ಶಿವಾನಂದ ಗೊಂಬಿ
ಹುಬ್ಬಳ್ಳಿ:ಕಳೆದ ಏಳು ವರ್ಷದಿಂದ ಅಸ್ತಿತ್ವದಲ್ಲಿದ್ದ ಸ್ಮಾರ್ಟ್‌ಸಿಟಿ ಯೋಜನೆ ಈ ಮಾರ್ಚ್‌ನಲ್ಲಿ ಮುಕ್ತಾಯವಾಗಲಿದೆ. ಈ ವರೆಗೆ 61 ಕಾಮಗಾರಿ ಪೂರ್ಣಗೊಳಿಸಿರುವ ಸ್ಮಾರ್ಟ್‌ಸಿಟಿ, ಇನ್ನೆರಡು ಕಾಮಗಾರಿಗಳನ್ನಷ್ಟೇ ಬಾಕಿಯುಳಿಸಿಕೊಂಡಿದೆ. ಆದರೆ, ಆಗಿರುವ ಕಾಮಗಾರಿಗಳು ಸಾಕಷ್ಟು ಲೋಪದೋಷಗಳಿಂದಲೇ ಕೂಡಿವೆ. ಸರಿಯಾಗಿ ಕಾಮಗಾರಿ ಆಗಲಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.
2018ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 930 ಕೋಟಿ ವೆಚ್ಚದ ಯೋಜನೆಗಳನ್ನು ಕೈಗೊಳ್ಳಲಾಗಿದೆ. 48 ಕಿಮೀ ರಸ್ತೆ, ಚಿಟಗುಪ್ಪಿ ಆಸ್ಪತ್ರೆ, ಸ್ಮಾರ್ಟ್‌ಸ್ಕೂಲ್, ಜನತಾ ಬಜಾರ್, ಬೆಂಗೇರಿ ಮಾರುಕಟ್ಟೆ, ಇಂದಿರಾಗ್ಲಾಸ್ ಹೌಸ್, ಉಣಕಲ್ ಕೆರೆ ಅಭಿವೃದ್ಧಿ, ತೋಳನಕೇರಿ ಅಭಿವೃದ್ಧಿ, ಗ್ರೀನ್ ಕಾರಿಡಾರ್, ಹಳೇ ಬಸ್ ನಿಲ್ದಾಣ ಸೇರಿದಂತೆ ಬರೋಬ್ಬರಿ 63 ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು. ಅದರಲ್ಲಿ 61 ಪೂರ್ಣಗೊಳಿಸಲಾಗಿದೆ.ಲೋಹಿಯಾ ನಗರದಲ್ಲಿನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಸಾಯಿಮಂದಿರದ ಬಳಿ ನಿರ್ಮಿಸುತ್ತಿರುವ ಮಲ್ಟಿ ಲೇವಲ್ ಕಾರ್ ಪಾರ್ಕಿಂಗ್ ಈ ಎರಡು ಕಾಮಗಾರಿಗಳು ಮಾತ್ರ ಬಾಕಿಯುಳಿದಿವೆ. ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕಾಮಗಾರಿ ಭರದಿಂದ ಸಾಗಿದೆ. ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆಯಂತೆ. ಮಾರ್ಚ್‌ನಲ್ಲಿ ಅದನ್ನು ಉದ್ಘಾಟಿಸಿ ಹಸ್ತಾಂತರ ಮಾಡಲಾಗುತ್ತದೆ.
ಆಗದ ಕಾಮಗಾರಿ:ಇನ್ನು ಮಲ್ಟಿಲೇವಲ್ ಕಾರ್ ಪಾರ್ಕಿಂಗ್ ಕಾಮಗಾರಿ ಮಾತ್ರ ಪೂರ್ಣಗೊಳ್ಳುವುದಿಲ್ಲ. ಹಾಗೆ ನೋಡಿದರೆ 2019ರಲ್ಲಿ ಪ್ರಾರಂಭವಾದ ಈ ಯೋಜನೆ ಎರಡು ವರ್ಷದ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಇದು ₹ 40 ಕೋಟಿಯ ಯೋಜನೆ. ಅದರಲ್ಲಿ ₹ 10 ಕೋಟಿ ಸ್ಮಾರ್ಟ್‌ಸಿಟಿ ಯೋಜನೆಯ ದುಡ್ಡಾಗಿದ್ದರೆ, ಇನ್ನುಳಿದ ₹ 30 ಕೋಟಿ ಖಾಸಗಿ ಏಜೆನ್ಸಿಯೇ ಭರಿಸಬೇಕು. ಸ್ಮಾರ್ಟ್‌ಸಿಟಿ ಯೋಜನೆಯಿಂದ ಈ ವರೆಗೆ ಬರೀ ₹ 1.80 ಕೋಟಿ ನೀಡಲಾಗಿದೆ. ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲವಾದ್ದರಿಂದ ಉಳಿದ ಹಣ ಬಿಡುಗಡೆಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಡುವೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ₹ 2 ಕೋಟಿ ದಂಡವನ್ನು ಸಹ ಹಾಕಲಾಗಿದೆ. ಆ ಕಾಮಗಾರಿ ಮಾರ್ಚ್‌ನೊಳಗೆ ಪೂರ್ಣವಾಗುವುದಿಲ್ಲ. ಮುಂದೆ ಏನು ಮಾಡಬೇಕು ಎಂಬುದನ್ನು ಸ್ಮಾರ್ಟ್‌ಸಿಟಿ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧರಿಸಲಾಗುವುದು ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.
ಒಳ್ಳೆಯ ಕೆಲಸಗಳು:ಚಿಟಗುಪ್ಪಿ ಆಸ್ಪತ್ರೆಗೆ ಹೈಟೆಕ್ ಟಚ್ ನೀಡಿರುವುದು, ಮೇದಾರ ಓಣಿಯಲ್ಲಿನ ಆಸ್ಪತ್ರೆ ನಿರ್ಮಾಣ, ಬೆಂಗೇರಿ ಸಂತೆ, ಹಳೇ ಬಸ್ ನಿಲ್ದಾಣವನ್ನು ಹೈಟೆಕ್ ಮಾಡಿರುವುದು ಈ ಕೆಲಸಗಳು ಉತ್ತಮವೆನಿಸುತ್ತವೆ. ಸ್ಮಾರ್ಟ್‌ಸಿಟಿ ಯೋಜನೆಯ ಬಗ್ಗೆ ಖುಷಿ ನೀಡುತ್ತವೆ.
ಸಮರ್ಪಕವಾಗಿಲ್ಲ:ಉಳಿದ ಬಹುತೇಕ ಕಾಮಗಾರಿಗಳು ಸಾಕಷ್ಟು ಲೋಪದೋಷಗಳಿಂದಲೇ ಕೂಡಿವೆ. ಉಪಯೋಗಕ್ಕೆ ಬಾರದಂತಾಗಿವೆ. ಉದಾಹರಣೆಗೆ ಇಂದಿರಾ ಗ್ಲಾಸ್ ಹೌಸ್ ನಲ್ಲಿ ಕೈಗೊಂಡಿರುವ ಕಾಮಗಾರಿ ಈಗಲೇ ಹಾಳಾಗಿವೆ. ಆಟಿಕೆ ರೈಲು ಒಂದೇ ಒಂದೇ ದಿನ ಓಡಲಿಲ್ಲ. ನಗರದ ವಿವಿಧೆಡೆ ಅಳವಡಿಸಿರುವ ಇ- ಟಾಯ್ಲೆಟ್‌ಗಳು ನಿರುಪಯುಕ್ತವಾಗಿವೆ. ಉಣಕಲ್ ಕೆರೆಗೆ ಕೊಳಚೆ ನೀರು ಬರುವುದು ತಪ್ಪುತ್ತಿಲ್ಲ. ದೇಶದ ಏಕೈಕ ಗ್ರೀನ್ ಕಾರಿಡಾರ್ ಇದೀಗ ಗಬ್ಬೆದ್ದು ನಾರುತ್ತಿದೆ. ಯಾವ ಕಾಮಗಾರಿಯೂ ವೈಜ್ಞಾನಿಕವಾಗಿ ನಡೆದೇ ಇಲ್ಲ ಎಂಬ ಆರೋಪ ಜನಪ್ರತಿನಿಧಿಗಳು ಹಾಗೂ ಪ್ರಜ್ಞಾವಂತರದ್ದು. ಈ ಹಿನ್ನೆಲೆಯಲ್ಲಿ ಈರೇಶ ಅಂಚಟಗೇರಿ ಮೇಯರ್ ಇದ್ದಾಗ ಈ ಬಗ್ಗೆ ಹಲವಾರು ಬಾರಿ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದುಂಟು. ಇನ್ನು ಲೋಕಾಯುಕ್ತದ ವರೆಗೆ ದೂರು ಹೋಗಿರುವುದುಂಟು.
ಹಲವು ಲೋಪದೋಷಗಳಿದ್ದರೂ ಮತ್ತೆ ಕೆಲವು ಕೆಲಸಗಳು ಉತ್ತಮವಾಗಿರುವುದು ಮೆಚ್ಚುಗೆಗೂ ಪಾತ್ರವಾಗಿದ್ದರೆ, ಹತ್ತು ಹಲವು ಯೋಜನೆಗಳು ಟೀಕೆಗೊಳಗಾಗಿರುವುದು ಸತ್ಯ. ಸ್ಮಾರ್ಟ್‌ಸಿಟಿ ಯೋಜನೆಯೂ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. 63 ಕಾಮಗಾರಿ ಕೈಗೆತ್ತಿಕೊಂಡಿದ್ದು 61 ಪೂರ್ಣಗೊಳಿಸಲಾಗಿದೆ. ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ. ಆದರೆ, ಮಲ್ಟಿ ಕಾರ್ ಪಾರ್ಕಿಂಗ್ ಯೋಜನೆ ಮಾತ್ರ ಪೂರ್ಣಗೊಳ್ಳುವುದಿಲ್ಲ. ಆ ಬಗ್ಗೆ ಬೋರ್ಡ್ ಮಿಟಿಂಗ್‌ನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಘಾಳಿ ಹೇಳಿದರು.ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬಸ್ ನಿಲ್ದಾಣ, ಚಿಟಗುಪ್ಪಿ ಆಸ್ಪತ್ರೆ ಸೇರಿದಂತೆ ಕೆಲವು ಕಾಮಗಾರಿಗಳು ಗುಣಮಟ್ಟದ್ದಾಗಿವೆ. ಗ್ರೀನ್ ಕಾರಿಡಾರ್ ಈಗಲೇ ಗಬ್ಬೆದ್ದು ನಾರುತ್ತಿದೆ. ಇದೇ ರೀತಿ ಬಹುತೇಕ ಕಾಮಗಾರಿಗಳು ಈಗಲೇ ಹಾಳಾಗಿ ಹಳ್ಳ ಹಿಡಿದಿವೆ. ನಿರುಪಯುಕ್ತವೆನಿಸಿವೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಎಸ್. ಕೆ., ಹೇಳಿದರು.