ಕೊಪ್ಪಳ: ಕಳೆದೆರಡು ವರ್ಷಗಳಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡದ ರಾಜ್ಯ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಮಾನ್ಯತೆಯೇ ಇಲ್ಲದ ಜಾತಿ ಸಮೀಕ್ಷೆ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಕಿಡಿಕಾರಿದ್ದಾರೆ.
ಈ ಹಿಂದೆಯೇ ಕಾಂತರಾಜ ವರದಿ ಅನ್ವಯ ಜಾರಿ ಮಾಡಲು ಮುಂದಾಗಿದ್ದರು. ಆನಂತರ ಅದನ್ನು ಕೈಬಿಟ್ಟು ಮತ್ತೆ ಹೊಸ ನಾಟಕ ಪ್ರಾರಂಭಿಸಿದ್ದಾರೆ. ಬ್ರಾಹ್ಮಣ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದೆಲ್ಲ ಸೇರಿಸಿದ್ದರು. ಜನರು ರೊಚ್ಚಿಗೆದ್ದ ಮೇಲೆ ಅದನ್ನು ಕೈಬಿಟ್ಟರು. ಈಗಲೂ ನಡೆಯುತ್ತಿರುವ ಜಾತಿ ಸಮೀಕ್ಷೆಗೆ ನಮ್ಮ ಸಂಪೂರ್ಣ ವಿರೋಧವಿದೆ. ಸಮಾಜವನ್ನು ಒಡೆದು ಯಾವ ಪುರುಷಾರ್ಥಕ್ಕೆ ಸಮೀಕ್ಷೆ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಹಿಂದೂ ಧರ್ಮ ಬರೆಸಿ: ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯ ವೇಳೆ ಧರ್ಮ ಕಾಲಂನಲ್ಲಿ ಹಿಂದೂ ಧರ್ಮ ಎಂದು ಹಾಗೂ ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಿ, ಉಳಿದಂತೆ ನಿಮ್ಮ ನಿಮ್ಮ ಉಪಜಾತಿ ಬರೆಸಿ ಎಂದರು.ಬರಿ ವೀರಶೈವ, ಬರಿ ಲಿಂಗಾಯತ ಎಂದು ಸಹ ಬರೆಸದೇ ವೀರಶೈವ ಲಿಂಗಾಯತ ಎಂದು ಬರೆಸಿ. ರಡ್ಡಿ ಸಮಾಜ ಬಾಂಧವರು ವೀರಶೈವ ಲಿಂಗಾಯತ ರಡ್ಡಿ ಎಂದು ಬರೆಯಿಸಿ ಎಂದು ಸಹ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜೀ. ವೀರಪ್ಪ ಕೆಸರಟ್ಟಿ, ಶರಣು ತಳ್ಳಿಕೇರಿ ಇದ್ದರು.
ತಮಗೆ ಜಾತಿಯೇ ಇಲ್ಲ, ನಾನು ಯಾವುದೇ ಧರ್ಮ ಬರೆಸುವುದಿಲ್ಲ, ಲಿಂಗಾಯತ ಎನ್ನುವುದು ಧರ್ಮವೇ ಅಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಂಡಿದ್ದರಲ್ಲ? ಎಂದು ಪ್ರಶ್ನೆ ಮಾಡಿದರು.