ನಿರ್ಗತಿಕರು, ಅನಾಥರಿಗೆ ಆಸರೆಯಾದ ಸ್ನೇಹ ಸಂಜೀವಿನಿ!

KannadaprabhaNewsNetwork |  
Published : Oct 13, 2026, 02:15 AM IST
(12ಎನ್.ಆರ್.ಡಿ.4 ಶಿಥಲಗೊಂಡ ಕಟ್ಟದಲ್ಲಿ ನಿರ್ಗತಿಕರ ಬದಕುತ್ತಿದ್ದಾರೆ.)  | Kannada Prabha

ಸಾರಾಂಶ

ಪಟ್ಟಣದ ಯುವ ತಂಡವೊಂದು "ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಹಾಗೂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ " ಆರಂಭಿಸಿ ಆ ಮೂಲಕ ನಿರ್ಗತಿಕರು, ಅನಾಥರು, ಭಿಕ್ಷುಕರು, ವೃದ್ಧರ ಸೇವೆ ಮಾಡುವ ಮೂಲಕ ಇನ್ನುಳಿದ ಯುವಕರಿಗೆ ಮಾದರಿಯಾಗಿದೆ.

ನಿರಾಶ್ರಿತರಿಗಾಗಿ ಕೇಂದ್ರ ಆರಂಭಿಸಿ ಪಾಲನೆ, ಪೋಷಣೆ ಮಾಡುತ್ತಿರುವ ಯುವಕರ ತಂಡ

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಪಟ್ಟಣದ ಯುವ ತಂಡವೊಂದು "ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಹಾಗೂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ " ಆರಂಭಿಸಿ ಆ ಮೂಲಕ ನಿರ್ಗತಿಕರು, ಅನಾಥರು, ಭಿಕ್ಷುಕರು, ವೃದ್ಧರ ಸೇವೆ ಮಾಡುವ ಮೂಲಕ ಇನ್ನುಳಿದ ಯುವಕರಿಗೆ ಮಾದರಿಯಾಗಿದೆ.

ಬಿಕಾಂ ಪದವೀಧರ ಶಶಿಕುಮಾರ ಬೊಯಿಟೆ ನೇತೃತ್ವದಲ್ಲಿ 11 ಜನರ ತಂಡ 2019ರಲ್ಲಿ ಸ್ನೇಹ ಸಂಜೀವಿನಿ ಸಂಸ್ಥೆ ಆರಂಭಿಸುವ ಮೂಲಕ ಸಮಾಜ ಸೇವೆಗೆ ಮುಂದಾಗಿದೆ. ಬೀದಿಯಲ್ಲಿ ಬಿದ್ದ ಭಿಕ್ಷುಕರ, ಮಾನಸಿಕ ಅಸ್ವಸ್ಥರು, ನಿರಾಶ್ರಿತರ ಪೋಷಣೆಗಾಗಿ ದಿಟ್ಟ ಹೆಜ್ಜೆ ಇಟ್ಟರು. ಇದರ ಸಲುವಾಗಿ 2021-22ರಲ್ಲಿ ವೈಭವ ನಿರ್ಗತಿಕರ ವೃದ್ಧಾಶ್ರಮ ಕೇಂದ್ರ ಸ್ಥಾಪಿಸಿದರು. ಇದರಲ್ಲಿ ಆರಂಭದಲ್ಲಿ 10 ನಿರ್ಗತಿಕ ವೃದ್ಧರನ್ನು ಗುರುತಿಸಿ ಕೇಂದ್ರಕ್ಕೆ ಕರೆತಂದು ಅವರಿಗೆ ಮಧ್ಯಾಹ್ನ ಊಟ ನೀಡಿ ರಾತ್ರಿ ಅವರ ಮನೆಗೆ ಬಿಡುತ್ತಿದ್ದರು. ನಂತರ ಪುರಸಭೆಗೆ ಮನವಿ ಸಲ್ಲಿಸಿ ಬಾಬಾಸಾಹೇಬರ (ಭಾವೆ) ಅರಮನೆ ಕಟ್ಟಡ ಪಡೆದುಕೊಂಡರು. ಆಗ ಬೀದಿಯಲ್ಲಿ ದಿಕ್ಕಿಲ್ಲದೇ ಬಿದ್ದಿರುವ ನಿರ್ಗತಿಕರನ್ನು, ಮಾನಸಿಕ ಅಸ್ವಸ್ಥರನ್ನು ಗುರುತಿಸಿ ತಮ್ಮ ಯುವ ಪಡೆ ಮೂಲಕ ಅವರನ್ನು ತಮ್ಮ ಕೇಂದ್ರಕ್ಕೆ ಕರೆ ತಂದು ಸಂಪೂರ್ಣ ಪೋಷಣೆ ಮಾಡಲಾರಂಭಿಸಿದರು.

ದಿನೇ ದಿನೇ ಸಂಖ್ಯೆ ಹೆಚ್ಚಾಯಿತು. ಈಗ 33 ನಿರ್ಗತಿಕರಿದ್ದಾರೆ. ಇದರಲ್ಲಿ 21 ಪುರುಷರು,11 ಮಹಿಳೆಯರು ಸೇರಿದಂತೆ ವೃದ್ಧ, ಮಾನಸಿಕ ಅಸ್ವಸ್ಥರು ಸೇರಿದ್ದಾರೆ. ಮನೆಯಲ್ಲಿ ವೃದ್ಧ ತಂದೆ, ತಾಯಿಗಳನ್ನೇ ನೋಡಿಕೊಳ್ಳದ ಮಕ್ಕಳಿರುವಾಗ ಇದಕ್ಕೆ ಸವಾಲೊಡ್ಡುವ ರೀತಿ ಈ ಯುವಕರು ನಿರ್ಗತಿಕರನ್ನು ಪೋಷಣೆ ಮಾಡುತ್ತಿರುವುದು ಒಂದು ಮಾದರಿ ಕೆಲಸವಾಗಿದೆ.

33 ಜನ ನಿರ್ಗತಿಕರ ನಿರ್ವಹಣೆಗೆ ಒಂದು ತಿಂಗಳಿಗೆ ₹1 ಲಕ್ಷ ವೆಚ್ಚವಾಗುತ್ತಿದೆ. ಆದರೆ ಶೇ.50 ರಷ್ಟು ಹಣ ದಾನಿಗಳ ಮೂಲಕ ಸರಿದೂಗುತ್ತದೆ. ಉಳಿದ ಹಣವನ್ನು ಸದಸ್ಯರು ಕೂಡಿಕೊಂಡು ನಡೆಸುತ್ತಿದ್ದಾರೆ.

ಈ ಯುವಕರು ತಮ್ಮ ಉಪಜೀವನಕ್ಕೆ ಬೇರೆ ಉದ್ಯೋಗ ಅವಲಂಬಿಸಿದ್ದಾರೆ. ಅದರ ಹಣದಲ್ಲಿಯೇ ಒಂದಿಷ್ಟು ಹಣವನ್ನು ಇದಕ್ಕೆ ವಿನಿಯೋಗಿಸುತ್ತಾರೆ. ಕೆಲವರು ಸ್ವಯಂಪ್ರೇರಣೆಯಿಂದ ಧಾನ್ಯ, ಆಹಾರ, ಕಿರಾಣಿ ಸಾಮಗ್ರಿ ನೀಡುತ್ತಾರೆ. ಆದರೆ ನಿತ್ಯ ಕೇಂದ್ರ ನಿರ್ವಹಣೆ ಮಾಡುವುದು ಸರಳವಲ್ಲ. ಆದ್ದರಿಂದ ಯುವಕರಿಗೆ ಕೊಡುಗೈ ದಾನಿಗಳು ಕೈ ಜೋಡಿಸಬೇಕಾಗಿದೆ.ಸಹಾಯ ಮಾಡಬೇಕೆನ್ನುವವರು ಮೊ. 8884738017, ಕೆಜಿಬಿ ಬ್ಯಾಂಕ್ ಖಾತೆ 89144108806, ಐಎಫ್ಎಸ್ಸಿ ಕೋಡ್ 00062003 ಸಂಪರ್ಕಿಸಬಹುದಾಗಿದೆ.

ಬೀಳುತ್ತಿರುವ ಕಟ್ಟಡ

ಕಳೆದ ಐದು ವರ್ಷದಿಂದ ಪುರಸಭೆಯ ಭಾವೆ ಅರಮನೆ ಕಟ್ಟಡದಲ್ಲಿ ಈ ಕೇಂದ್ರವಿದೆ. ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಳೆ ಬಂದರೆ ಅವಾಂತರ ನಿಶ್ಚಿತ. ಮುಂಜಾಗ್ರತೆಯಾಗಿ ಸ್ನೇಹ ಸಂಜೀವಿನಿ ಸಂಸ್ಥೆಯು ತಹಶೀಲ್ದಾರ ಅವರಿಗೆ ಕಟ್ಟಡ ನೀಡುವಂತೆ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ ತಾತ್ಕಾಲಿಕವಾಗಿ ನೀರಾವರಿ ಕಾಲನಿಯಲ್ಲಿನ ನೀರಾವರಿ ಇಲಾಖೆಯ ಹಳೆಯ ವಸತಿ ಸಮುಚ್ಚಯ ನೀಡುವುದಾಗಿ ತಿಳಿಸಿದ್ದಾರೆ.ನಮ್ಮ ಶಕ್ತ್ಯಾನುಸಾರ 33 ಜನರನ್ನು ಪೋಷಣೆ ಮಾಡುತ್ತಿದ್ದೇವೆ. ಸರ್ಕಾರ, ಸಮಾಜ ಸಹಾಯ ನೀಡಿದರೆ ಇನ್ನೂ ಹೆಚ್ಚಿನ ನಿರ್ಗತಿಕರನ್ನು ಪೋಷಣೆ ಮಾಡಲು ಸಿದ್ಧರಿದ್ದೇವೆ ಎನ್ನುತ್ತಾರೆ ಸ್ನೇಹ ಸಂಜೀವಿನಿ ಸಂಸ್ಥೆ ಅಧ್ಯಕ್ಷ ಶಶಿಕುಮಾರ ಬೊಯಿಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕಾ ವಸಾಹತು ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ
ಪೌಷ್ಟಿಕ ಆಹಾರವೇ ಮನುಷ್ಯನ ಆರೋಗ್ಯಕ್ಕೆ ಮನೆ ಮದ್ದು; ಲಲಿತಾ