ಕಾನೂನುಗಳನ್ನು ತಿಳಿದು ಜೀವಿಸಿದರೆ ಸಾಮಾಜಿಕ ಬದಲಾವಣೆ ಸಾಧ್ಯ

KannadaprabhaNewsNetwork |  
Published : Mar 12, 2025, 12:47 AM IST
11ಕೆಎಂಎನ್ ಡಿ20 | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬವೂ ಶಾಸನಾತ್ಮಕವಾಗಿ ಇರುವ ಕಾನೂನುಗಳನ್ನು ತಿಳಿದು ಜೀವಿಸಿದರೆ ದೇಶದಲ್ಲಿ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿದೆ ಎಂದು ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕಿ ಎಂ.ಬಿ.ಪ್ರಮೀಳಾ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬವೂ ಶಾಸನಾತ್ಮಕವಾಗಿ ಇರುವ ಕಾನೂನುಗಳನ್ನು ತಿಳಿದು ಜೀವಿಸಿದರೆ ದೇಶದಲ್ಲಿ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿದೆ ಎಂದು ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕಿ ಎಂ.ಬಿ.ಪ್ರಮೀಳಾ ಅಭಿಪ್ರಾಯಪಟ್ಟರು.

ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಅಡಿಯಲ್ಲಿ ''''''''ಸಮಾಜ ಶಾಸ್ತ್ರ ವಿಭಾಗ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿ'''''''' ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ರಾಜಕೀಯ ಸಮಾನತೆ ಸಿಕ್ಕಿದೆ. ಮಹಿಳೆಯರ ಸಬಲೀಕರಣಕ್ಕೆ ಶಾಸನಾತ್ಮಕವಾಗಿ ಕಾನೂನುಗಳು ಇವೆ ಎಂದರು.

ಮಹಿಳೆಯರಿಗೆ ಉತ್ತಮ ರೀತಿಯಲ್ಲಿ ಬದುಕುವ ಹಕ್ಕಿದೆ. ಆದರೆ, ಕಾನೂನಿನ ಬಗ್ಗೆ ಅರಿವು ಕಡಿಮೆ ಇದ್ದು, ಕಾನೂನುಗಳನ್ನು ಅರಿತುಕೊಂಡಲ್ಲಿ ಮತ್ತಷ್ಟು ಶಕ್ತಿ ದೊರಕಲಿದೆ. ಹಕ್ಕು, ಅಧಿಕಾರಗಳನ್ನು ಸದ್ಬಳಕೆ ಮಾಡಿಕೊಳ್ಳುವ ಭರದಲ್ಲಿ ಸ್ವೆಚ್ಛಾಚಾರಕ್ಕೆ ಅವಕಾಶ ಕೊಡದಿರಿ ಎಂದು ಕಿವಿಮಾತು ಹೇಳಿದರು.

ನಗರ, ಪಟ್ಟಣಗಳ ಜೊತೆಗೆ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಮಹಿಳೆಯರು ಸಹ ಹಲವು ಸ್ವ ಉದ್ಯೋಗ ಚಟುವಟಿಕೆಗಳ ಮೂಲಕ ಸ್ವಾವಲಂಬಿ ಜೀವನ ನಡೆಸಲು ಮುಂದಾಗಿರುವುದು ಶ್ಲಾಘನೀಯ. ಮಹಿಳೆಯರ ವಿಶಿಷ್ಟ ಸಾಮರ್ಥ್ಯಗಳನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟು, ಸಮಾಜದ ಮುನ್ನೆಲೆಗೆ ತರುವ ಕೆಲಸ ಮಾಡಬೇಕಿದೆ ಎಂದರು.

ಒಂದು ರಾಷ್ಟ್ರದ ಅಭಿವೃದ್ಧಿಗೆ ಪುರುಷ ಮತ್ತು ಮಹಿಳೆಯರು ರಥದ ಎರಡು ಚಕ್ರಗಳಿದ್ದಂತೆ. ಒಂದು ಚಕ್ರವಿಲ್ಲದೇ ರಥ ನಿರ್ದಿಷ್ಟ ಗುರಿ ತಲುಪಲಾರದು. ಅದೇ ರೀತಿ ಯಾವುದೇ ರಂಗದಲ್ಲಿ ಗುರಿ ಮುಟ್ಟುವ ಪ್ರಯತ್ನ ಮಾಡದೇ ಹೋದರೆ ದೇಶದ ಅಭಿವೃದ್ಧಿಯ ಕನಸುಗಳು ಕೈಗೂಡಲಾರವು ಎಂದು ತಿಳಿಸಿದರು.

ಪ್ರಾಂಶುಪಾಲ ಆಲಂಗೂರು ಮಂಜುನಾಥ್, ಪ್ರಾಧ್ಯಾಪಕರಾದ ಸೀಮಾ ಕೌಸರ್, ಕಾರ್ಯಕ್ರಮ ಸಂಯೋಜಕ ಸುಧಾ ಬಿದರಿ, ಡಿ.ಕೆ.ಶಿವರಾಮು, ಉಪನ್ಯಾಸಕರಾದ ಶಂಕರೇಗೌಡ, ಮಹೇಶ್ ಬಾಬು, ತಾರಾ ಜಯಲಕ್ಷ್ಮೀ, ಗುರು ಪ್ರಸಾದ್, ಅಧೀಕ್ಷಕ ಕುಮಾರಸ್ವಾಮಿ, ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ