ದೇಶದ ಅಭಿವೃದ್ಧಿಗೆ ಸುಗಮ, ಸಂಘಟಿತ ರೈಲು ಸಾರಿಗೆ ಪ್ರಮುಖ

KannadaprabhaNewsNetwork | Published : May 23, 2025 12:29 AM
ಭಾರತ ಸರ್ಕಾರವು ರೈಲು ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಬದ್ಧವಾಗಿದೆ
Follow Us

ಧಾರವಾಡ: ದೇಶದ ನಿರಂತರ ಅಭಿವೃದ್ಧಿಯಲ್ಲಿ ಸುಗಮ ಮತ್ತು ಸಂಘಟಿತ ರೈಲು ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ರೈಲ್ವೆ ದೇಶದ ಪ್ರಮುಖ ಸಾರಿಗೆ ಸಾಧನವಾಗಿರುವ ಜತೆಗೆ, ದೇಶದ ಆರ್ಥಿಕ ಮತ್ತು ಒಟ್ಟಾರೆ ಅಭಿವೃದ್ಧಿಯ ಬೆನ್ನೆಲುಬು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಧಾರವಾಡ, ಮುನಿರಾಬಾದ್, ಬಾಗಲಕೋಟೆ, ಗದಗ, ಗೋಕಾಕ್ ರಸ್ತೆ ಸೇರಿದಂತೆ ದೇಶದಲ್ಲಿ 103 ಅಮೃತ್ ನಿಲ್ದಾಣಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ಈ ನಿಮಿತ್ತ ಧಾರವಾಡದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು, 2023-24ನೇ ಸಾಲಿನಲ್ಲಿ ಅಮೃತ್ ರೈಲು ನಿಲ್ದಾಣ ಯೋಜನೆಯಡಿ 1000ಕ್ಕೂ ಹೆಚ್ಚು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಸಂತೋಷದ ವಿಷಯ. ಭಾರತ ಸರ್ಕಾರವು ರೈಲು ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಬದ್ಧವಾಗಿದೆ ಎಂದರು.

ಪ್ರಧಾನಿ ಮೋದಿ ನಮ್ಮ ರೈಲ್ವೆ ನಿಲ್ದಾಣಗಳು, ರೈಲುಗಳು, ಹಳಿಗಳು ಮತ್ತು ಸಿಗ್ನಲಿಂಗ್ ಅನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸಲು ಬಯಸುತ್ತಾರೆ. ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಾ, ದೇಶಾದ್ಯಂತ ರೈಲ್ವೆ ಯೋಜನೆಗಳು ಬಹಳ ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ. ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ರೈಲು ಸೇವೆಗಳನ್ನು ಒದಗಿಸಲು, ರೈಲು ವ್ಯವಸ್ಥೆಗಳು, ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯಗಳನ್ನು ಆಧುನೀಕರಿಸಲು ಮತ್ತು ಅತ್ಯುತ್ತಮವಾಗಿಸಿ, ಮಾಲಿನ್ಯ ಮುಕ್ತ ರೈಲು ಮತ್ತು ಸರಕು ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಕರ್ನಾಟಕದಲ್ಲಿ ಪ್ರಸ್ತುತ ₹50,792 ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. 2025-26 ಸಾಲಿನ ಬಜೆಟ್ ನಲ್ಲಿ ರಾಜ್ಯಕ್ಕೆ ₹7,564 ಕೋಟಿ ಹಂಚಿಕೆಯಾಗಿದ್ದು, 61 ನಿಲ್ದಾಣಗಳನ್ನು ವಿಶ್ವದರ್ಜೆಯ ರೈಲು ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದ ಅವರು, ಪ್ರಧಾನ ಮಂತ್ರಿ ಮಾರ್ಗದರ್ಶನದಲ್ಲಿ ಪ್ರಯಾಣಿಕರಿಗೆ ಉತ್ತಮ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲು ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ರೈಲ್ವೆ ಸಚಿವಾಲಯವು ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣದ ಕೆಲಸ ಮಾಡುತ್ತಿದೆ. ಇದು ಈ ಪ್ರದೇಶದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆ ಉತ್ತೇಜಿಸುತ್ತದೆ ಎಂದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಮಹಾಪೌರ ರಾಮಪ್ಪ ಬಡಿಗೇರ ರೈಲ್ವೆ ಇಲಾಖೆ ಸಾಧನೆಗಳ ಕುರಿತು ಮಾತನಾಡಿದರು. ಮಾಜಿ ಶಾಸಕ ಅಮೃತ ದೇಸಾಯಿ, ರೈಲ್ವೆ ಐಜಿಪಿ ಆರ್.ಎಸ್.ಪಿ. ಸಿಂಗ್ ಇದ್ದರು. ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಮುಕುಲ ಸರಣ ಮಾತುರ ಸ್ವಾಗತಿಸಿದರು. ರೈಲ್ವೆ ಅಧಿಕಾರಿ ಅಂಜಿನಿ ಎಚ್. ಕಾರ್ಯಕ್ರಮ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು.

ಪ್ರಮುಖ ಪಾತ್ರ: ಸ್ವಾತಂತ್ರ್ಯದ ನಂತರ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ. ಭಾರತೀಯ ರೈಲ್ವೆ ಕೂಡ ವೇಗವಾಗಿ ಅಭಿವೃದ್ಧಿ ಹೊಂದಿದ್ದು, ದೇಶದ ಅಭಿವೃದ್ಧಿ ಮತ್ತು ಆರ್ಥಿಕತೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರೈಲ್ವೆ ಅಭಿವೃದ್ಧಿಯಲ್ಲಿ ದೂರದೃಷ್ಟಿಯ ನಾಯಕತ್ವ ವಹಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗಳು ಮತ್ತು ರೈಲ್ವೆ ಸಚಿವರಿಗೆ ರಾಜ್ಯಪಾಲರು ಕೃತಜ್ಞತೆ ಸಲ್ಲಿಸಿದರು.ಧಾರವಾಡದಲ್ಲಿ ಅಮೃತ ಸ್ಟೇಷನ್ ಉದ್ಘಾಟನೆಯಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಬಾಗಿಯಾಗಿ ಸ್ಥಳೀಯ ಕಾರ್ಯಕ್ರಮ ಉದ್ಘಾಟಿಸಿದರು. ವಿಪ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಇದ್ದಾರೆ.