ಕೊಪ್ಪಳದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಚಾಲನೆ

KannadaprabhaNewsNetwork |  
Published : Sep 23, 2025, 01:04 AM IST
22ಕೆಪಿಎಲ್22 ಕೊಪ್ಪಳ ನಗರದ ಬೃಂದಾವನ (ಕವಲೂರು) ಏರಿಯಾ ವಾರ್ಡ್ ನಂಬರ್ 29 ರ ಶಶೀಧರ್ ಸವಡಿ ಅವರ ಮನೆಯಿಂದ ಕರ್ನಾಟಕ ರಾಜ್ಯ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ ಮೊಬೈಲ್ ಆ್ಯಪ್ ಮೂಲಕ ಚಾಲನೆ ನೀಡಿ | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ ಸೋಮವಾರ ಕೊಪ್ಪಳ ನಗರದಲ್ಲಿ ಮೊಬೈಲ್ ಆ್ಯಪ್ ಮೂಲಕ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಚಾಲನೆ ನೀಡಿದರು.

ಕೊಪ್ಪಳ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗಾಗಿ ಗಣತಿದಾರರು ತಮ್ಮ ಮನೆಗೆ ಬಂದಾಗ ಕುಟುಂಬದ ಮುಖ್ಯಸ್ಥರು ಎಲ್ಲ ಮಾಹಿತಿ ನೀಡಿ ಸಮೀಕ್ಷೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಹೇಳಿದರು.

ಅವರು ಸೋಮವಾರ ಕೊಪ್ಪಳ ನಗರದ ಬೃಂದಾವನ (ಕವಲೂರು) ಏರಿಯಾ ವಾರ್ಡ್ ನಂಬರ್ 29ರ ಶಶಿಧರ ಸವಡಿ ಅವರ ಮನೆಯಿಂದ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ ಮೊಬೈಲ್ ಆ್ಯಪ್ ಮೂಲಕ ಚಾಲನೆ ನೀಡಿದ ಆನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯಲ್ಲಿ ಸೆ. 22ರಿಂದ ಅ. 7ರ ವರೆಗೆ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 2969 ಗಣಿತಿದಾರರನ್ನು ಈಗಾಗಲೇ ನೇಮಕ ಮಾಡಿ, ಅವರಿಗೆ ತರಬೇತಿ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಅಂದಾಜು 3,55,361 ಮನೆಗಳಿವೆ. ಈಗಾಗಲೇ 3,21,980 ಮನೆಗಳಿಗೆ ಜೆಸ್ಕಾಂ ಸಿಬ್ಬಂದಿ ಮೂಲಕ ಜಿಯೋ ಟ್ಯಾಗ್ ಇನ್ ಮಾಡಲಾಗಿದೆ. ಇಂದಿನಿಂದ ಸಮೀಕ್ಷೆ ಪ್ರಾರಂಭವಾಗಿದೆ ಎಂದರು.

ಗಣತಿದಾರರು ಈ ಸಮೀಕ್ಷೆಯಲ್ಲಿ ವೈಯಕ್ತಿಕವಾಗಿ 30 ಪ್ರಶ್ನೆ ಮತ್ತು ಕುಟುಂಬಕ್ಕೆ 30 ಸೇರಿ ಒಟ್ಟು 60 ಪ್ರಶ್ನೆಗಳನ್ನು ಪ್ರತಿ ಮನೆಯಲ್ಲಿ ಕೇಳಿ, ದಾಖಲಿಸುವರು. ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರು ಮುಖ್ಯವಾಗಿ ಆಧಾರ್ ಕಾರ್ಡ್, ಎಪಿಕ್ ಕಾರ್ಡ್, ರೇಶನ್ ಕಾರ್ಡ್ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹೊಂದಿರಬೇಕು. ಇದರ ಜತೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, 371(ಜೆ) ಪ್ರಮಾಣಪತ್ರ, ಕೌಶಲ್ಯ ಪ್ರಮಾಣಪತ್ರ ಅಥವಾ ಇನ್ನಿತರ ಪ್ರಮಾಣ ಪತ್ರಗಳಿದ್ದಲ್ಲಿ, ಅವುಗಳನ್ನು ಮಾಹಿತಿಗಾಗಿ ಇಟ್ಟುಕೊಳ್ಳಬಹುದಾಗಿದೆ. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಗಣತಿ ಮಾಡುವಂತೆ ಹಿಂದುಳಿದ ವರ್ಗಗಳ ಆಯೋಗ ನಿರ್ದೇಶನ ನೀಡಿದೆ. ಯಾವುದೇ ಸಮಸ್ಯೆ ಉಂಟಾದಲ್ಲಿ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಸಾರ್ವಜನಿಕರು ಈ ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾ. ಮಹೇಶ್ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ ಹೊಸಮನಿ, ಕೊಪ್ಪಳ ತಹಸೀಲ್ದಾರ್‌ ವಿಠ್ಠಲ ಚೌಗಲಾ, ಗಣತಿದಾರರಾದ ಪೂರ್ಣಿಮಾ ಇತರರು ಉಪಸ್ಥಿತರಿದ್ದರು.

ಕೊಪ್ಪಳ ಜಿಲ್ಲೆಯಾದ್ಯಂತ ಸಮೀಕ್ಷೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಕೊಪ್ಪಳ ಜಿಲ್ಲೆಯಾದ್ಯಂತ ಪ್ರಾರಂಭಿಸಲಾಗಿದ್ದು, ಗಂಗಾವತಿ, ಕನಕಗಿರಿ, ಕಾರಟಗಿ, ಕೊಪ್ಪಳ, ಕುಕನೂರು, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳು ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ 3,55,361 ಕುಟುಂಬಗಳಿವೆ. ಈ ಸಮೀಕ್ಷೆಗಾಗಿ 2969 ಬ್ಲಾಕ್‌ಗಳನ್ನು ಗುರುತಿಸಿದ್ದು, ಪ್ರತಿಯೊಂದು ಬ್ಲಾಕ್‌ಗೆ ಒಬ್ಬರಂತೆ 2969 ಗಣತಿದಾರರನ್ನು ನೇಮಕ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಹಕ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ
ಆಂಧ್ರ ಗಡಿಯಲ್ಲಿ ಕನ್ನಡ ಶಾಲಾರಂಭಕ್ಕೆ ನೆರವು ನೀಡಿದ್ದ ಚನ್ನಬಸವ ಶಿವಯೋಗಿ