ಒಗಟ್ಟಿನಿಂದ ಮಾತ್ರವೇ ಸಾಮಾಜಿಕ, ರಾಜಕೀಯ ಸ್ಥಾನಮಾನ ಲಭ್ಯ: ಷಡಕ್ಷರಿಮುನಿ ಸ್ವಾಮಿ

KannadaprabhaNewsNetwork | Published : Feb 7, 2024 1:46 AM

ಸಾರಾಂಶ

ತಾಲೂಕಿನಲ್ಲಿ ಮಾದಿಗ ಸಮಾಜವು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ ಕೆಲವರು ವೈಯಕ್ತಿಕ ವಿಚಾರಗಳಿಂದ ಸಮಾಜ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರು ಪಕ್ಷಬೇಧ ಮರೆತು ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಟಿಕೆಟ್ ಪಡೆದು ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸ ಪಡೆದು ಗೆಲ್ಲುವ ಪ್ರಯತ್ನ ಮಾಡಬೇಕು.

ಕನ್ನಡಪ್ರಭ ವಾರ್ತೆ ಜಗಳೂರು

ಮಾದಿಗ ಸಮಾಜವು ಒಗಟ್ಟಿನ ಮಂತ್ರ ಘೋಷಿಸಿದರೆ ಮಾತ್ರ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಪಡೆಯಲು ಸಾಧ್ಯ ಎಂದು ಕೋಡಿಹಳ್ಳಿ ಆದಿ ಜಾಂಬವ ಬೃಹನ್ಮಠದ ಷಡಕ್ಷರಿಮುನಿ ಸ್ವಾಮಿ ಹೇಳಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆದಿ ಜಾಂಬವ ಮಾದಿಗ ಸಮಾಜ ತಾಲೂಕು ಘಟಕದಿಂದ ಶಾಸಕ ಬಿ.ದೇವೇಂದ್ರಪ್ಪರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ತಾಲೂಕಿನಲ್ಲಿ ಮಾದಿಗ ಸಮಾಜವು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ ಕೆಲವರು ವೈಯಕ್ತಿಕ ವಿಚಾರಗಳಿಂದ ಸಮಾಜ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರು ಪಕ್ಷಬೇಧ ಮರೆತು ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಟಿಕೆಟ್ ಪಡೆದು ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸ ಪಡೆದು ಗೆಲ್ಲುವ ಪ್ರಯತ್ನ ಮಾಡಬೇಕು ಎಂದರು.

ಅಂಬೇಡ್ಕರ್ ನಿಧಿ ಸಂಗ್ರಹಣೆ

ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿ, ಈ ಬಾರಿ ಶಿವರಾತ್ರಿಯ ತಾಲೂಕಿನ ಎಲ್ಲಾ ಮಾದಿಗ ಸಮಾಜ ಸೇರಿ ಎಲ್ಲರೂ ಒಗ್ಗೂಡಿ ಅಂಬೇಡ್ಕರ್ ರಾತ್ರಿಯಾಗಿ ಜಾಗರಣೆ ಮಾಡಿ ವಿಶೇಷವಾಗಿ ಆಚರಿಸಲಾಗುವುದು. ಎಸ್ಸಿ, ಎಸ್ಟಿ ಸಮುದಾಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನಾನು ಇರುವವರೆಗೂ ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗುತ್ತೇನೆ ಎಂದರು. ತಾಲೂಕಿನಲ್ಲಿ ಅಂಬೇಡ್ಕರ್ ನಿಧಿ ಸಂಗ್ರಹಣೆ ಪ್ರಾರಂಭಿಸಲಾಗುವುದು. ಈ ಹಣದಿಂದ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರಿಗೆ, ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ವೇಳೆ ಎಲ್ಲರಿಂದ ಸಂಗ್ರಹಿಸಿದ ಒಟ್ಟು ಹಣ ₹೧೬ ಸಾವಿರ ಎಂದರು.

ಹಿರಿಯ ಮುಖಂಡ ಜಿ.ಎಚ್.ಶಂಭುಲಿಂಗಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷವಾದರೂ ಮಾದಿಗ ಸಮಾಜದ ಬದುಕು ಹಸನಾಗಿಲ್ಲ. ಎಸ್ಸಿಯ ೧೦೧ ಜಾತಿಗಳಲ್ಲಿ ಮಾದಿಗ ಸಮಾಜವು ಒಂದಾಗಿದೆ. ಆದರೆ ಮಾದಿಗ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕಿದೆ ಎಂದರು.

ನಗರದಲ್ಲಿ ಮೆರವಣಿಗೆ:

ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಶಾಸಕ ಬಿ.ದೇವೇಂದ್ರಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಅಂಬೇಡ್ಕರ್ ವೃತ್ತ, ತಾಲೂಕು ಕಚೇರಿ ರಸ್ತೆ ಮೂಲಕ ಅಂಬೇಡ್ಕರ್ ಭವನಕ್ಕೆ ಮೆರವಣಿಗೆ ಸಾಗಿತು. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಶಾಸಕರು, ಗಣ್ಯರು ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್‌, ಕೆ.ಪಿ.ಪಾಲಯ್ಯ, ಕೀರ್ತಿಕುಮಾರ್, ಕಲ್ಲೇಶ್ ರಾಜ್ ಪಟೇಲ್, ಪ.ಪಂ ಸದಸ್ಯರಾದ ದೇವರಾಜ್, ನಿರ್ಮಲಕುಮಾರಿ, ಮುಖಂಡರಾದ ಶಿವಕುಮಾರ್, ಸಿ.ತಿಪ್ಪೇಸ್ವಾಮಿ, ಮರಿಯಪ್ಪ, ಮಾರುತಿ, ಬಿ. ಮಹೇಶ್ವರಪ್ಪ, ಬಂಗಾರಪ್ಪ, ವೆಂಕಟೇಶ, ರುದ್ರೇಶ್, ಮಲೆಮಾಚಿಕೆರೆ ಸತೀಶ್, ಪೂಜಾರಿ ಸಿದ್ದಪ್ಪ, ಹಟ್ಟಿ ತಿಪ್ಪೇಸ್ವಾಮಿ ಸೇರಿ ಮತ್ತಿತರರಿದ್ದರು.

Share this article