ನಾಲ್ಕುವರೆ ಲಕ್ಷ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

KannadaprabhaNewsNetwork |  
Published : Aug 27, 2025, 01:00 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 4.5 ಲಕ್ಷ ಕುಟುಂಬಗಳಿದ್ದು, ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಬೇಕು, ಯಾವುದೇ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಎಲ್ಲ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ವಾಸದ ಮನೆಗಳ ಆರ್ ಆರ್ ಮೀಟರ್ ಆಧಾರದ ಮೆಲೆ ಮನೆಗಳನ್ನು ಗುರುತಿಸಿ, ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ ಎಂದರು.

ಮೊದಲ ಹಂತದಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ, ಈ ಕುರಿತು ಮನೆಗಳಿಗೆ ಜಿಯೋ ಟ್ಯಾಗಿಂಗ್‍ಗಾಗಿ ಸ್ಟಿಕರ್ ಗಳನ್ನ ಅಳವಡಿಸುವ ಕಾರ್ಯ ಆರಂಭವಾಗಿದೆ. ವಿದ್ಯುತ್ ಮೀಟರ್ ರೀಡರ್ ಸಿಬ್ಬಂದಿ ಆರ್‍ಆರ್ ನಂಬರ್ ಹೊಂದಿರುವ ಕುಟುಂಬಗಳ ಪಟ್ಟಿ ಮಾಡುವರು. ಹೀಗಾಗಿ ಸಮೀಕ್ಷೆ ಕಾರ್ಯ ಮುಗಿಯುವವರೆಗೂ ಸಾರ್ವಜನಿಕರು ತಮ್ಮ ಮನೆಗಳಿಗೆ ಅಂಟಿಸಲಾಗುವ ಜಿಯೋ ಟ್ಯಾಗಿಂಗ್ ಸ್ಟಿಕರ್ ಅನ್ನು ತೆಗೆದುಹಾಕಬಾರದು ಎಂದರು.

ಅನಧಿಕೃತ ಕಟ್ಟಡಗಳು, ಸ್ಲಂ ಗಳು ಮತ್ತಿತರ ಪ್ರದೇಶಗಳಲ್ಲಿ ಆರ್‍ಆರ್ ನಂಬರ್ ಹೊಂದಿರದ ಸುಮಾರು 60 ರಿಂದ 70 ಸಾವಿರ ಕುಟುಂಬಗಳು ಜಿಲ್ಲೆಯಲ್ಲಿವೆ. ಅಂತಹವರ ಕುಟುಂಬಗಳೂ ಕೂಡ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಅಂತಹ ಕುಟುಂಬಗಳ ಪ್ರತ್ಯೇಕ ಪಟ್ಟಿಯನ್ನು ಆಯಾ ನಗರ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಾಡಿಕೊಳ್ಳಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ದಸರಾ ರಜೆ ಅವಧಿಯಲ್ಲಿ ನಡೆಸಲಾಗುತ್ತಿದ್ದು, ಸೆಪ್ಟಂಬರ್ 22 ರಿಂದ ಕುಟುಂಬಗಳ ಸಮೀಕ್ಷೆ ಆರಂಭಗೊಂಡು ಅ.7 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು ಶಿಕ್ಷಕರೇ ಕೈಗೊಳ್ಳಬೇಕಿರುತ್ತದೆ. ಸಮೀಕ್ಷೆಗಾಗಿಯೇ ವಿಶೇಷವಾದ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಸುಮಾರು 65 ಪ್ರಶ್ನಾವಳಿಗಳಿರುತ್ತವೆ. ಕುಟುಂಬಗಳಿಂದ ಮಾಹಿತಿ ಪಡೆದು, ಈ ಆ್ಯಪ್ ಮೂಲಕವೇ ಸಮೀಕ್ಷೆ ನಡೆಸಬೇಕು. ಜಿಲ್ಲೆಯಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ, ಪ್ರತಿ ಸಮೀಕ್ಷೆದಾರರು ಕನಿಷ್ಟ 80 ರಿಂದ 100 ಮನೆಗಳಿಗೆ ಖುದ್ದು ಭೇಟಿ ಮಾಡಿ ಸಮೀಕ್ಷೆ ಮಾಡಬೇಕಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಲಭ್ಯವಿರುವ ಒಟ್ಟು 6 ಸಾವಿರ ಶಿಕ್ಷಕರ ಹೆಸರು, ಕೆಜಿಐಡಿ ನಂಬರ್, ಮೊಬೈಲ್ ನಂಬರ್ ಸಹಿತ ವಿವರವನ್ನು ಪಂಚಾಯತಿವಾರು ಹಾಗೂ ಕ್ಲಸ್ಟರ್ ವಾರು ಮಾಡಿ ಸಲ್ಲಿಸಬೇಕು, 50 ಸಮೀಕ್ಷೆದಾರರಿಗೆ ಒಬ್ಬರು ಮಾಸ್ಟರ್ ಟ್ರೈನರ್ ಕಂ ಮೇಲ್ವಿಚಾರಕರನ್ನು ನೇಮಿಸಬೇಕು ಎಂದು ಡಿಡಿಪಿಐ ಮಂಜುನಾಥ್ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಮೀಕ್ಷೆ ಕಾರ್ಯಕ್ಕೆ ಸಹಕಾರ ತೋರದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಜರುಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸಂಬಂಧ ಸರ್ಕಾರದಿಂದ ನೀಡಲಾಗುವ ಸೂಚನೆಗಳು, ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳಿಗೆ ನಿರಂತರವಾಗಿ ತಲುಪಿಸುವ ಕಾರ್ಯ ಆಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಡಿಡಿಪಿಐ ಮಂಜುನಾಥ್, ಡಿಯುಡಿಸಿ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ಬೆಸ್ಕಾಂ ಚಿತ್ರದುರ್ಗ ವಿಭಾಗದ ಕಾರ್ಯಪಾಲಕ ಅಭಿಯಂತರ ತಿಮ್ಮರಾಯ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?