ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರದ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಭಾಂಗಣದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.ಇದೇ ವೇಳೆ ಎಸ್.ಎಂ. ಕೃಷ್ಣರವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ನಂತರ ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಸುಬ್ಬಪ್ಪ ಮಾತನಾಡಿ, ಎಸ್.ಎಂ. ಕೃಷ್ಣರವರು ಸಚಿವರಾಗಿ, ಮುಖ್ಯಮಂತ್ರಿಗಳಾಗಿ ರಾಜ್ಯಕ್ಕೆ ಹಲವಾರು ವಿದ್ಯುತ್ ಯೋಜನೆಗಳನ್ನು ತಂದರು. ಯಳಂದೂರಿನಲ್ಲಿ 2002ರಲ್ಲಿ ಆರಂಭಿಸಿದ ಅಕ್ಷರ ದಾಸೋಹವನ್ನು ಸೋನಿಯಾ ಗಾಂಧಿಯವರಿಂದ ಉದ್ಘಾಟಿಸಿದರು ಎಂದು ಸ್ಮರಿಸಿದರು.ಹಲವು ಕೈಗಾರಿಕೆಗಳ ಸ್ಥಾಪನೆಗೆ ಕಾರಣೀಭೂತರಾದರು. ಬೆಂಗಳೂರು ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದರು. ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದಾಗ ಮತ್ತೆ ಕಾಡಿನಿಂದ ನಾಡಿಗೆ ಕರೆತರಲು ಬಹಳವಾಗಿ ಶ್ರಮಿಸಿದ್ದರು. ಕಾವೇರಿ ವಿವಾದವನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಮಾತನಾಡಿ, 92 ವರ್ಷಗಳ ತುಂಬು ಜೀವನವನ್ನು ನಡೆಸಿದ್ದ ಎಸ್.ಎಂ. ಕೃಷ್ಣರವರು ರಾಜ್ಯಕ್ಕೆ, ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರ ವಿದ್ಯಾಭ್ಯಾಸ, ರಾಜಕೀಯ ಜೀವನ, ವಿವಿಧ ಸೇವೆಗಳನ್ನು ಸ್ಮರಿಸಿದರು.ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಕೆ.ಆರ್. ಸಂತಾನಂ ಹಾಗೂ ಪ್ರಕಟಣ ವಿಭಾಗದ ಗೌರವ ಸಂಪಾದಕ ಆರ್.ಎಸ್. ಪೂರ್ಣಾನಂದ ಅವರು ಎಸ್.ಎಂ. ಕೃಷ್ಣರವರ ರಾಜಕೀಯ ಸೇವೆಯ ಕುರಿತು ಗುಣಗಾನ ಮಾಡಿದರು.
ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ, ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ರೇವಣ್ಣಸ್ವಾಮಿ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ರಾಜಶೇಖರ್, ಯೋಜನಾ ನಿರ್ದೇಶಕ ಕೆ.ಎನ್. ಶಿವಶಂಕರ್, ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ ಕೆ.ಬಿ. ಸುರೇಶ್ ಬಾಬು, ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.ಬಿಜೆಪಿ ಕಚೇರಿಯಲ್ಲಿ ಎಸ್.ಎಂ. ಕೃಷ್ಣಗೆ ಶ್ರದ್ಧಾಂಜಲಿ
ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ, ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮೈಸೂರು ನಗರ ಅಧ್ಯಕ್ಷ ಎಲ್. ನಾಗೇಂದ್ರ ಅವರು ರಾಜ್ಯ ವಕ್ತಾರ ಎಂ.ಜಿ.ಮಹೇಶ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ನಗರ ಉಪಾಧ್ಯಕ್ಷ ಮಂಜು ಜೋಗಿ, ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್, ಚಾಮರಾಜ ಮಂಡಲ ಅಧ್ಯಕ್ಷರಾದ ದಿನೇಶ್ ಗೌಡ, ಚಾಮುಂಡೇಶ್ವರಿ ಮಂಡಲ ಪ್ರಧಾನ ಕಾರ್ಯದರ್ಶಿ ಹೇಮಂತ್ ಹಾಗೂ ಮಾಧ್ಯಮ ಸಹ ಸಂಚಾಲಕ ಬಿ.ಎಂ. ಸಂತೋಷ್ ಕುಮಾರ್ ಮೊದಲಾದವರು ಇದ್ದರು.