ಕೆಂಚಾಂಬ ದೇವಿಯ ಚಿಕ್ಕ ಜಾತ್ರೆ

KannadaprabhaNewsNetwork | Published : Nov 6, 2024 11:45 PM

ಸಾರಾಂಶ

ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿಯ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕ ದೇವಿಯ ಚಿಕ್ಕ ಜಾತ್ರೆ ಸುಮಾರು 48 ಹಳ್ಳಿಗಳ ಭಕ್ತರೊಂದಿಗೆ ಕೆಂಚಾಂಬ ದೇವಸ್ಥಾನದ ಆವರಣದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ಸಂಜೆ ಹರಿಹಳ್ಳಿ ಗ್ರಾಮದಲ್ಲಿರುವ ಮೂಲ ದೇವಿಗೆ ಸಪ್ತಮಾತೃಕಾ ಅಲಂಕಾರದೊಂದಿಗೆ ಜಾತ್ರೆ ಪ್ರಾರಂಭವಾಯಿತು. ದೇವಾಲಯದ ಆವರಣದಲ್ಲಿ ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿಯ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕ ದೇವಿಯ ಚಿಕ್ಕ ಜಾತ್ರೆ ಸುಮಾರು 48 ಹಳ್ಳಿಗಳ ಭಕ್ತರೊಂದಿಗೆ ಕೆಂಚಾಂಬ ದೇವಸ್ಥಾನದ ಆವರಣದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಮಂಗಳವಾರ ಸಂಜೆ ಹರಿಹಳ್ಳಿ ಗ್ರಾಮದಲ್ಲಿರುವ ಮೂಲ ದೇವಿಗೆ ಸಪ್ತಮಾತೃಕಾ ಅಲಂಕಾರದೊಂದಿಗೆ ಜಾತ್ರೆ ಪ್ರಾರಂಭವಾಯಿತು. ದೇವಾಲಯದ ಆವರಣದಲ್ಲಿ ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಬುಧವಾರ ಬೆಳಗ್ಗೆ ಮೂಲ ದೇವಸ್ಥಾನದಿಂದ ಕೆಂಚಾಂಬಿಕೆ ಉತ್ಸವ ಮೂರ್ತಿಯೊಂದಿಗೆ, ಬೆಳ್ಳಿ ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಶ್ರೀ ಕೆಂಚಾಂಬ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು. ಸುಮಾರು ಎರಡು ಗಂಟೆ ನಡೆಯುವ ಉತ್ಸವದ ಸಂದರ್ಭದಲ್ಲಿ ಗ್ರಾಮದ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ ತೆಂಗಿನಕಾಯಿ ಈಡುಗಾಯಿ ಹಾಕಿ ಭಕ್ತಿ ಮೆರೆದರು.ಸುಮಾರು 10ರ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿದ ಕೆಂಚಾಂಬಿಕೆ ಮೆರವಣಿಗೆ ದೇವಿಯನ್ನು ಸಮೀಪದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ಹುತ್ತದ ರೂಪದಲ್ಲಿರುವ ಕೆಂಚಾಂಬ ದೇವಿಗೆ ಒಡವೆಗಳನ್ನು ಧರಿಸಿ ಪೂಜಾ ವಿಧಿವಿಧಾನಗಳು ಪಾರಂಭಿಸಿ, ಮಧ್ಯಾಹ್ನ 2 ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ದೇವಸ್ಥಾನದ ಸುತ್ತ ಬಲಿ ಅನ್ನ ಹಾಕಿದರು. ನಂತರ ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ, ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿ ಬಳಿಗೆ ಬಂದು, ದೇವಸ್ಥಾನದ ಬಳಿಗೆ ಉತ್ಸವ ಮೂರ್ತಿಯನ್ನು ಕರೆತಂದು ದೇವಸ್ಥಾನ ಪ್ರದಕ್ಷಿಣೆ ಮಾಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಉತ್ಸವ ಮೂರ್ತಿ ಮೇಲೆ ಕರಿಮೆಣಸನ್ನು ಎಸೆದು ಹರಕೆ ಸಲ್ಲಿಸಿದರು. ನಂತರ ದೇವಾಲಯದ ಮುಂಭಾಗದಲ್ಲಿ ಮಧ್ಯಾಹ್ನ 2.30ಕ್ಕೆ ಕೆಂಡೋತ್ಸವ ನಡೆಸಲಾಯಿತು. ಸ್ಥಳದಲ್ಲಿದ್ದ ಭಕ್ತರೆಲ್ಲರೂ ಕೆಂಡ ಹಾಯ್ದು ಪುನೀತರಾದರು. ರಾತ್ರಿ ಒಂದು ಗಂಟೆವರೆಗೆ ಭಕ್ತರಿಗೆ ದೇವಿ ಪಾದ ಮುಟ್ಟಲು ಅವಕಾಶ ನೀಡಲಾಯಿತು.ಜಿಲ್ಲಾಧಿಕಾರಿ ಸತ್ಯಭಾಮಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಉಪವಿಭಾಗಾಧಿಕಾರಿ ಶೃತಿ, ತಹಸಿಲ್ದಾರ್ ನಂದಕುಮಾರ್, ಗ್ರೇಡ್ 2 ತಹಸೀಲ್ದಾರ್‌ ಪೂರ್ಣಿಮಾ, ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಮಾ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Share this article