ಪೀಣ್ಯದಲ್ಲಿ ಸಣ್ಣ ಕೈಗಾರಿಕಾ ನಿಗಮ ಉತ್ಕೃಷ್ಟತಾ ಕೇಂದ್ರ: ಕರಂದ್ಲಾಜೆ

KannadaprabhaNewsNetwork |  
Published : Sep 22, 2024, 01:48 AM IST
KDEA 1 | Kannada Prabha

ಸಾರಾಂಶ

ಪೀಣ್ಯದಲ್ಲಿ ನ್ಯಾಷನಲ್‌ ಸ್ಮಾಲ್‌ಸ್ಕೇಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌(ಎನ್‌ಎಸ್‌ಐಸಿ)ನ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಸೂಕ್ತ ಜಮೀನು ಕೇಳಿದ್ದು ಶೀಘ್ರದಲ್ಲೇ ಮಂಜೂರಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಣ್ಣ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೀಣ್ಯದಲ್ಲಿ ನ್ಯಾಷನಲ್‌ ಸ್ಮಾಲ್‌ಸ್ಕೇಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌(ಎನ್‌ಎಸ್‌ಐಸಿ)ನ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಸೂಕ್ತ ಜಮೀನು ಕೇಳಿದ್ದು ಶೀಘ್ರದಲ್ಲೇ ಮಂಜೂರಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಣ್ಣ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದಿಂದ ಶನಿವಾರ ಆಯೋಜಿಸಿದ್ದ ‘ದಲಿತ ಉದ್ದಿಮೆದಾರರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದಲ್ಲಿ 16 ಸಾವಿರಕ್ಕೂ ಅಧಿಕ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿವೆ. ಆದ್ದರಿಂದ ಪೀಣ್ಯದಲ್ಲೇ ಎನ್‌ಎಸ್‌ಐಸಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಿದರೆ ಕೈಗಾರಿಕೆಗಳಿಗೆ ಅನುಕೂಲವಾಗಲಿದ್ದು ಅಗತ್ಯ ಭೂಮಿ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ. ಇಲಾಖೆ ಹಂತದಲ್ಲಿ ಒಪ್ಪಿಗೆ ಸಿಕ್ಕಿದ್ದು ಸಚಿವ ಸಂಪುಟ ಸಭೆಯಲ್ಲಿ ಶೀಘ್ರವೇ ಒಪ್ಪಿಗೆ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಂಸದರಾದ ಎಂ.ಮಲ್ಲೇಶ್‌ ಬಾಬು, ಪ್ರಿಯಾಂಕ ಜಾರಕಿಹೊಳಿ, ಮಾಜಿ ಸಂಸದ ಡಾ.ಎಲ್‌.ಹನುಮಂತಯ್ಯ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌, ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್‌ ಹಾಜರಿದ್ದರು.

ಅಗತ್ಯ ತರಬೇತಿಗೆ ವ್ಯವಸ್ಥೆ: ಎಂಬಿಪಾ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ಸೂಕ್ತ ತರಬೇತಿಯ ಅಗತ್ಯವಿದೆ. ಆದ್ದರಿಂದ ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಭರವಸೆ ನೀಡಿದರು.

ಉದ್ಯಮಿಗಳು ತರಬೇತಿ ಪಡೆದರೆ ಇನ್ನಷ್ಟು ಸಾಧನೆಗೆ ಸಹಾಯಕವಾಗಲಿದೆ. ಕೆಐಎಡಿಬಿ ಪ್ಲಾಟ್ ಹಾಗೂ ಕೆಎಸ್‌ಎಸ್‌ಡಿಸಿ ಷೆಡ್ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ, ವರ್ಗದ ಉದ್ಯಮಿಗಳಿಗೆ ಶೇ 24.1ರಷ್ಟು ಮೀಸಲು, ಭೂಮಿ ಮಂಜೂರಾತಿಯಲ್ಲಿ ಶೇ.75ರಷ್ಟು ಸಬ್ಸಿಡಿ, ಕೆಎಸ್‌ಎಫ್‌ಸಿಯಿಂದ 10 ಕೋಟಿ ರು.ವರೆಗೂ ಶೇ.4 ರ ಬಡ್ಡಿ ದರದಲ್ಲಿ ಸಾಲ ಮತ್ತಿತರ ನೆರವು ನೀಡಲಾಗಿದೆ. ಕಳೆದ 15 ತಿಂಗಳಲ್ಲಿ ಪರಿಶಿಷ್ಟ ಜಾತಿಯ 121 ಉದ್ಯಮಿಗಳಿಗೆ 130 ಎಕರೆ, ಪರಿಶಿಷ್ಟ ವರ್ಗದ 39 ಉದ್ಯಮಿಗಳಿಗೆ 42 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌