ಅಂಕೋಲಾದಲ್ಲಿ ಸಿಡುಬು ರೋಗ ಉಲ್ಬಣ: ಹೆಚ್ಚಿದ ಆತಂಕ

KannadaprabhaNewsNetwork |  
Published : Mar 02, 2026, 02:45 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಹವಾಮಾನ ಬದಲಾವಣೆ ಹಾಗೂ ವೈರಲ್ ಸೋಂಕಿನ ವೇಗದ ಹರಡುವಿಕೆ ಕಾರಣದಿಂದ ತಾಲೂಕಿನಲ್ಲಿ ಸಿಡುಬು (ಚಿಕನ್‌ ಪಾಕ್ಸ್) ರೋಗದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹವಾಮಾನ ಬದಲಾವಣೆ ಪರಿಣಾಮ । ತಾಲೂಕಿನಲ್ಲಿ ಚಿಕನ್‌ಪಾಕ್ಸ್‌ ಹೆಚ್ಚಳ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಹವಾಮಾನ ಬದಲಾವಣೆ ಹಾಗೂ ವೈರಲ್ ಸೋಂಕಿನ ವೇಗದ ಹರಡುವಿಕೆ ಕಾರಣದಿಂದ ತಾಲೂಕಿನಲ್ಲಿ ಸಿಡುಬು (ಚಿಕನ್‌ ಪಾಕ್ಸ್) ರೋಗದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಶಾಲೆಗೆ ಗೈರಾಗುತ್ತಿರುವ ಮಕ್ಕಳು:

ಕಳೆದ ಒಂದು ತಿಂಗಳಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಕ್ಕಳು, ಯುವಕರಲ್ಲೂ ಸಿಡುಬಿನ ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಜ್ವರ ಮತ್ತು ಚರ್ಮದ ಮೇಲೆ ನೀರಿನ ಗುಳ್ಳೆಗಳ ಸಮಸ್ಯೆಯಿಂದ ತರಗತಿಗಳಿಗೆ ಗೈರಾಗುತ್ತಿರುವುದು ಕಂಡು ಬಂದಿದೆ. ಪರೀಕ್ಷೆಯ ಸಂದರ್ಭದಲ್ಲಿ ಸಿಡುಬು ವಿದ್ಯಾರ್ಥಿಗಳಿಗೆ- ಪಾಲಕರಿಗೆ ಮತ್ತಷ್ಟು ಕಿರಿಕಿರಿಯಾಗಿ ಪರಿಗಣಿಸಿದೆ.

ಮುನ್ನೆಚ್ಚರಿಕೆ ಕೊರತೆ ಕಾರಣವೇ?:

ತಾಲೂಕು ಆರೋಗ್ಯಾಧಿಕಾರಿಗಳ ಮಾಹಿತಿಯಂತೆ, ಹವಾಮಾನ ಬದಲಾವಣೆ, ವೈರಲ್ ಸೋಂಕಿನ ವೇಗದ ಹರಡುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳ ಕೊರತೆ ಇವು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರಬಹುದು. ಸಿಡುಬು ಸಾಮಾನ್ಯವಾಗಿ ಜ್ವರ, ಮೈಕೈ ನೋವು, ತಲೆನೋವು ಹಾಗೂ ನಂತರ ದೇಹದ ಮೇಲೆ ಸಣ್ಣ ನೀರಿನ ಗುಳ್ಳೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೇ ಈ ರೋಗ ಸುಲಭವಾಗಿ ಹರಡುತ್ತದೆ.

ಸಿಡುಬು ಒಂದು ವೈರಲ್ ಸೋಂಕಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಇದು ಸ್ವಯಂ ಕಡಿಮೆ ಆಗುವ ರೋಗ. ಆದರೆ, ಮಕ್ಕಳಲ್ಲಿ, ಗರ್ಭಿಣಿಯರಲ್ಲಿ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಜಾಗೃತೆ ಅಗತ್ಯವಾಗಿದೆ. ಜ್ವರ ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಮನೆಯಲ್ಲೇ ವಿಶ್ರಾಂತಿ, ಶುದ್ಧವಾದ ಆಹಾರ, ಹೆಚ್ಚು ದ್ರವ ಪದಾರ್ಥ ಸೇವನೆ ಹಾಗೂ ಸ್ವಚ್ಛತೆ ಕಾಪಾಡುವುದು ಮುಖ್ಯ ಎನ್ನುವುದು ಆರೋಗ್ಯ ಇಲಾಖೆಯ ಸಲಹೆಯಾಗಿದೆ.

“ಸಿಡುಬು ಕಾಣಿಸಿಕೊಂಡವರು ಕನಿಷ್ಠ 7–10 ದಿನಗಳ ಕಾಲ ಇತರರ ಸಂಪರ್ಕದಿಂದ ದೂರವಿರಬೇಕು. ಗುಳ್ಳೆಗಳನ್ನು ಒರೆಸುವುದು ಅಥವಾ ಚುಚ್ಚುವುದು ತಪ್ಪು. ಇದರಿಂದ ಗಾಯಗಳು ಉಂಟಾಗಿ ಸೋಂಕು ಹೆಚ್ಚಾಗಬಹುದು. ರೋಗದ ಲಕ್ಷಣ ಕಂಡುಕೊಂಡ ಕೂಡಲೇ ಆ್ಯಂಟಿಬಯೋಟಿಕ್ ತೆಗೆದುಕೊಂಡರೆ ಶೀಘ್ರ ಗುಣಮುಖವಾಗಲಿದೆ. ಆರೋಗ್ಯ ಇಲಾಖೆ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಜಾಗೃತಿ ಸೂಚನೆಗಳನ್ನು ನೀಡಿದ್ದು, ಮಕ್ಕಳಲ್ಲಿ ಜ್ವರ ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ತಪಾಸಣೆಗೊಳಪಡಿಸಲು ಸೂಚಿಸಿದೆ. ಸಾರ್ವಜನಿಕರು ಭಯಪಡದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಾಮಾನ್ಯ ಸೋಂಕು:ಸುಮಾರು 40 ವರ್ಷಗಳ ಹಿಂದೆ ಸಿಡುಬು ಭಯಾನಕ ಕಾಯಿಲೆ ಎಂಬ ಭಾವನೆ ಇತ್ತು. ಸಿಡುಬು ಬಂದ ಕುಟುಂಬವನ್ನು ಸಮಾಜದಿಂದ ದೂರ ಇಡಲಾಗುತ್ತಿತ್ತು. ಇಂದಿಗೂ ಕೆಲವಡೆ ಈ ರೋಗವನ್ನು ಧಾರ್ಮಿಕ ಆಚರಣೆಗಳೊಂದಿಗೆ ಕೊಂಡೊಯ್ಯುವ ಮೂಢನಂಬಿಕೆಗಳು ಕಂಡುಬರುತ್ತಿವೆ. ಆದರೆ, ವೈದ್ಯಕೀಯ ವಿಜ್ಞಾನ ಸ್ಪಷ್ಟಪಡಿಸುವಂತೆ ಇದು ಸಾಮಾನ್ಯ ಸೋಂಕು ಆಗಿದ್ದು, ಸರಿಯಾದ ಜಾಗೃತೆಯಿಂದ ಸುಲಭವಾಗಿ ನಿಯಂತ್ರಿಸಬಹುದಾದ ರೋಗವಾಗಿದೆ.

ಸಿಡುಬಿನ ಬಗ್ಗೆ ಮೂಢನಂಬಿಕೆ ಆಚರಣೆ ಮಾಡಬಾರದು. ಅದು ಕಂಡುಬಂದ ಕೂಡಲೇ ಸ್ನಾನ ನಿಲ್ಲಿಸುವುದು ತಪ್ಪು. ಸ್ವಚ್ಛತೆ ಕಾಪಾಡಿದಷ್ಟೂ ಸೋಂಕು ಕಡಿಮೆಯಾಗುತ್ತದೆ. ಸಿಡುಬು ಮಾರಣಾಂತಿಕ ಕಾಯಿಲೆಯಲ್ಲ. ರೋಗದ ಉಲ್ಬಣ ನಿಯಂತ್ರಿಸಲು ಸಾರ್ವಜನಿಕ ಸಹಕಾರ, ವೈಯಕ್ತಿಕ ಸ್ವಚ್ಛತೆ ಮತ್ತು ವೈದ್ಯಕೀಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಂಕೋಲಾ ತಾಲೂಕು ವೈದ್ಯಾಧಿಕಾರಿಗಳು ಡಾ. ಜಗದೀಶ ನಾಯ್ಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳು ಎಲ್ಲಿಯೂ ಯಾರ ಮೇಲೆ ದಾಳಿ ಮಾಡಿಲ್ಲ: ಸುಧೀರ ಸಿಂಹ ಘೋರ್ಪಡೆ
ಮಾನವ ಧರ್ಮದ ಉನ್ನತಿಗೆ ಶ್ರಮಿಸಿದ ರೇಣುಕಾಚಾರ್ಯರು