ಸ್ನೇಕ್‌ ಸುನೀಲ್‌ ಆದ ಉಪ ವಲಯ ಅರಣ್ಯಾಧಿಕಾರಿ

KannadaprabhaNewsNetwork |  
Published : Mar 14, 2025, 12:33 AM IST
ಮುಂಡಗೋಡ: ಊರು ಉಸಾಬರಿ ನಮಗೇಕೆ ಎಂದು ಜಾರಿಕೊಳ್ಳಲು ಪ್ರಯತ್ನಪಡುವ ಈ ಕಾಲದಲ್ಲಿಯು ಕೂಡ ಯಾವುದೇ ಫಲಾಪೇಕ್ಷೆಯಿಲ್ಲದೆ ಹಗಲು ರಾತ್ರಿ ಎನ್ನದೆ ಜೀವದ ಹಂಗು ತೊರೆದು ಹಾವು ಹಿಡಿದು ಜನರಿಗೆ ರಕ್ಷಣೆ ನೀಡುವ ಮೂಲಕ ಹಾವಿನ ರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಉಪ ವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಅವರೀಗ ಸ್ನೇಕ್ ಕಿಂಗ್ ಎಂಬ ಬಿರುದು ಪಡೆದು ಮನೆ ಮಾತಾಗಿದ್ದಾರೆ. | Kannada Prabha

ಸಾರಾಂಶ

ಸ್ನೇಕ್‌ ಸುನೀಲ್‌ ಆದ ಉಪ ವಲಯ ಅರಣ್ಯಾಧಿಕಾರಿ

ಸಂತೋಷ ದೈವಜ್ಞ

ಮುಂಡಗೋಡ: ಯಾವುದೇ ಫಲಾಪೇಕ್ಷೆಯಿಲ್ಲದೇ ಹಗಲು-ರಾತ್ರಿ ಎನ್ನದೇ ಜೀವದ ಹಂಗು ತೊರೆದು ಹಾವು ಹಿಡಿದು ಜನರಿಗೆ ರಕ್ಷಣೆ ನೀಡುವ ಮೂಲಕ ಉಪ ವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಮನೆ ಮಾತಾಗಿದ್ದಾರೆ.

ಹಾವಿನ ರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ಇವರು ನಿರತರಾಗಿದ್ದಾರೆ. ಸ್ನೇಕ್ ಕಿಂಗ್ ಎಂಬ ಬಿರುದನ್ನು ಜನತೆ ನೀಡಿದ್ದಾರೆ.

ಯಾವುದೇ ಸಮಯವಾಗಲಿ, ಹಾವು ಬಂದಿದೆ ಎಂದು ಯಾರಾದರೂ ಕರೆ ಮಾಡಿದರೆ ಸಾಕು ಕೆಲವೇ ಕ್ಷಣಗಳಲ್ಲಿ ಪ್ರತ್ಯಕ್ಷವಾಗುವ ಸುನೀಲ ಹೊನ್ನಾವರ, ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುವ ಕೆಲಸ ಮಾಡುತ್ತಾರೆ.

ನಾಗರಹಾವು, ಹೆಬ್ಬಾವು, ಕಾಳಿಂಗ ಸರ್ಪ, ಕೊಳಕುಮಂಡಲ, ಕೆರೆಹಾವು, ಹಸಿರು ಹಾವು ಸೇರಿದಂತೆ ವಿವಿಧ ಜಾತಿಯ ಸುಮಾರು 2000ಕ್ಕೂ ಅಧಿಕ ವಿಷಕಾರಿ ಹಾವು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

ಮಧ್ಯರಾತ್ರಿ ಕರೆದರೂ ಬೈಕ್‌ನಲ್ಲಿ ಹೊರಡುತ್ತಾರೆ. ಹಾವು ಎಷ್ಟೇ ವಿಷಕಾರಿಯಿದ್ದರೂ ಯಾವುದೇ ರೀತಿ ಹಿಂದೇಟು ಹಾಕದೇ ಅದನ್ನು ಹಿಡಿಯುತ್ತಾರೆ. ಬಚ್ಚಲು ಮನೆಯ ಸಂದಿ, ಹೆಂಚಿನ ಅಡಿಯಲ್ಲಿ ಅಡಗಿ ಕುಳಿತಿದ್ದರೂ ಹಾವು ಹಿಡಿಯುತ್ತಾರೆ. ಮನೆಗೆ ಹಾವು ಬಂದಿದೆ ಎಂದು ದಿನದ 24 ಗಂಟೆಯ ಯಾವುದೇ ಸಮಯದಲ್ಲಿ ಹೇಳಿದರೂ ತಕ್ಷಣ ಧಾವಿಸುತ್ತಾರೆ. ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಸನ್ನಿವೇಶಗಳನ್ನು ನೋಡಿದರೆ ಒಂದು ಕ್ಷಣ ಮೈ ಜುಮ್ಮೆನ್ನುತ್ತದೆ.

ಇವರು ಹಾವು ಹಿಡಿಯುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈಗ ಸ್ನೇಕ್ ಕಿಂಗ್ ಎಂಬ ಬಿರುದು ಪಡೆದುಕೊಂಡಿದ್ದಾರೆ. ಮೇಲಧಿಕಾರಿಗಳಿಂದ ಸಾಕಷ್ಟು ಪ್ರಶಂಸನಾ ಪತ್ರ ಪಡೆದಿದ್ದಾರೆ.

ಹಾವನ್ನು ಹೊರಹಾಕಲು ಜನರು ಬಳಸುವ ಕೊನೆಯ ಅಸ್ತ್ರವೇ ಅದನ್ನು ಕೊಲ್ಲುವುದು. ಹಾಗಾಗಿ ಇದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದಲೇ ಅವುಗಳ ರಕ್ಷಣೆ ಕಾರ್ಯ ಆಯ್ಕೆ ಮಾಡಿಕೊಂಡಿರುವೆ. ಹಾವುಗಳನ್ನು ಹೊಡೆಯುವುದು ಸರಿಯಲ್ಲ. ಯಾವುದೇ ಸಮಯವಾಗಲಿ ಅಗತ್ಯವಿದ್ದಾಗ ೯೪೪೯೫೬೮೧೭೮ ಮೊಬೈಲ್ ನಂಬರ್‌ಗೆ ಕರೆ ಮಾಡಬಹುದು ಎನ್ನುತ್ತಾರೆ ಅರಣ್ಯಾಧಿಕಾರಿ ಸುನೀಲ ಹೊನ್ನಾವರ.

ಸಿಬ್ಬಂದಿಗೆ ತರಬೇತಿ:

ತಾವು ಇಲ್ಲಿಂದ ವರ್ಗಾವಣೆಯಾಗಿ ಬೇರೆ ಕಡೆಗೆ ಹೋದರೂ ಇನ್ನುಳಿದವರು ಕೂಡ ಹಾವು ಹಿಡಿದು ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಅರಣ್ಯ ರಕ್ಷಕರಿಗೂ ಈ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ:

೨೦೦೧ರಲ್ಲಿ ಶಿರಸಿ ತಾಲೂಕು ಹುಲೇಕಲ್ ವಲಯ ಅರಣ್ಯ ರಕ್ಷಕರಾಗಿ ಸೇವೆಗೆ ಸೇರಿದರು. ೧೨ ವರ್ಷಗಳ ಬಳಿಕ ಉಪ ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಹೊಂದಿದರು. ಬನವಾಸಿಯಲ್ಲಿ ಸ್ಟ್ರೈಕಿಂಗ್ ಫೋರ್ಸ್‌ನಲ್ಲಿ ೧ ವರ್ಷ ಸೇವೆ, ದಾಸನಕೊಪ್ಪದಲ್ಲಿ ೮ ವರ್ಷ ಸೇವೆ ಸಲ್ಲಿಸಿದರು. ಕಳೆದ ೧ ವರ್ಷದಿಂದ ಮುಂಡಗೋಡ ತಾಲೂಕಿನ ಪಾಳಾ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅರಣ್ಯದ ಜತೆ ಹಾವು, ಪ್ರಾಣಿಗಳನ್ನು ರಕ್ಷಿಸುವ ಕೆಲಸ ತೃಪ್ತಿ ತಂದಿದೆ. ಈ ಅವಕಾಶ ಸಿಗಲು ನಾವು ಪುಣ್ಯ ಮಾಡಿದ್ದೇವೆ. ಸಮಾಜಕ್ಕಾಗಿ ಮಾಡಿದ ನಿಸ್ವಾರ್ಥ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ ಎನ್ನುತ್ತಾರೆ ಉಪ ವಲಯ ಅರಣ್ಯಧಿಕಾರಿ ಸುನೀಲ ಹೊನ್ನಾವರ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ