ಕನ್ನಡಪ್ರಭ ವಾರ್ತೆ ಶಿರಾ ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕಿನ ಚುನಾವಣೆಯ ಬಗ್ಗೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಹಾಗೂ ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಡಿರುವ ಅಪಾದನೆಗಳು ಸತ್ಯಕ್ಕೆ ದೂರವಾದವು ಹಾಗೂ ಸೋಲಿನ ಹತಾಶೆಯಿಂದ ಮಾಡಿರುವ ಆರೋಪಗಳು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್.ಮೂರ್ತಿ ಹೇಳಿದರು. ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರು ಸಹಕಾರಿ ಕ್ಷೇತ್ರದಲ್ಲಿ ಅನಭಿಷಿಕ್ತ ದೊರೆಯಾಗಿದ್ದಾರೆ. ಅವರು ಪ್ರಾಮಾಣಿಕರಾಗಿರುವುದರಿಂದ ಡಿಸಿಸಿ ಬ್ಯಾಂಕಿಗೆ ಸುಮಾರು ೨೦೦೦ ಕೋಟಿ ರು. ಠೇವಣಿಯನ್ನು ರೈತರು ಇಟ್ಟಿದ್ದಾರೆ. ಕೆ.ಎನ್.ರಾಜಣ್ಣ ಎಂದರೆ ಡಿಸಿಸಿ ಬ್ಯಾಂಕ್, ಡಿಸಿಸಿ ಬ್ಯಾಂಕ್ ಎಂದರೆ ರಾಜಣ್ಣ ಅಂತಹವರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸೋತ ಎಸ್.ಆರ್.ಗೌಡ ಅವರು ಹತಾಶರಾಗಿ ಮಾತನಾಡಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡರು ಮೊದಲು ತಾಲೂಕಿನ ರೈತರ ಹಿತ ಕಾಪಾಡಲಿ. ಡಿಸಿಸಿ ಬ್ಯಾಂಕಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿ? ಡಿಸಿಸಿ ಬ್ಯಾಂಕ್ ಚುನಾವಣೆಯ ಬಗ್ಗೆ ಏನೇ ಸಮಸ್ಯೆಗಳು, ದೂರುಗಳು ಇದ್ದರೂ ನೀವುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಬಹುದಿತ್ತು. ಈಗ ಸೋತಿದ್ದೀರಿ ಎಂದುಆಪಾದನೆ ಮಾಡುವುದು ಸರಿಯಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಜಿ.ಎಸ್.ರವಿ ಅವರಿಗೆ ಮೂರು ಪಕ್ಷದ ಪ್ರತಿನಿಧಿಗಳು ಮತ ನೀಡಿದ್ದಾರೆ. ಅವರು ಪ್ರಜಾಪ್ರಭುತ್ವ ಅಡಿಯಲ್ಲಿಯೇ ಗೆಲುವು ಸಾಧಿಸಿದ್ದಾರೆ ಎಂದರು. ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಜಿ ಎಸ್ ರವಿ ಮಾತನಾಡಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಅವರು ಕೆ.ಎನ್.ರಾಜಣ್ಣ ಅವರ ಕಪಿ ಮುಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಇದೆ ಎಂದು ಆರೋಪ ಮಾಡಿದ್ದು, ಈ ಮಾತನ್ನು ಎಸ್‌ಆರ್ ಗೌಡ ಅವರು ವಾಪಸ್ಸು ಪಡೆಯಬೇಕು ಹಾಗೂ ಜಿಲ್ಲೆಯ ರೈತರ ಕ್ಷಮೆ ಕೇಳಬೇಕು. ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳ ಹಿಂದೆಯೇ ಮತದಾರರ ಪಟ್ಟಿ ತಯಾರಾಗಿದೆ. ಈ ಬಗ್ಗೆ ನಿಮ್ಮದೇನಾದರೂ ಅನುಮಾನಗಳಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಚುನಾವಣೆಯಲ್ಲಿ ಸೋತಿದ್ದಕ್ಕೆ ಕುಹಕ ರಾಜಕಾರಣ ಮಾಡುತ್ತಿದ್ದೀರಿ. ಡಿಸಿಸಿ ಬ್ಯಾಂಕ್‌ನಿಂದ ಮಧುಗಿರಿ ತಾಲೂಕು ಬಿಟ್ಟರೆ ಶಿರಾ ತಾಲೂಕಿಗೆ ೧೧೦ ಕೋಟಿ ರು. ಸಾಲ ನೀಡಿದ್ದೇವೆ ಎಂದ ಅವರು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ನೀವು ಹೋರಾಟ ಮಾಡುವ ಬದಲು ಕಾನೂನು ತಿಳಿದುಕೊಳ್ಳಿ. ನಾವು ಎಲ್ಲಾ ರೈತರಿಗೂ ಸಾಲ ಕೊಟ್ಟಿದ್ದೇವೆ ಎಂದರು. ಮಾಜಿ ಜಿ.ಪಂ. ಸದಸ್ಯ ಸಿ ಆರ್ ಉಮೇಶ್ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಕೆ.ಎನ್.ರಾಜಣ್ಣ ಅವರ ಕೊಡುಗೆ ಅಪಾರವಾಗಿದೆ. ಅವರ ಬಗ್ಗೆ ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದುದು, ರಾಜಣ್ಣ ಅವರ ಬಗ್ಗೆ ಮಾತನಾಡಿರುವುದು ಖಂಡನೀಯ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತ ಪಡೆದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದನ್ನು ನಾವೆಲ್ಲರೂ ಸ್ವೀಕರಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಮಚಂದ್ರಯ್ಯ, ಮುಕುಂದಪ್ಪ, ಚಿನ್ನಪ್ಪ, ಬೆಜ್ಜಿಹಳ್ಳಿ ರಾಮಚಂದ್ರಪ್ಪ, ಬೇವಿನಹಳ್ಳಿ ಸುದರ್ಶನ್, ಎಂಸಿ ರಾಘವೇಂದ್ರ ಗೌಡ, ಚಿದಾನಂದ್, ನಾಗಣ್ಣ, ಮಹಾದೇವಿ, ಮಂಜಣ್ಣ, ಅಜಯ್, ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.