ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಸಲಗನ ಕಾಟ

KannadaprabhaNewsNetwork | Published : Mar 24, 2025 12:35 AM

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಮೈಸೂರು-ಊಟಿ ಹೆದ್ದಾರಿ ಹಾದು ಹೋಗುವ ಬಂಡೀಪುರ ವಲಯದ ಅಲ್ಲಲ್ಲಿ ರಾತ್ರಿ ಸಮಯದಲ್ಲಿ ಸಲಗವೊಂದು ವಾಹನಗಳನ್ನು ಅಡ್ಡಗಟ್ಟುತ್ತಿದ್ದು, ಇದು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಆತಂಕ ತಂದೊಡ್ಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಮೈಸೂರು-ಊಟಿ ಹೆದ್ದಾರಿ ಹಾದು ಹೋಗುವ ಬಂಡೀಪುರ ವಲಯದ ಅಲ್ಲಲ್ಲಿ ರಾತ್ರಿ ಸಮಯದಲ್ಲಿ ಸಲಗವೊಂದು ವಾಹನಗಳನ್ನು ಅಡ್ಡಗಟ್ಟುತ್ತಿದ್ದು, ಇದು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಆತಂಕ ತಂದೊಡ್ಡಿದೆ.

ಬಂಡೀಪುರ ಅರಣ್ಯ ಇಲಾಖೆ ಹೆದ್ದಾರಿ ರಾತ್ರಿ ಸಲಗನ ಕಾಟಕ್ಕೆ ಬ್ರೇಕ್‌ ಹಾಕುವುದೇ! :

ರಾತ್ರಿ ೭ ರ ಬಳಿಕ ಹೆದ್ದಾರಿಗೆ ಬರುವ ಈ ಸಲಗ ತರಕಾರಿ ವಾಹನಗಳ ಗುರಿಯಾಗಿಟ್ಟುಕೊಂಡು ಮತ್ತು ಕಾರಲ್ಲಿ ಬರುವಾಗ ಈ ಸಲಗ ಕಾರಿನ ಸಮೀಪವೇ ಬರುತ್ತದೆ. ಆ ವೇಳೆ ಕಾರಲ್ಲಿರುವ ಮಹಿಳೆಯರು, ಮಕ್ಕಳು ಗಾಬರಿಗೊಳ್ಳುತ್ತಿದ್ದಾರೆ. ಕಳೆದ ರಾತ್ರಿ (ಶನಿವಾರ) ಸುಮಾರು ಸಂಜೆ ೭.೧೫ ರ ಸಮಯದಲ್ಲಿ ಸಲಗ ಎಂದಿನಂತೆ ಹೆದ್ದಾರಿಯಲ್ಲಿ ನಿಂತಿದೆ. ಚೆಕ್‌ ಪೋಸ್ಟ್‌ನಲ್ಲಿ ಸಿಬ್ಬಂದಿ ತಪಾಸಣೆ ಮಾಡಿದಂತೆ ಎಲ್ಲಾ ವಾಹನಗಳ ಬಳಿ ಬಂದು ನಿಂತಿದೆ. ಆ ಸಮಯದಲ್ಲಿ ಗಂಡ, ಹೆಂಡತಿ, ಚಿಕ್ಕ ಮಗು ಇದ್ದ ಕೇರಳ ಮೂಲದ ಕಾರಿನ ಬಳಿಗೆ ಸಲಗ ಬಂದಾಗ ಕಾರಿಲ್ಲಿದ್ದವರೆಲ್ಲ ಕಿರುಚಾಡಿ ಗಾಬರಿಗೊಂಡಿದ್ದಾರೆ ಎಂದು ಮೈಸೂರಿನ ಪ್ರವಾಸಿಗರೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಸಲಗ ರಾತ್ರಿ ಸಮಯದಲ್ಲಿ ಬಂಡೀಪುರ ವಲಯದ ಹೆದ್ದಾರಿಯಲ್ಲಿ ತೊಂದರೆ ಕೊಡುತ್ತಿದೆ. ಇದು ಬಂಡೀಪುರ ಅರಣ್ಯ ಇಲಾಖೆಗೆ ಗೊತ್ತಿದ್ದರೂ ರಾತ್ರಿ ೭ ರಿಂದ ರಾತ್ರಿ ೧೦ ರ ತನಕ ಗಸ್ತು ನಡೆಸಿ, ಸಲಗ ರಸ್ತೆ ಗೆ ಬಂದಾಗ ಸೈರನ್‌ ಹಾಕಿ ಓಡಿಸುವ ಕೆಲಸ ಮಾಡುತ್ತಿಲ್ಲ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ಸದ್ಯಕ್ಕೀಗ ರಾತ್ರಿ ವೇಳೆ ಹೆದ್ದಾರಿಯಲ್ಲಿ ನಿಲ್ಲುವ ಸಲಗ ವಾಹನಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ. ಆದರೆ ಯಾವುದೇ ಅನಾಹುತ ವಾಗಿಲ್ಲ. ಅನಾಹುತಕ್ಕೂ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳೋದು ಒಳಿತು.

---

ಬಂಡೀಪುರ ಅರಣ್ಯ ಇಲಾಖೆ ಹೆದ್ದಾರಿಯಲ್ಲಿ ರಾತ್ರಿ ಸಮಯದಲ್ಲಿ ವಾಹನಗಳ ತಪಾಸಣೆ ನಡೆಸುವ ಸಲಗಕ್ಕೆ ಬ್ರೇಕ್‌ ಹಾಕಲು ರಾತ್ರಿ ವಾಹನ ಗಸ್ತು ನಡೆಸಿ ಪ್ರವಾಸಿಗರು ವಾಹನಗಳಲ್ಲಿ ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಿ ಎಂಬ ಸಲಹೆ ಕೇಳಿ ಬಂದಿದೆ. ಸಂಜೆ ೭ ರ ಬಳಿಕ ಬಂಡೀಪುರ ವಲಯದ ಹೆದ್ದಾರಿಯ ಅಲ್ಲಲ್ಲಿ ಸಲಗ ಕಾಣಿಸಿಕೊಂಡು ತರಕಾರಿ ತಿನ್ನಲು ಪ್ರಯತ್ನಿಸುತ್ತಿದೆ. ಕಳೆದ ಹದಿನೈದು ದಿನಗಳಿಂದ ಇರಲಿಲ್ಲ. ಶುಕ್ರವಾರ ಹಾಗೂ ಶನಿವಾರ ರಾತ್ರಿ ಮತ್ತೆ ಹೆದ್ದಾರಿಯಲ್ಲಿ ನಿಲ್ಲುವುದು ಶುರು ಮಾಡಿದೆ. ಇಂದಿನಿಂದಲೇ ರಾತ್ರಿ ವಾಹನ ಗಸ್ತು ನಡೆಸಲು ಕ್ರಮ ವಹಿಸುವೆ.

-ಮಹದೇವ್‌, ಆರ್‌ಎಫ್‌ ಒ, ಬಂಡೀಪುರ

Share this article