ಜನಪದ ನೀತಿ ಪಾಠಗಳಿಂದ ಸಮಾಜ ಜಾಗೃತಿ

KannadaprabhaNewsNetwork |  
Published : Nov 10, 2024, 01:37 AM ISTUpdated : Nov 10, 2024, 01:38 AM IST
ಕಾರ್ಯಕ್ರಮವನ್ನು ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ ಸಂಸ್ಕ್ರತಿ, ಸಂಪ್ರದಾಯ ಕಟ್ಟಿಕೊಡುವಂತಹ ಶಕ್ತಿ ಜಾನಪದ ಕಲೆಗೆ ಇದೆ

ಗದಗ: ನಮ್ಮ ಪೂರ್ವಜರು ತಮ್ಮ ಕಾಯಕದೊಂದಿಗೆ ಜನಪದ ಹಾಡು ಹಾಡುತ್ತಿದ್ದರು. ಈ ಜನಪದಲ್ಲಿದ್ದ ಸಂಸ್ಕಾರಯುತ ನೀತಿ ಪಾಠಗಳು ಸಮಾಜವನ್ನು ಜಾಗೃತಿಗೊಳಿಸುತ್ತಿದ್ದವು. ಆದರೆ ಇಂದು ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಯಿಂದ ಕಾಯಕವಿಲ್ಲದೇ ಜನಪದ ಕಲೆ ಮರೆಯಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕರಣ್ಣ ಸಂಕಣ್ಣವರ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನುಲಿ ಚಂದಯ್ಯ ಜಾನಪದ ಕಲಾ ಮೇಳ ಹಮ್ಮಿಕೊಂಡ ಜನಪದ ವೈಭವ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೂರ್ವಜರು ಬಿತ್ತುವಾಗ, ರಾಶಿ ಮಾಡುವಾಗ, ಬೀಸುವಾಗ, ಕುಟ್ಟುವಾಗ ಹಾಡುತ್ತಾ ಚಟುವಟಿಕೆಯಿಂದ ಕಾಯಕ ನಿರತರಾಗುತ್ತಿದ್ದರು. ಈಗ ರಸ್ತೆಯಲ್ಲಿ ಯಂತ್ರದ ಮೂಲಕ ರಾಶಿ ಮಾಡುವಾಗ ಕಾಯಕವೇ ಇಲ್ಲದಾಗಿದ್ದು ಜಾನಪದ ಹಾಡು ಮರೆಯಾಗುತ್ತಿವೆ. ಈ ಸಾಹಿತ್ಯದಲ್ಲಿ ಮಕ್ಕಳಿಂದ ವೃದ್ಧರವರೆಗೂ ನೀತಿ ಪಾಠಗಳಿದ್ದು ವಿದ್ಯಾರ್ಥಿ ಜೀವನದಿಂದಲೇ ಜಾನಪದ ಕಲೆ ಕಲಿಯಬೇಕು ಎಂದರು.

ಜಂತ್ಲಿಶಿರೂರ ಗ್ರಾಮದ ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಉಪನ್ಯಾಸ ನೀಡಿ, ಜನಪದ ಕಲೆಯ ಕಲಾವಿದರಿಗೆ ವಿಜಯನಗರ ಸಾಮ್ರಾಜ್ಯದಲ್ಲಿಯೇ ಗೌರವವಿತ್ತು. ನಮ್ಮ ಸಂಸ್ಕ್ರತಿ, ಸಂಪ್ರದಾಯ ಕಟ್ಟಿಕೊಡುವಂತಹ ಶಕ್ತಿ ಜಾನಪದ ಕಲೆಗೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲಿನಿಂದ ದೂರವಿದ್ದು ಜನಪದ ಕಲೆಯತ್ತ ಗಮನ ಹರಿಸಿ ಎಂದು ತಿಳಿಸಿದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಗೀಗೀ ಪದ ಕಲಾವಿದ ಬಸವರಾಜ ಹಡಗಲಿ ಮಾತನಾಡಿ, ಸಂತ ಶರಣರು ತಮ್ಮ ಸಂತೋಷಕ್ಕಾಗಿ ವಚನ, ತತ್ವಪದ ರಚಿಸಿ ಹಾಡಿಲ್ಲ. ಈ ಸಮಾಜದ ಅಂಕುಡೊಂಕು ತಿದ್ದಲು ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕೇವಲ ತಾತ್ಕಾಲಿಕ ಖುಷಿ ಕೊಡುವ ಈಗಿನ ನವ್ಯ ಗೀತೆಗಳಿಗೆ ಮಾರು ಹೋಗದೇ ನಮ್ಮ ಸಂಸ್ಕ್ರತಿ ಬೆಳಗಿಸುವ ಗೀಗೀ ಪದ, ತತ್ವ ಪದ, ಜಾನಪದ ಪದ, ಶೋಬಾನ ಪದ, ಹಂತಿ ಪದಗಳನ್ನು ಕಲಿತು ಉಳಿಸಬೇಕಾಗಿದ್ದು, ಶಾಲಾ ಶಿಕ್ಷಣದಲ್ಲಿ ಜಾನಪದ ಪಠ್ಯ ಸೇರ್ಪಡಿಸಿದ್ದು ಸಂತಸ ತಂದಿದೆ ಎಂದರು.

ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಯ ವೈ.ಎಚ್. ತೆಕ್ಕಲಕೋಟಿ ಮಾತನಾಡಿದರು. ಜಾನಪದ ಅಕಾಡೆಮಿ ಪುರಸ್ಕೃತ ಬಸವರಾಜ ಹಡಗಲಿ ಅವರನ್ನು ಸನ್ಮಾನಿಸಲಾಯಿತು.

ಕಲಾವಿದ ಗೌಡಪ್ಪ ಬೊಮ್ಮಪ್ಪನವರ ಬಸನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಶಿಕ್ಷಕ ಅಶೋಕ ಕಳಸದ ಸ್ವಾಗತಿಸಿದರು. ಶಿಕ್ಷಕ ಎಸ್.ಎಚ್. ಶೆಟ್ಟಿನಾಯ್ಕರ ನಿರೂಪಿಸಿದರು. ನುಲಿ ಚಂದಯ್ಯ ಜಾನಪದ ಕಲಾ ಮೇಳದ ಅಧ್ಯಕ್ಷ ಶಿವು ಭಜಂತ್ರಿ ವಂದಿಸಿದರು.

PREV

Recommended Stories

ನಾಡಿದ್ದಿನಿಂದ ನೀವೂ ರಾಜಭವನ ವೀಕ್ಷಿಸಿ : ಉಚಿತ ಪ್ರವೇಶ
17ರಂದು ಬಿಜೆಪಿ ಮುಖಂಡರ ಜತೆ ಧರ್ಮಸ್ಥಳ ಭೇಟಿ: ಬಿವೈವಿ