ಹಳ್ಳಿಗಳಲ್ಲೂ ಹೊಸ ವಿದ್ಯುತ್‌ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ

KannadaprabhaNewsNetwork |  
Published : Jun 28, 2025, 01:33 AM ISTUpdated : Jun 28, 2025, 07:13 AM IST
ಸ್ಮಾರ್ಟ್‌ ಮೀಟರ್‌ | Kannada Prabha

ಸಾರಾಂಶ

ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ 2025ರ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿ ಬೆಸ್ಕಾಂ ಆದೇಶ ಹೊರಡಿಸಿದೆ.

  ಬೆಂಗಳೂರು :  ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ 2025ರ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿ ಬೆಸ್ಕಾಂ ಆದೇಶ ಹೊರಡಿಸಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಹಾಗೂ ತಾತ್ಕಾಲಿಕ ಸಂಪರ್ಕಗಳಿಗೆ ಫೆ.15 ರಿಂದಲೇ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲಾಗಿತ್ತು. ಆದರೆ, ಸ್ಮಾರ್ಟ್‌ ಮೀಟರ್‌ ತಂತ್ರಾಂಶದ ಜತೆ ನಾನ್‌- ಆರ್‌ಎಪಿಡಿಆರ್‌ಪಿ ಪ್ರದೇಶದ (ಗ್ರಾಮೀಣ ಪ್ರದೇಶ) ತಂತ್ರಾಂಶವು ಸಂಯೋಜನೆಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಸ್ಮಾರ್ಟ್‌ ಮೀಟರ್‌ ಪಡೆಯಲು ಒತ್ತಾಯಿಸಬಾರದು ಎಂದು ಮಾ.3 ರಂದು ಬೆಸ್ಕಾಂ ಪ್ರತ್ಯೇಕ ಆದೇಶ ಮಾಡಿತ್ತು.

ಇದೀಗ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲೂ ಹೊಸ ಹಾಗೂ ತಾತ್ಕಾಲಿಕ ಸಂಪರ್ಕಕ್ಕೆ ಜು.1 ರಿಂದ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲಾಗಿದೆ. ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಗ್ರಾಹಕರು ಅರ್ಜಿ ಸಲ್ಲಿಸಿ ಬೆಸ್ಕಾಂನ ನೋಂದಾಯಿತ ಮಳಿಗೆಗಳಿಂದ ಸ್ಮಾರ್ಟ್ ಮೀಟರ್‌ಗಳನ್ನು ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬಹುದು.

ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು 2024ರ ಮಾರ್ಚ್ 06 ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ, ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಏನಿದು ನಾನ್‌-ಆರ್‌ಎಡಿಪಿಆರ್‌ಪಿ?:ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಕೇಂದ್ರದ ಯೋಜನೆಯಡಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಆರ್‌ಎಡಿಪಿಆರ್‌ಪಿ ಅಡಿ ನಗರ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರ ಸೇರಿ 25 ನಗರ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಈ ಪ್ರದೇಶಗಳ ವಿದ್ಯುತ್‌ ಸರಬರಾಜು, ನಿರ್ವಹಣೆ ಹಾಗೂ ಬಿಲ್ಲಿಂಗ್‌ಗೆ ಪ್ರತ್ಯೇಕ ಸಾಫ್ಟ್‌ವೇರ್‌ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ನಗರ, ಪಟ್ಟಣ ಪ್ರದೇಶ ಅಲ್ಲದ ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಭಾಗವನ್ನು ನಾನ್‌-ಆರ್‌ಎಡಿಪಿಆರ್‌ಪಿ ಪ್ರದೇಶ ಎಂದು ಪರಿಗಣಿಸಲಾಗುತ್ತದೆ.

ಇದೀಗ ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲೂ ಹೊಸ ಹಾಗೂ ತಾತ್ಕಾಲಿಕ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲಾಗಿದೆ.

- ಬೆಸ್ಕಾಂ ವ್ಯಾಪ್ತಿಯಲ್ಲಿ ಫೆ.15 ರಿಂದಲೇ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಆಗಿತ್ತು

- ಆದರೆ ತಂತ್ರಾಂಶ ಸಮಸ್ಯೆ ಕಾರಣ ಮಾ.3ಕ್ಕೆ ಕಡ್ಡಾಯ ಹಿಂಪಡೆಯಲಾಗಿತ್ತು

- ಗ್ರಾಮೀಣ ಹಾಗೂ ಸಣ್ಣ ಪಟ್ಟಣದಲ್ಲಿ ಕಡ್ಡಾಯಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು

- ಇದೀಗ ಹೊಸ ಆದೇಶ: ಜುಲೈ1ರಿಂದ ಪುನಃ ಸ್ಮಾರ್ಟ್‌ ಮೀಟರ್‌ ಕಡ್ಡಾಯ

- ಬೆಸ್ಕಾಂ ನೋಂದಾಯಿತ ಮಳಿಗೆಯಲ್ಲಿ ಸ್ಮಾರ್ಟ್ ಮೀಟರ್‌ ಖರೀದಿಸಬಹುದು

PREV
Read more Articles on

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ