ಎನ್.ಎಸ್.ವಿ. ಪಾಕ್ಷಿಕ, ನವಜಾತ ಶಿಶು ಸಪ್ತಾಹ ಆಚರಣೆ
ಹೆಣ್ಣಾಗಲಿ, ಗಂಡಾಗಲಿ ಎರಡೇ ಮಕ್ಕಳು ಸಾಕು. ಚಿಕ್ಕ ಕುಟುಂಬ ಚೊಕ್ಕ ಕುಟುಂಬವಾಗಿದೆ ಎಂದು ಕೊಪ್ಪಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಪ್ಪಳ ಸಂಯುಕ್ತಾಶ್ರಯದಲ್ಲಿ ನಗರದ ಗವಿಮಠ ಹಿಂದುಗಡೆಯ ಕುವೆಂಪು ನಗರದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಎನ್.ಎಸ್.ವಿ. ಪಾಕ್ಷಿಕ ಹಾಗೂ ನವಜಾತ ಶಿಶು ಸಪ್ತಾಹದಲ್ಲಿ ಮಾತನಾಡಿದರು.ಪ್ರತಿವರ್ಷ ನ. 21ರಿಂದ ಡಿ. 5ರ ವರೆಗೆ ಎನ್.ಎಸ್.ವಿ. ಪಾಕ್ಷಿಕ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಸಂತಾನ ನಿರೋಧ ಶಸ್ತ್ರಚಿಕಿತ್ಸೆಯಲ್ಲಿ ಪುರುಷರ ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸಿ ಸೇವೆ ನೀಡುವುದಾಗಿದೆ. ತಾಯಿ ಮರಣ ಮತ್ತು ಶಿಶುಮರಣ ತಡೆಗಟ್ಟಲು, ಜನಸಂಖ್ಯಾ ನಿಯಂತ್ರಣದಲ್ಲಿ ತರಲು ಪುರುಷರ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಪ್ರಮುಖವಾಗಿದೆ. ಹೆಣ್ಣು ಮಕ್ಕಳು ಹೃದಯ ತೊಂದರೆ, ಕ್ಯಾನ್ಸರ್ ಕಾಯಿಲೆ ಹಾಗೂ ಇತರೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹವರ ಪತಿಯಂದಿರಿಗೆ ಎನ್.ಎಸ್.ವಿ. ಶಸ್ತ್ರಚಿಕಿತ್ಸೆ ಮಾಡಬಹುದು. ಇದು ಸರಳ ಹಾಗೂ ಸುರಕ್ಷಿತ ವಿಧಾನವಾಗಿದೆ. ಗಾಯ ಇಲ್ಲ, ಹೊಲಿಗೆ ಇಲ್ಲ, ಚಿಕಿತ್ಸಾ ವಿಧಾನ ಕೇವಲ 5ರಿಂದ 10 ನಿಮಿಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗುವುದು. ಈ ಶಸ್ತ್ರಚಿಕಿತ್ಸೆಯ ನಂತರ ಸಾಧಾರಣವಾಗಿ ಎಲ್ಲ ಕೆಲಸ-ಕಾರ್ಯಗಳನ್ನು ಮಾಡಬಹುದು. ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ತಕ್ಷಣ ಮನೆಗೆ ಹೋಗಬಹುದು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಮಾತನಾಡಿ, ಹುಟ್ಟಿದ 28 ದಿನದೊಳಗಿನ ಶಿಶುವಿನ ಮರಣ ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ನವಜಾತ ಶಿಶುವನ್ನು ಕಾಂಗರೂ ಮಾದರಿಯಲ್ಲಿ ಬೆಚ್ಚಗಿಡುವುದು, ಗಂಟೆಗೊಂದು ಬಾರಿ ತಾಯಿಯ ಎದೆಹಾಲು ನೀಡುವುದು, ಹೆರಿಗೆಯಾದ ಶಿಶುವಿಗೆ ಸೋಂಕು ಉಂಟಾಗದಂತೆ ನೋಡಿಕೊಳ್ಳುವುದಲ್ಲದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮಗುವನ್ನು ತಾಯಿಯ ಪಕ್ಕದಲ್ಲಿಯೇ ಮಲಗಿಸಿಕೊಳ್ಳಬೇಕು. ಮಗುವಿಗೆ ಹೊಕ್ಕಳಬಳ್ಳಿಗೆ ಏನನ್ನೂ ಹಚ್ಚಬಾರದು ಮತ್ತು ಮಗುವಿಗೆ ಚರ್ಮದ ಮೇಲೆ ಯಾವುದೇ ರೀತಿಯ ಬರೆ ಹಾಕಬಾರದು. ಹುಟ್ಟಿದ ಅರ್ಧಗಂಟೆಯೊಳಗೆ ಮಗುವಿಗೆ ತಾಯಿಯ ಎದೆಹಾಲು ನೀಡಬೇಕು. ಆರು ತಿಂಗಳ ವರೆಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ನೀಡಬೇಕು. ಇದರ ಬದಲಿಗೆ ಬೇರೇನೂ ನೀಡಬಾರದು. ಮಗುವಿಗೆ ನೀಡುವ ಎಲ್ಲ ಲಸಿಕೆಗಳನ್ನು ತಪ್ಪದೇ ಸರಿಯಾದ ಸಮಯಕ್ಕೆ ಹಾಕಿಸಬೇಕು. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ವಿಧಾನಗಳನ್ನು ಅಳವಡಿಸಿಕೊಂಡು, ಮಕ್ಕಳ ಆರೋಗ್ಯವನ್ನು ಕಾಪಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲೇರಿಯಾ ಲಿಂಕ್ ವರ್ಕರ್ ಶ್ರೀನಿವಾಸ, ಉದಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಯಲಕ್ಷ್ಮೀ, ಆಶಾ ಕಾರ್ಯಕರ್ತೆ ಪೂರ್ಣಿಮಾ, ಅಂಗನವಾಡಿ ಕಾರ್ಯಾಕರ್ತೆ ಮಂಜುಳಾ ಸೇರಿದಂತೆ ಗರ್ಭೀಣಿಯರು, ಬಾಣಂತಿಯರು, ತಾಯಂದಿರು, ಕಿಶೋರಿಯರು, ನಾಗರಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.