ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಉತ್ತರ ಕರ್ನಾಟಕ ಭಾಗದ ವಿಜಯನಗರ, ಕೊಪ್ಪಳ ಮತ್ತು ಗದಗ ಮೂರು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಬ್ಯಾರೇಜ್‌ಗೆ 12 ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ನಿರ್ವಹಣೆಗೆ ಸರ್ಕಾರ ಅನುದಾನ ನೀಡಿಲ್ಲ.ಅಲ್ಪ ಅನುದಾನ ನೀಡಿ ಉತ್ತರ ಭಾರತದ ಕಂಪನಿಯೊಂದಕ್ಕೆ ಟೆಂಡರ್ ನೀಡಿದೆ. ನೀರಾವರಿ ನಿಗಮದಿಂದ ಪ್ರತಿಯೊಂದು ಯೋಜನೆಗಳಿಗೆ ಅನುದಾನ ನೀಡುವ ರೀತಿಯಲ್ಲೇ ಈ ಯೋಜನೆಗೆ ಮೀಸಲಿಟ್ಟ ಅನುದಾನದಲ್ಲೇ ನಿರ್ವಹಣೆ ಮಾಡುವ ಸ್ಥಿತಿ ಎದುರಾಗಿದೆ.
₹483.26 ಲಕ್ಷ ಅನುದಾನ: ಕಳೆದ 2021ರಲ್ಲಿ ಬ್ಯಾರೇಜ್‌ನಲ್ಲಿ ರಬ್ಬರ್ ಸೀಲ್ ಕಿತ್ತು ಹೋಗಿತ್ತು. ಆಗ ಒಂದು ವಾರಕ್ಕೂ ಹೆಚ್ಚು ನಿತ್ಯ 1500 ಕ್ಯುಸೆಕ್ ನೀರು ಪೋಲಾಗಿತ್ತು. ಇದರಿಂದ ತುಂಗಭದ್ರಾ ನದಿ ನೀರನ್ನೇ ನೆಚ್ಚಿಕೊಂಡ 500 ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾಗಿತ್ತು. ಜತೆಗೆ ರೈತರ ಜಮೀನುಗಳಿಗೂ ನೀರು ಸಿಗಲಿಲ್ಲ. ಬ್ಯಾರೇಜ್‌ನಲ್ಲಿ ನೀರು ಖಾಲಿ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ, ತಾತ್ಕಾಲಿಕ ರಿಪೇರಿಗೆ ಅಧಿಕಾರಿಗಳು ಮುಂದಾಗಿದ್ದರು.ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸೆ. 4, 2012ರಲ್ಲಿ ಲೋಕಾರ್ಪಣೆ ಮಾಡಿ 12 ವರ್ಷ ಕಳೆದಿದೆ. ಇದೇ ಮೊದಲ ಬಾರಿಗೆ ₹402.51 ಲಕ್ಷ ಮತ್ತು ₹80.75 ಲಕ್ಷ ಸೇರಿದಂತೆ ಒಟ್ಟು ₹483.26 ಲಕ್ಷ ಅನುದಾನ ನೀಡಿ, ಬ್ಯಾರೇಜ್ ಗೇಟ್ ದುರಸ್ತಿ ಕಾಮಗಾರಿ ಮಾಡಲು, ಉತ್ತರ ಭಾರತ ಮೂಲದ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದೆ.
ಬ್ಯಾರೇಜ್‌ಗೆ 26 ಗೇಟುಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ಗೇಟ್‌ಗಳ ರಬ್ಬಲ್ ಸೀಲ್ ಕಿತ್ತು ಹೋಗಿವೆ. ಕೆಲವೆಡೆ ಗೇಟ್‌ಗಳ ರೋಲಿಂಗ್ ಸಮಸ್ಯೆ ಇದೆ, ಗೇಟ್‌ಗಳ ವೀಲ್ ದುರಸ್ತಿ ಹೀಗೆ ನಾನಾ ರೀತಿಯ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಇನ್ನು ಗೇಟ್‌ಗಳನ್ನು ಸಂಪೂರ್ಣ ಮುಚ್ಚಿ ಕಾಮಗಾರಿ ಮಾಡಬೇಕಿದೆ.3.117 ಟಿಎಂಸಿ ನೀರು ನಿಲ್ಲಿಸಿ: ಸಿಂಗಟಾಲೂರು ಬ್ಯಾರೇಜ್ 513 ಮೀಟರ್ ಎತ್ತರವಿದ್ದು, ಇದರಲ್ಲಿ 509 ಎಫ್‌ಆರ್‌ಎಲ್‌ಗೆ ನೀರು ಸಂಗ್ರಹಿಸಿದರೆ 3.117 ಟಿಎಂಸಿ ನೀರು ನಿಲುಗಡೆಯಾಗುತ್ತಿದೆ. ಯೋಜನೆ ಪೂರ್ಣಗೊಂಡು 12 ವರ್ಷ ಕಳೆದರೂ, ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಆಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಬ್ಯಾರೇಜ್‌ನಲ್ಲಿ ಸದ್ಯ 2.26 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಉಳಿದ 1 ಟಿಎಂಸಿಗೂ ಹೆಚ್ಚು ನೀರನ್ನು ಸಂಗ್ರಹಿಸಲು ಕೆಲವು ಗ್ರಾಮಗಳ ಸ್ಥಳಾಂತರ ಸಮಸ್ಯೆ ಎದುರಾಗಿದೆ. ಈ ಕೂಡಲೇ ಸರ್ಕಾರ ಈ ಕುರಿತು ಕ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯಲು, ರೈತರ ಜಮೀನುಗಳಿಗೆ ಮತ್ತು ಕೆರೆ ತುಂಬಿಸುವ ಯೋಜನೆಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಬ್ಯಾರೇಜ್‌ನಲ್ಲಿ ನೀರನ್ನು ಭರ್ತಿ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.ಬ್ಯಾರೇಜ್‌ನ ಗೇಟ್ ನಿರ್ವಹಣೆಗಾಗಿ ಸರ್ಕಾರ ₹483.26 ಲಕ್ಷ ಅನುದಾನ ನೀಡಿದೆ. ಈಗಾಗಲೇ ಟೆಂಡರ್ ಕರೆದು ಉತ್ತರ ಭಾರತ ಮೂಲಕ ಕಂಪನಿಗೆ ನೀಡಲಾಗಿದೆ. ಕಾಮಗಾರಿ ಆರಂಭವಾಗಿದೆ. ಬ್ಯಾರೇಜ್‌ನಲ್ಲಿ ನೀರು ಕಡಿಮೆಯಾದ ನಂತರದಲ್ಲಿ ಕೆಲ ದುರಸ್ತಿ ಕಾಮಗಾರಿ ಮಾಡಬೇಕಿದೆ ಎಂದು ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ರಾಘವೇಂದ್ರ ಹೇಳಿದರು.