್ರ ಸರ್ಕಾರದ ಹುನ್ನಾರವಾದ ಕರಾಳ ಎಸ್ಐಆರ್ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಇಂತಹ ಕಾಯ್ದೆ ಜಾರಿಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದರು.ದೇಶದಲ್ಲಿ ಚುನಾವಣಾ ಆಯೋಗದಿಂದ ಮೊದಲ ಹಂತದಲ್ಲಿ 12 ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಎಸ್‌ಐಆರ್ ಮ್ಯಾಪಿಂಗ್ ಕೈಗೊಂಡಿದೆ. ಇದರ ವಿರುದ್ಧ ಎಲ್ಲಾ ರಾಜ್ಯಗಳಲ್ಲೂ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದರೂ ಕೇಂದ್ರ ಸರ್ಕಾರವು ಜನರ ಸಂವಿಧಾನಬದ್ಧ ಮತದಾನದ ಹಕ್ಕು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿಹಾರದಲ್ಲಿ ಈಚೆಗೆ ಚುನಾವಣಾ ಆಯೋಗವು ಎಸ್ಐಆರ್ ಅಳವಡಿಸಿಕೊಂಡು ಮತದಾರರ ಪಟ್ಟಿ ಸಿದ್ಧಪಡಿಸಿತ್ತು. ಈ ಪ್ರಕ್ರಿಯದಲ್ಲಿ ಬಿಹಾರದ ಸುಮಾರು 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಕರಡು ವರದಿಯಲ್ಲಿ ತಿಳಿಸಲಾಗಿತ್ತು. ನಂತರ ಇದೇ ಎಸ್ಐಆರ್ ಸಮೀಕ್ಷೆಯಿಂದ ಉತ್ತರ ಪ್ರದೇಶದಲ್ಲಿ ಸುಮಾರು 2.89 ಕೋಟಿ ಅಂದರೆ ಅಲ್ಲಿನ ಶೇ.18.70ರಷ್ಟು ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರಲ್ಲಿ ಹೆಚ್ಚಿನದಾಗಿ ಬಡವರು, ದಲಿತರು, ಹಿಂದುಳಿ, ಅಲ್ಪಸಂಖ್ಯಾತರು ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ದೂರಿದರು.
ಅಧ್ಯಕ್ಷೆ ಪರ್ವೀನ್ ಬಾನು, ಬೀಬಿ ಜಾನ್, ಜಾಕೀರ್ ಸಾಬ್, ರೇಖಾ, ಸುಹೀಲ್ ಭಾಷಾ, ರಜಿಯಾ ಬೀ, ಆರೀಫ್ ಸಾಬ್, ಸಾದಿಕ್ ಇತರರು ಇದ್ದರು.