ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನಲ್ಲಿ ಇದೇ ಸೆ.22ರಿಂದ ಅ.7ರವರೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ಸ್ಪಂದಿಸಿ ಸಮರ್ಪಕ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪೂರ್ವಭಾವಿಯಾಗಿ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳ, ಗ್ರಾಮಲೆಕ್ಕಿಗರ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ 50,199 ಕುಟುಂಬಳಿವೆ. ಎಲ್ಲಾ ಕುಟುಂಬಗಳ ಮನೆಗಳಿಗೆ ಭೇಟಿಕೊಟ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು, ಮನೆ ಬಳಿ ಸಮೀಕ್ಷೆ ನಡೆಸಲು ಶಿಕ್ಷಕರು, ಸಿಬ್ಬಂದಿ ಬಂದಾಗ ಸಾರ್ವಜನಿಕರು ತಮ್ಮ ಕುಟುಂಬದ ಸಂಪೂರ್ಣ ವಿವರ ನೀಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಮೀಕ್ಷೆ ನಡೆಸುವುದಕ್ಕಾಗಿಯೇ 406 ಮಂದಿ ಶಿಕ್ಷಕರು,10 ಮಂದಿ ಮಾಸ್ಟರ್ ತರಬೇತಿ ಹೊಂದಿರುವ ಹಾಗೂ 20 ಮಂದಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಸೆ.13ರಿಂದ 19ರವರೆಗೆ ಆಶಾ ಕಾರ್‍ಯಕರ್ತೆಯರ ಮೂಲಕ ಸಮೀಕ್ಷೆ ನಮೂನೆ ಅರ್ಜಿಯನ್ನು ಆಯಾ ಕುಟುಂಬಗಳಿಗೆ ತಲುಪಿಸಲಾಗುವುದು, ಕುಟುಂಬ ವಿದ್ಯಾವಂತರು ಓದಿ ಕುಟುಂಬದ ಎಲ್ಲಾ ಸದಸ್ಯರಿಗೆ ತಾವು ನೀಡಬೇಕಾಗಿರುವ ಮಾಹಿತಿ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಆಧಾರ್ ಸಂಖ್ಯೆ ಕಡ್ಡಾಯವಾಗಿ ನಮೋದಿಸಬೇಕಾಗಿರುವುದರಿಂದ ಆಧಾರ್ ಇಲ್ಲದವರು ತ್ವರಿತವಾಗಿ ಆಧಾರ್ ನೋಂದಣಿ ಮಾಡಿಸಿಕೊಳ್ಳಬೇಕು. ಆಧಾರ್‌ಗೆ ಮೊಬೈಲ್ ಸಂಖ್ಯೆ ಸೇರಿಸಿಕೊಳ್ಳಬೇಕು. ಅರ್ಜಿಯಲ್ಲಿ ಸುಮಾರು 60 ಪ್ರಬೇದ ಮಾಹಿತಿಯ ಪ್ರಶ್ನೆಗಳಿದ್ದು ಎಲ್ಲಾ ಮಾಹಿತಿ ನೀಡಬೇಕು ಎಂದರು.ಸಭೆಗೆ ತಡವಾಗಿ ಆಗಮಿಸಿದ ಸಿಬ್ಬಂದಿಗೆ ತಹಸೀಲ್ದಾರ್ ತರಾಟೆಗೆ ತೆಗೆದುಕೊಂಡು, ಯಾವುದೇ ಸಭೆ ನಡೆದರೂ ಅಧಿಕಾರಿಗಳು, ಸಿಬ್ಬಂದಿ ನಿಗಧಿತ ಸಮಯಕ್ಕೆ ಆಗಮಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್, ಉಪತಹಸೀಲ್ದಾರ್ ಮೋಹನ್, ಬಿಇಒ ಧರ್ಮಶೆಟ್ಟಿ, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಕಣ್ಯಾಧಿಕಾರಿ ಸಿ.ನಂದಕುಮಾರ್, ವಿಸ್ತರ್ಣಾಧಿಕಾರಿ ನಿಂಗೇಗೌಡ ಸೇರಿದಂತೆ ಹಲವರು ಇದ್ದರು.